Advertisement
ಅವರ ಮಕ್ಕಳಂತೆ ಕೊಂಚ ಸಮಯ ಪ್ರಜ್ಞೆ ವಹಿಸಿದ್ದರೆ ಇಡೀ ಕುಟುಂಬ ಬದುಕುಳಿಯುತ್ತಿತ್ತೇ ಎಂಬ ಪ್ರಶ್ನೆ ಮಕ್ಕಳು ಬದುಕುಳಿದ ಬಗೆಯನ್ನು ಕಂಡಾಗ ಎನಿಸತೊಡಗಿದೆ.
ಮಕ್ಕಳ ಸಮಯ ಪ್ರಜ್ನೆಯೇ ಅವರ ಜೀವ ಉಳಿಸಿದೆ ಎಂದರೆ ತಪ್ಪಾಗದು. ಮಕ್ಕಳಂತೆ ಈ ದಂಪತಿಯೂ ಬಾತ್‌ರೂಂನೊಳಗೆ ಆಥವಾ ಕೊಂಚ ವೆಂಟಿಲೇಷನ್ ಇರುವೆಡೆ ಹೋಗಿ ಹೊಗೆ ಆವರಿಸಿ ಕೊಳ್ಳದಂತೆ ಎಚ್ಚರ ವಹಿಸಿದ್ದರೆ ಜೀವ ಉಳಿಯುತ್ತಿತ್ತು ಎಂದು ಸಾಧ್ಯತೆಯನ್ನು ಹುಡು ಕುತ್ತಿದ್ದವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಹಲವರು. ಮಕ್ಕಳು ಹೊಗೆ ಆವರಿಸಿಕೊಳ್ಳುತ್ತಿದ್ದುದ್ದನ್ನು ಕಂಡು ಬಾತ್‌ರೂಂ ಸೇರಿಕೊಂಡರು. ಅಲ್ಲಿಂದ ಹೊರಗೆ ಬಂದರೆ ತಾವೂ ಬಿದ್ದು ಬಿಡುತ್ತೇವೋ ಎಂಬ ಭಯದಲ್ಲಿ ಅಲ್ಲೇ ಉಳಿದರು. ಪರಿಣಾಮವಾಗಿ ಜೀವ ಉಳಿಯಿತು. ಘಟನೆ ನಡೆದಾಗ ದಂಪತಿ ಇದ್ದ ಬೆಡ್‌ರೂಂ ನಲ್ಲಿ ಸಂಪೂರ್ಣ ಹೊಗೆ ಆವರಿಸಿದ ಕಾರಣ ಹೊರಬರುವುದೂ ಕಷ್ಟವಾಗಿತ್ತು. ಆದರೂ ಹೊರಗೆ ಬರಲು ಪ್ರಯತ್ನಿಸಿ ಬಾಗಿಲವರೆಗೂ ಬಂದಿದ್ದ ರಮಾನಂದ ಶೆಟ್ಟಿ ಅವರು ಬಾಗಿಲು ತೆಗೆಯಲಾಗದೇ ಕುಸಿದು ಬಿದ್ದಿದ್ದರು. ಅವರ ಪತ್ನಿ ಸಹ ಸೋಫಾದಿಂದ ಎದ್ದು ಹೊರಬರಲಾಗದೆ ಅಲ್ಲಿಯೇ ಕುಸಿದು ಬಿದ್ದಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಒಳಗೆ ಬಂದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪರಿಣಾಮ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.
