Advertisement

ಅಮೆರಿಕದಲ್ಲಿ ಉಡುಪಿಯ ಧ್ವಜ: ನಾಳೆ ಪುತ್ತಿಗೆ ಶ್ರೀಗಳಿಗೆ ಅಭಿನಂದನೆ

08:30 AM Jul 21, 2017 | Harsha Rao |

ಸುಮಾರು 5,000 ವರ್ಷಗಳ ಹಿಂದೆ ರೂಪುಗೊಂಡ ಶ್ರೀಕೃಷ್ಣನ ವಿಗ್ರಹವನ್ನು ಸುಮಾರು 700 ವರ್ಷಗಳ ಹಿಂದೆ ಉಡುಪಿಯಲ್ಲಿ ಮಧ್ವಾಚಾರ್ಯರು ಪ್ರತಿಷ್ಠಾಪಿಸಿ ಪೂಜೆಗೆ ಎಂಟು ಸನ್ಯಾಸಿಶಿಷ್ಯರ ವ್ಯವಸ್ಥೆ ಕಲ್ಪಿಸಿಕೊಟ್ಟರು. 1970ರ ದಶಕದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್‌) ಮೂಲಕ ಪ್ರಭುಪಾದರು ಅಮೆರಿಕದಲ್ಲಿ ಕೃಷ್ಣಪ್ರಜ್ಞೆಯನ್ನು ಜಾಗೃತಗೊಳಿಸಿದರು. ಉಡುಪಿ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಲಿಟ್ಲ ಇಂಡಿಯ ಎಂದೇ ಪ್ರಸಿದ್ಧವಾದ ನ್ಯೂಜೆರ್ಸಿ ರಾಜ್ಯದ ಬಲ್ಬ್ ಶೋಧಕ ಥಾಮಸ್‌ ಆಲ್ವ ಎಡಿಸನ್‌ ಹೆಸರನ್ನು ಹೊತ್ತ, ಎಡಿಸನ್‌ ಜನಿಸಿದ ನಗರದಲ್ಲಿ ಶ್ರೀಕೃಷ್ಣಪ್ರತಿಷ್ಠೆ ನೆರವೇರಿಸಿದ್ದಾರೆ. ಜು. 22 ಸಂಜೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಶ್ರೀಗಳಿಗೆ ಅಭಿನಂದನೆ ನಡೆಯಲಿದೆ. 

Advertisement

ಶ್ರೀಕೃಷ್ಣ ಅವತಾರವೆತ್ತಿದ್ದು ಸುಮಾರು 5,000 ವರ್ಷಗಳ ಹಿಂದೆ. ದ್ವಾರಕಾ ಸಂಶೋಧನೆ ನಡೆಸಿದ ಸಾಗರ ಪುರಾತತ್ತÌಜ್ಞ ಡಾ|ಎಸ್‌.ಆರ್‌.ರಾವ್‌ ಅವರು ಕಾಲನಿರ್ಣಯದಿಂದ ಕ್ರಿ.ಪೂ. 1528ರ ಅವಧಿ ಎಂದು ತಿಳಿಸಿದ್ದರು. ಶ್ರೀಕೃಷ್ಣನ ಜೀವಿತ ಕಾಲದಲ್ಲಿಯೇ ದೇವಶಿಲ್ಪಿ ವಿಶ್ವಕರ್ಮನಿಂದ ನಿರ್ಮಾಣಗೊಂಡ ಸಾಲಿಗ್ರಾಮ ಶಿಲೆಯ ವಿಗ್ರಹವು ಆಚಾರ್ಯ ಮಧ್ವರಿಂದ ಉಡುಪಿಯಲ್ಲಿ ಪ್ರತಿಷ್ಠಾಪನೆ ಗೊಂಡದ್ದು ಸುಮಾರು ಏಳು ಶತಮಾನಗಳ ಹಿಂದೆ. ಸ್ಕಂದ ಪುರಾಣದ ಪ್ರಾಚೀನ ಪಾಠಗಳಲ್ಲಿರುವ ವಿಗ್ರಹದ ಹಿಂದಿರುವ ಉಲ್ಲೇಖಗಳನ್ನು ವಿಜಯದಾಸರು (1682-1755) ಹಾಡುಗಳಲ್ಲಿ ವರ್ಣಿಸಿದ್ದಾರೆ. ಮಧ್ವರು ಬಹುಕಾಲ ಪೂಜಿಸಿ ಮುಂದಿನ ವ್ಯವಸ್ಥೆಗಾಗಿ ಸನ್ಯಾಸಿ ಶಿಷ್ಯರನ್ನು ನೇಮಿಸುವರು. 

ಎಂಟು ತಿಂಗಳಲ್ಲಿ 80 ನಗರ ಸುತ್ತಾಟ 
1997ರಲ್ಲಿ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಕ್ಕೆ ಹೋಗಿ 8 ತಿಂಗಳು  80 ನಗರಗಳಲ್ಲಿ ಅವಿಶ್ರಾಂತವಾಗಿ ಸುತ್ತಾಡಿದರು. 1999ರಲ್ಲಿ ಹೋದಾಗ ಅಲ್ಲಿನ ಭಕ್ತರು ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಲು ಬೇಡಿಕೆ ಇತ್ತರು. ಒಂದು ಗಂಟೆ ವಿಮಾನದಲ್ಲಿ ಪ್ರಯಾಣಿಸಿದರೆ ಯಾವುದಾದರೂ ಒಂದು ಧಾರ್ಮಿಕ ಕೇಂದ್ರಗಳಿಗೆ ತಲುಪುವಂತಹ ಮಾನದಂಡದಲ್ಲಿ ಅಮೆರಿಕವನ್ನು ಐದು ವಿಭಾಗ ಮಾಡಿ ಸಾವಿರ ಮೈಲಿ ಅಂತರದಲ್ಲಿ ಐದು ಸ್ಥಳಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದ ಪುತ್ತಿಗೆ ಶ್ರೀಪಾದರು ಇದರಲ್ಲಿ ಯಶಸ್ವಿಯಾದರು. 

