Advertisement

ಉಡುಪಿ ಜಿಲ್ಲೆಯ ಮೀನುಗಾರರ ಕೈ ಸೇರದ ಅನುದಾನ

09:17 AM Sep 04, 2022 | Team Udayavani |

ಕೋಟ : ಮೀನುಗಾರಿಕೆ ರಜೆ ಸಂದರ್ಭ ಸಣ್ಣ ಮೀನುಗಾರರಿಗೆ ಆರ್ಥಿಕವಾಗಿ ಸಹಕಾರಿಯಾಗುವ ನಿಟ್ಟಿನಲ್ಲಿ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆ ಎನ್ನುವ ಯೋಜನೆಯನ್ನು ಸರಕಾರ ಈ ಹಿಂದೆ ಜಾರಿಗೊಳಿಸಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿನ ಅನುದಾನ ಉಡುಪಿ ಜಿಲ್ಲೆಯ ಮೀನುಗಾರರ ಕೈ ಸೇರದೆ ಸಮಸ್ಯೆಯಾಗಿದೆ.

Advertisement

ಅರ್ಥಿಕವಾಗಿ ಹಿಂದುಳಿದ ಮೀನುಗಾರರು ಸೆಪ್ಟಂಬರ್‌ನಿಂದ ಮೇ ತನಕ ಮೀನುಗಾರಿಕೆಗೆ ಸಂಬಂಧಿಸಿದ ಸಹಕಾರ ಸಂಸ್ಥೆಗಳ ಮೂಲಕ 165 ರೂ.ಗಳನ್ನು ಉಳಿತಾಯ ರೂಪದಲ್ಲಿ ಠೇವಣಿ ಇಡಬೇಕು. ಒಂಬತ್ತು ತಿಂಗಳಲ್ಲಿ ಓರ್ವ ಸದಸ್ಯನ ಖಾತೆಯಲ್ಲಿ ಸಂಗಹಗೊಂಡ 1,500 ಸಾವಿರ ಮೊತ್ತಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ತಲಾ 1,500-1,500 ರೂ. ಅನುದಾನವನ್ನು ನೀಡುತ್ತದೆ. ಹೀಗೆ ಸಂಗ್ರಹವಾಗುವ 4,500 ರೂ. ಮೊತ್ತವನ್ನು ಜೂನ್‌, ಜುಲೈ, ಆಗಸ್ಟ್‌ನಲ್ಲಿ ರಜಾ ವೇತನ ರೂಪದಲ್ಲಿ ನೀಡಲಾಗುತ್ತದೆ. ಆದರೆ 2017, 2018, 2019ನೇ ಸಾಲಿನ ಸರಕಾರದ ಪಾಲಿನ ಅನುದಾನ ಉಡುಪಿ ಜಿಲ್ಲೆಗೆ ಬಿಡುಗಡೆಯಾಗಿಲ್ಲ.

ಸರಕಾರದ ಪಾಲು ಶೂನ್ಯ
ದ.ಕ. ಜಿಲ್ಲೆಯಲ್ಲಿ 1,231 ಮಂದಿ ಮೀನುಗಾರರಿದ್ದು 2021ನೇ ಸಾಲಿನ ತನಕದ ಎಲ್ಲ ಅನುದಾನ ಕೈ ಸೇರಿದೆ ಎಂದು ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಸದಸ್ಯರು ಮಾಸಿಕ 165 ರೂ.ಗಳಂತೆ 9 ತಿಂಗಳು ಪಾವತಿಸಿದ 1,500 ಸಾವಿರ ರೂ. ಮಾತ್ರ ಕೈ ಸೇರುತ್ತಿದೆ. ಸರಕಾರದ ಪಾಲು ಶೂನ್ಯವಾಗಿದೆ.
ಕೈತಪ್ಪುವ ಆತಂಕ: ಮೂರ್‍ನಾಲ್ಕು ವರ್ಷಗಳಿಂದ ಅನುದಾನ ಬಾಕಿ ಉಳಿದಿರುವುದರಿಂದ ಉಡುಪಿ ಜಿಲ್ಲೆಯ ಮೀನುಗಾರರಿಗೆ ಹಳೆಯ ಬಾಕಿ ಕೈ ತಪ್ಪಲಿದೆಯೇ ಎನ್ನುವ ಆತಂಕ ಇದೆ. ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯ ಸಂಪೂರ್ಣ ಮೊತ್ತವನ್ನು ಮೀನುಗಾರರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮೀನುಗಾರರದು.

ಯೋಜನೆಯಲ್ಲಿ ಹಣ ತೊಡಗಿಸಿದ ಮೀನುಗಾರರು ಆಗಾಗ ಸಂಘಕ್ಕೆ ಭೇಟಿ ನೀಡಿ ವಿಚಾರಿಸುತ್ತಾರೆ. ಸರಕಾರದ ಪಾಲಿನ ಹಿಂದಿನ ಸಂಪೂರ್ಣ ಅನುದಾನವದ ಜತೆಗೆ ಪೂರ್ತಿ ಮೊತ್ತ ಪಾವತಿಸಲು ಸರಕಾರ ಕ್ರಮ ಕೈಗೊಳ್ಳಬೇಕಿದೆ.
– ಅಶೋಕ್‌ ಕೋಡಿಕನ್ಯಾಣ, ಅಧ್ಯಕ್ಷರು, ಕೋಡಿ ಮೀನುಗಾರರ ಸಹಕಾರಿ ಸಂಘ

2020-21ನೇ ಸಾಲಿನ ಅನುದಾನ ಸಂಪೂರ್ಣವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಹಂತ-ಹಂತವಾಗಿ ಸರಕಾರದ ಪಾಲಿನ ಅನುದಾನ ಪಾವತಿಸಲು ಇಲಾಖೆ ಕ್ರಮ ಕೈಗೊಳ್ಳುವ ಭರವಸೆ ಇದೆ.
– ಗಣೇಶ್‌, ಜಿಲ್ಲಾ ನಿರ್ದೇಶಕರು ಮೀನುಗಾರಿಕೆ ಇಲಾಖೆ

Advertisement

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next