Related Articles
ಮೂರು ಮಹಡಿಯ ಮನೆ ಇದು. ತಳಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಘಟನೆ ನಡೆದಿದೆ. ಒಂದು ಬೆಡ್‌ರೂಂನಲ್ಲಿ ದಂಪತಿ ಹಾಗೂ ಮತ್ತೂಂದು ಬೆಡ್‌ರೂಂನಲ್ಲಿ ಅವರ ಮಕ್ಕಳು ಮಲಗಿದ್ದರು. ದಟ್ಟ ಹೊಗೆ ಬಂದು ಉಸಿರಾಡಲು ಕಷ್ಟವಾಗುತ್ತಿದ್ದುದನ್ನು ಊಹಿಸಿಕೊಂಡ ಮಕ್ಕಳಿಗೆ ಎಲ್ಲಿ ಹೋಗುವುದೆಂದು ತೋಚಲಿಲ್ಲ. ಬಳಿಕ ಪಕ್ಕದಲ್ಲೇ ಇದ್ದ ಬಾತ್ ರೂಂಗೆ ಹೋಗಿ ಕುಳಿತರು. ಅಲ್ಲಿ ವೆಂಟಿಲೇಶನ್ ವ್ಯವಸ್ಥೆ ಇದ್ದ ಕಾರಣ ಉಸಿರಾಟಕ್ಕೆ ತೊಂದರೆಯಾಗಲಿಲ್ಲ. ಬಳಿಕ ಶ್ರಮಪಟ್ಟು ಎಕ್ಸಾಸ್ಟ್ ಫ್ಯಾನ್‌ನ್ನು ಬದಿಗೆ ತಳ್ಳಲು ಪ್ರಯತ್ನಿಸಿದರು. ಆಗ ಸ್ವಲ್ಪ ತಿರುಗಿ ದ್ದರಿಂದ ಮತ್ತಷ್ಟು ಗಾಳಿ ಲಭ್ಯವಾಯಿತು. ಘಟನ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿದ ಮೇರೆಗೆ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಬಾಗಿಲು ಒಡೆಯಲು ಯತ್ನಿಸಿ ದರಾದರೂ ಸಾಧ್ಯವಾಗಲಿಲ್ಲ. ಅನಂತರ ಬಾತ್‌ರೂಂನಲ್ಲಿ ಮಕ್ಕಳು ಬೊಬ್ಬೆ ಹಾಕುತ್ತಿರುವ ಸದ್ದು ಕೇಳಿ ಸಿಬಂದಿ ಅವರಿಗೆ ಅದರ ಗಾಜು ಒಡೆದು ಗಾಳಿ ಇರುವೆಡೆ ಮುಖಮಾಡಿ ನಿಲ್ಲುವಂತೆ ಸೂಚಿಸಿದರು. ಅನಂತರ ಮನೆಯ ಎದುರಿನ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಸಿಬಂದಿಗೆ ಅವರು ಎಲ್ಲಿ ಇದ್ದಾರೆ ಎಂದು ತಿಳಿಯುವುದೂ ಕಷ್ಟವಾಗಿತ್ತು. ಮತ್ತೂಂದೆಡೆ ಸಿಬಂದಿ ಬೆಂಕಿ ನಂದಿಸ ತೊಡಗಿದ್ದರು. ಸಂಪೂರ್ಣ ಹೊಗೆ ಆವರಿಸಿಕೊಂಡಿದ್ದರಿಂದ ಮಕ್ಕಳನ್ನು ರಕ್ಷಿಸಿದ ಬಳಿಕವೂ ಎತ್ತ ಹೋಗುವುದೆಂಬುದು ಸಿಬಂದಿಗೆ ತಿಳಿಯಲಾಗದಷ್ಟು ಹೊಗೆ ಆವರಿಸಿತ್ತು. ಬಳಿಕ ಮಕ್ಕಳೇ ಮನೆಯಿಂದ ಹೊರಹೋಗುವ ದಾರಿಯನ್ನು ತಿಳಿಸಿದರು ಎನ್ನುತ್ತಾರೆ ರಕ್ಷಣಾ ಕಾರ್ಯಾಚರಣೆ ನಡೆಸಿದ ದಳದ ಸಿಬಂದಿ.ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ಸಾಂಸ್ಕೃತಿಕ ಪ್ರತಿನಿಧಿ ಅಶ್ವಿನಿಅಶ್ವಿನಿ ಶೆಟ್ಟಿ ಅವರು ಲಯನ್ಸ್ ಕ್ಲಬ್ ಉಡುಪಿ ಚೇತನ ಹಾಗೂ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾ ಗಿದ್ದರು. ಬಿಜೆಪಿಯ ಉಡುಪಿ ನಗರ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದರು. ಬಂಟರ ಸಂಘ ದಲ್ಲೂ ಸಕ್ರಿಯರಾಗಿದ್ದರು. ಸಾಮಾಜಿಕ ಜಾಲ ತಾಣದಲ್ಲಿ ತುಳುನಾಡಿನ ಆಚಾರ-ವಿಚಾರ, ಸಾಂಸ್ಕೃತಿಕ ಸಂಗತಿಗಳನ್ನು ವಿಶಿಷ್ಟವಾಗಿ ಪ್ರಸ್ತುತ ಪಡಿಸಿ ಖ್ಯಾತಿಗಳಿಸಿದ್ದರು. ತುಳು ಕೂಟದ ಸದಸ್ಯರೂ ಆಗಿದ್ದರು. ಸಾವಿನಲ್ಲೂ ಜತೆಯಾದ ದಂಪತಿ