ಅಮೆರಿಕದಲ್ಲೈದು ಕೇಂದ್ರ
ಪೂರ್ವ ಅಮೆರಿಕದಲ್ಲಿ ಎಡಿಸನ್‌ (ನ್ಯೂಜೆರ್ಸಿ ರಾಜ್ಯ), ಮಧ್ಯ ಅಮೆರಿಕದಲ್ಲಿ ಹ್ಯೂಸ್ಟನ್‌ (ಟೆಕ್ಸಾಸ್‌ ರಾಜ್ಯ), ಮೌಂಟನ್‌ಟೈಮ್‌ನಲ್ಲಿ ಫಿನಿಕ್ಸ್‌ (ಅರಿಜೋನಾ ರಾಜ್ಯ), ಪೆಸಿಫಿಕ್‌ ಟೈಮ್‌ನಲ್ಲಿ ತೌಸಂಡ್‌ ಓಕ್‌ ಸಿಟಿ (ಲಾಸ್‌ಏಂಜಲೀಸ್‌ ರಾಜ್ಯ), ಐಟಿ ಉದ್ಯೋಗಿಗಳಿಗಾಗಿ ಸ್ಯಾನೋಜೆ (ಸಿಲಿಕಾನ್‌ ವ್ಯಾಲಿ) ಇದುವೇ ಈ ಐದು ಕೇಂದ್ರಗಳು. ಮೊದಲು ಉತ್ಸವ ಮೂರ್ತಿಗಳನ್ನು ಇಟ್ಟು ಪೂಜೆ ನಡೆಸುವ ವ್ಯವಸ್ಥೆ, ಸರಿಯಾದ ಪೂರಕ ವಾತಾವರಣ ದೊರಕಿದ ಮೇಲೆ ಅಲ್ಲಿ ವಿಗ್ರಹಗಳನ್ನು ಧಾರ್ಮಿಕ ಕ್ರಮ ಪ್ರಕಾರ ಪ್ರತಿಷ್ಠೆ ಮಾಡುವ ಯೋಜನೆ ಪ್ರಕಾರ ಫಿನಿಕ್ಸ್‌ನಲ್ಲಿ ಐದು ವರ್ಷಗಳ ಹಿಂದೆ ವೆಂಕಟೇಶ್ವರ, ರಾಘವೇಂದ್ರಸ್ವಾಮಿಗಳ ವೃಂದಾವನ, ಪ್ರಾಣದೇವರ ಪ್ರತಿಷ್ಠೆ ಮಾಡಿದರೆ ಇತ್ತೀಚಿಗೆ ಎಡಿಸನ್‌ನಲ್ಲಿ ಉಡುಪಿ ಶ್ರೀಕೃಷ್ಣನ ಪ್ರತಿಮೆ ಹೋಲುವ 19 ಇಂಚು (ಒಂದೂವರೆ ಅಡಿ) ಎತ್ತರದ ವಿಗ್ರಹವನ್ನು ಪ್ರತಿಷ್ಠಾಪಿಸಿದರು. 

100 ಕೋ.ರೂ. ಯೋಜನೆ
ಲಂಡನ್‌, ಆಸ್ಟ್ರೇಲಿಯ, ಕೆನಡಾ ಸಹಿತ ಒಟ್ಟು ಎಂಟು ವಿದೇಶಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎರಡು ಕಡೆ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರೆ ಉಳಿದ ಕಡೆ ಉತ್ಸವಮೂರ್ತಿಗಳನ್ನು ಪೂಜಿಸಲಾಗುತ್ತಿದೆ. ಎಡಿಸನ್‌ ಕೇಂದ್ರಕ್ಕೆ 36 ಕೋ.ರೂ., ಹ್ಯೂಸ್ಟನ್‌ನಲ್ಲಿ 15 ಕೋ.ರೂ., ಫಿನಿಕ್ಸ್‌ನಲ್ಲಿ 15 ಕೋ.ರೂ., ಸ್ಯಾನೋಜೆಯಲ್ಲಿ 20 ಕೋ.ರೂ. ಹೀಗೆ ಒಟ್ಟು ಸುಮಾರು 100 ಕೋ.ರೂ. ವೆಚ್ಚದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗಿದೆ. ಬ್ಯಾಂಕ್‌ ಆಫ್ ಅಮೆರಿಕ, ಚೇಸ್‌, ಕೊಮೆರಿಕ, ಪಿಎನ್‌ಸಿ ಬ್ಯಾಂಕ್‌, ಸಿಟಿ ಬ್ಯಾಂಕ್‌, ಟ್ರಸ್ಟ್‌ ಮಾರ್ಕ್‌ ಇತ್ಯಾದಿ ಬ್ಯಾಂಕುಗಳು ನೀಡಿದ ಸಾಲದಲ್ಲಿ ರಿಸ್ಕ್ ಎದುರಿಸಿ ಶ್ರೀಗಳು ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಶ್ರೀಗಳು ಸುಮಾರು 25 ದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನಜೀವನ ಅಧ್ಯಯನ ನಡೆಸಿದ, ಜಾಗತಿಕ ಸ್ತರದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನೂ ಮಂಡಿಸಿದ ಅಪರೂಪದ ಸಂಪನ್ಮೂಲ ಯತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next