Advertisement

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

10:41 PM Sep 27, 2024 | Team Udayavani |

ಉಡುಪಿ: ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ನಿರಂತರ ಕಾಳಜಿಯನ್ನು ವೈದ್ಯರು ಹಾಗೂ ಸಿಬಂದಿ ಮಾಡಿದ್ದಲ್ಲಿ ಮಾತ್ರ ತಾಯಿ ಮರಣ ಪ್ರಮಾಣವನ್ನು ತಡೆಗಟ್ಟಿ ಶೂನ್ಯಗೊಳಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇವುಗಳ ಅನುಷ್ಠಾನವನ್ನು ಸರಕಾರದ ಮಾರ್ಗಸೂಚಿ ಅನ್ವಯ ನಿಗದಿತ ಕಾಲಾವಧಿಯಲ್ಲಿ ಕಾಲಕಾಲಕ್ಕೆ ಕೈಗೊಂಡು ಜನರ ಆರೋಗ್ಯ ಸುಧಾರಣೆಗೆ ಮುಂದಾಗಬೇಕು ಎಂದರು.

ಆರೋಗ್ಯ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ಇವುಗಳನ್ನು ಸಂಗ್ರಹಿಸುವ ಏಜೆನ್ಸಿಗಳು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ಅಲ್ಲದೆ ಔಷಧ ಬಾಟಲ್‌ಗ‌ಳು, ಡೈಪರ್‌ಗಳನ್ನು ಎಲ್ಲೆಂದರಲ್ಲಿ ಎಸೆದಲ್ಲಿ ನದಿಗೆ ಸೇರಿ ನೀರಿನ ಮಾಲಿನ್ಯ ಉಂಟಾಗುತ್ತದೆ. ಇವುಗಳ ನಿಯಂತ್ರಣಕ್ಕೆ ನಿಗಾ ವಹಿಸಬೇಕು.

ಜನಸಾಮಾನ್ಯರು ಸಹ ತಮ್ಮ ಮನೆಯಲ್ಲಿ ಉಪಯೋಗಿಸಿದ ಸಿರಿಂಜ್‌ಗಳು ಮತ್ತಿತರ ವೈದ್ಯಕೀಯ ಉಪಕರಣಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಲು ಅರಿವು ಮೂಡಿಸುವುದು ಸೂಕ್ತ ಎಂದರು.

Advertisement

ಕೆ.ಪಿ.ಎಂ.ಇ. ಅಡಿಯಲ್ಲಿ ಅನುಮತಿ ಪಡೆದ ಕ್ಲಿನಿಕ್‌ಗಳು ಹಾಗೂ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ವೆಚ್ಚದ ದರಪಟ್ಟಿಯನ್ನು ಹಾಗೂ ವೈದ್ಯರ ಮೇಲಿನ ಹಲ್ಲೆ ಕುರಿತು ಜಾರಿಗೆ ತಂದಿರುವ ಕಾನೂನು ಬಗ್ಗೆ ಎದ್ದು ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ವೈದ್ಯಾಧಿಕಾರಿಗಳು ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ಮಾಡಬೇಕು ಎಂದರು.

ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆಯಂತಹ ಚಟುವಟಿಕೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಸಮಿತಿ ಸದಸ್ಯರು ಅನಿರೀಕ್ಷಿತವಾಗಿ ನಿರಂತರ ಭೇಟಿ ನೀಡಿ ಪರಿಶೀಲನೆ ಮಾಡ ಬೇಕು. 5 ತಿಂಗಳಲ್ಲಿ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 1015 ಹೆಣ್ಣು ಮಕ್ಕಳ ಜನನವಾಗಿದೆ ಎಂದರು.

ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಕಾರ್ಯಸನ್ನದ್ಧರಾಗಬೇಕು. ಬಿಸಿಜಿ ಲಸಿಕೆಗೆ ಜಿಲ್ಲೆಯಲ್ಲಿ 45,857 ನೋಂದಣಿ ಮಾಡಿಸಿದ್ದು, ಲಸಿಕೆ ಜಿಲ್ಲೆಗೆ ಸರಬರಾಜು ಆದ ತತ್‌ಕ್ಷಣ ನೀಡಲು ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಐ.ಪಿ. ಗಡಾದ್‌, ಜಿಲ್ಲಾ ಸರ್ಜನ್‌ ಡಾ| ಅಶೋಕ್‌, ಪೌರಾಯುಕ್ತ ರಾಯಪ್ಪ, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮರಾವ್‌, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ| ಲತಾ ನಾಯಕ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಜೋತ್ಸಾ$° ಬಿ.ಕೆ., ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ನಾಗರತ್ನಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next