ಅಂಬಲಪಾಡಿಯ ಗಾಂಧಿನಗರದಲ್ಲಿ ಸೋಮವಾರ ಬೆಳಗ್ಗೆ ಉದ್ಯಮಿ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ನಡೆದ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ (42) ಮಂಗಳವಾರ ನಿಧನ ಹೊಂದಿದರು. ಘಟನೆಯ ದಿನವೇ ರಮಾನಂದ ಶೆಟ್ಟಿ ಸಾವನ್ನಪ್ಪಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೃತರಾದ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ಆದಿಉಡುಪಿ ಪಂದುಬೆಟ್ಟುವಿನ ಅವರ ಮೂಲ ಮನೆ ಪರಿಸರದಲ್ಲಿ ಒಂದೇ ಚಿತೆಯಲ್ಲಿ ನೆರವೇರಿಸಲಾಯಿತು. ಹಲವು ಮಂದಿ ಗಣ್ಯರು, ಎರಡೂ ಕುಟುಂಬಗಳ ಸದಸ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸತ್ತಾಗ ವೈರಿಯೂ ಕಣ್ಣೀರು ಹಾಕಬೇಕು ಎಂದಿದ್ದರು
ಉಡುಪಿ: ನಾವು ಹೇಗೆ ಜೀವನ ಸಾಧಿಸಬೇಕೆಂದರೆ “ನಾವು ಹುಟ್ಟಿದಾಗ ತಾಯಿ ಸಂತೋಷಪಡಬೇಕು. ಸಾಧನೆ ಮಾಡಿ ಬೆಳೆದಾಗ ತಂದೆ ಹೆಮ್ಮೆಪಡಬೇಕು. ನಾವು ಸತ್ತಾಗ ವೈರಿಯೂ ನಮ್ಮನ್ನು ನೋಡಿ ಕಣ್ಣೀರು ಹಾಕಬೇಕು’ ಎಂದು ಅಶ್ವಿನಿ ಶೆಟ್ಟಿ ಅವರು ಹಿಂದೊಮ್ಮೆ ವೀಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು. ಈಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಅಶ್ವಿನಿ ಶೆಟ್ಟಿ ಅವರು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 79 ಸಾವಿರ ಚಂದಾದಾರರನ್ನು ಹೊಂದಿದ್ದರು. ಅವರು ಹಿಂದೆ ಮಾಡಿದ್ದ ವಿವಿಧ ಜನಪರ ಕಾಳಜಿಯುಳ್ಳ ವೀಡಿಯೋಗಳು ಈಗ ವಿವಿಧೆಡೆ ವೈರಲ್ ಆಗುತ್ತಿವೆ. ಬಡಕಾರ್ಮಿಕರಿಗೆ ನೆರವು, ಕೋವಿಡ್ ಅವಧಿಯಲ್ಲಿ ಆರಂಭಿಸಿದ್ದ ಸಹಾಯಹಸ್ತ ಯೋಜ ನೆಯನ್ನು ಅವರು ಅನಂತರವೂ ಮುಂದುವರಿಸಿಕೊಂಡಿದ್ದರು. ಹಬ್ಬಹರಿದಿನಗಳಲ್ಲಿ ವಿವಿಧ ರೀತಿಯ ಆಹಾರ ವಸ್ತುಗಳನ್ನು ಬಡವರು, ನಿರ್ಗತಿಕರಿಗೆ ನೀಡುತ್ತಿದ್ದರು. ಅನಾಥ ಮಕ್ಕಳು, ಬಡಮಕ್ಕಳಿಗೂ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದರು ಎನ್ನುತ್ತಾರೆ ಅವರ ಆತ್ಮೀಯರು. ಇಂತಹ ಕಾರ್ಯಗಳ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಇವುಗಳಿಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದರು. ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹವಾಗಿತ್ತು.