ರಾಜ್ಯದ ಆರೋಗ್ಯ ಇಲಾಖೆ ವರ್ಷಗಳ ಹಿಂದೆ ನಗರ ಪ್ರದೇಶಗಳಲ್ಲಿ ಆರಂಭಿಸಿದ್ದ “ನಮ್ಮ ಕ್ಲಿನಿಕ್’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹಾಲಿ ಸರಕಾರ ನಮ್ಮ ಕ್ಲಿನಿಕ್ಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಮುಂದಾಗಿದೆ.
ಪ್ರತೀ ಜಿಲ್ಲೆಗೆ ಹೆಚ್ಚುವರಿಯಾಗಿ ನಮ್ಮ ಕ್ಲಿನಿಕ್ಗಳನ್ನು ಮಂಜೂರು ಮಾಡಲಾಗಿದ್ದು ಇವುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಆಯ್ದ ಬಸ್ ನಿಲ್ದಾಣಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆಯನ್ನು ಈಗಾಗಲೇ ನಡೆಸಿದ್ದು, ನಮ್ಮ ಕ್ಲಿನಿಕ್ಗಳನ್ನು ತೆರೆಯಲು ಇಲಾಖೆ ಸಿದ್ಧತೆ ಆರಂಭಿಸಿದೆ.
ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಿದ ಬಳಿಕ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ ಹೊರರೋಗಿಗಳ ವಿಭಾಗದ ಮೇಲಣ ಒತ್ತಡ ಕಡಿಮೆಯಾಗಿದೆ. ಅಷ್ಟು ಮಾತ್ರವಲ್ಲದೆ ನಮ್ಮ ಕ್ಲಿನಿಕ್ಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ಲಭಿಸುತ್ತಿರುವುದರಿಂದಾಗಿ ಸಹಜವಾಗಿ ನಮ್ಮ ಕ್ಲಿನಿಕ್ಗಳಿಗೆ ಹೆಚ್ಚಿನ ಬೇಡಿಕೆ ಬರುವಂತಾಗಿದೆ. ನಮ್ಮ ಕ್ಲಿನಿಕ್ಗಳ ಯಶಸ್ವಿ ಕಾರ್ಯನಿರ್ವಹಣೆಯನ್ನು ಮನಗಂಡ ಆರೋಗ್ಯ ಇಲಾಖೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್ಗಳನ್ನು ತೆರೆದು ಇದರ ಪ್ರಯೋಜನವನ್ನು ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸಲು ತೀರ್ಮಾನಿಸಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಅಧಿಕವಾಗಿರುವುದರಿಂದ ಇಲ್ಲಿ ನಮ್ಮ ಕ್ಲಿನಿಕ್ಗಳನ್ನು ತೆರೆಯುವುದರಿಂದ ಹೆಚ್ಚಿನ ಜನರು ಈ ಕೇಂದ್ರದ ಆರೋಗ್ಯ ಸೇವೆಯ ಸೌಲಭ್ಯವನ್ನು ಪಡೆಯಬಹುದು ಎಂಬ ಲೆಕ್ಕಾಚಾರ ಸರಕಾರದ್ದಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮತ್ತು ನಿಗಮದ ಸಿಬಂದಿಗೆ ತುರ್ತು ಸಂದರ್ಭದಲ್ಲಿ ನಮ್ಮ ಕ್ಲಿನಿಕ್ ಕೇಂದ್ರದ ಮೂಲಕ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ಮತ್ತು ವೈದ್ಯಕೀಯ ನೆರವು ಒದಗಿಸಲು ಸಾಧ್ಯವಾಗಲಿದೆ. ಜತೆಯಲ್ಲಿ ಪ್ರಯಾಣಿಕರಿಗೆ ಸಾಮಾನ್ಯ ಆರೋಗ್ಯ ತಪಾಸಣೆಗೂ ಇದು ಸಹಕಾರಿಯಾಗಲಿದೆ.
ರಾಜ್ಯ ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದ್ದು, ಜನಸಾಮಾನ್ಯರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಲಭಿಸುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಶ್ಲಾಘನೀಯ. ಸದ್ಯ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್ಗಳಲ್ಲಿ ಲಭಿಸುತ್ತಿರುವ ಆರೋಗ್ಯ ಸೇವೆ ಮತ್ತು ವೈದ್ಯಕೀಯ ನೆರವಿನ ಕಾರಣದಿಂದಾಗಿ ಇವುಗಳಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕೇಂದ್ರಗಳನ್ನು ತೆರೆಯುವ ಭರದಲ್ಲಿ ನಮ್ಮ ಕ್ಲಿನಿಕ್ಗಳಲ್ಲಿ ಲಭಿಸುತ್ತಿರುವ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರಕಾರ ಎಚ್ಚರ ವಹಿಸಬೇಕು. ನಮ್ಮ ಕ್ಲಿನಿಕ್ಗಳಿಗೆ ಅಗತ್ಯ ಮೂಲಸೌಕರ್ಯ, ಸಿಬಂದಿ ನೇಮಕಾತಿ, ವೈದ್ಯಕೀಯ ಸಾಧನ, ಸಲಕರಣೆಗಳ ಒದಗಣೆ, ಔಷಧಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದರತ್ತ ಹೆಚ್ಚಿನ ಲಕ್ಷ್ಯ ಹರಿಸಬೇಕು.
ಇನ್ನು ಬಸ್ ನಿಲ್ದಾಣಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿರುವುದರಿಂದ ಪರಿಸರದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳುವುದು ಬಲುದೊಡ್ಡ ಸವಾಲಿನ ಕಾರ್ಯವಾಗಲಿದೆ. ಹೀಗಾಗಿ ಇತ್ತ ಆರೋಗ್ಯ ಮತ್ತು ಸಾರಿಗೆ ಇಲಾಖೆ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಜತೆಗೂಡಿ ಬಸ್ ನಿಲ್ದಾಣದ ಸುತ್ತಮುತ್ತ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇನ್ನು ಜನದಟ್ಟಣೆ ಅಧಿಕವಿರುವುದರಿಂದ ಮತ್ತು ನಾನಾ ಪ್ರದೇಶದ ಜನರು ಸುತ್ತಾಡುವುದರಿಂದ ಬಸ್ ನಿಲ್ದಾಣಗಳಲ್ಲಿನ ನಮ್ಮ ಕ್ಲಿನಿಕ್ಗಳಲ್ಲಿ ಸುರಕ್ಷಿತ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಒಂದಿಷ್ಟು ಹೆಚ್ಚಿನ ನಿಗಾ ಇರಿಸಬೇಕು. ಇವೆಲ್ಲದರತ್ತ ಆರೋಗ್ಯ ಇಲಾಖೆ ಆರೋಗ್ಯ ಇಲಾಖೆ ಗಮನ ಹರಿಸಿದ್ದೇ ಆದಲ್ಲಿ ಜನತೆಗೆ ಸೂಕ್ತ ಮತ್ತು ಸಮರ್ಪಕ ಆರೋಗ್ಯ ಸೇವೆ ನೀಡುವ ಸರಕಾರದ ಉದ್ದೇಶ ಈಡೇರಲಿದೆ ಮಾತ್ರವಲ್ಲದೆ “ನಮ್ಮ ಕ್ಲಿನಿಕ್’ಗೆ ಸಿಕ್ಕಿರುವ ಜನಮನ್ನಣೆ ಮತ್ತಷ್ಟು ಹೆಚ್ಚಲಿದೆ.