ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಅಟ್ಟಹಾಸ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಇಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಹೆಚ್ಚಾಗುತ್ತಿದೆ. ಶುಕ್ರವಾರ ಮತ್ತೆ 204 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಇಂದಿನ 204 ಪ್ರಕರಣಗಳಲ್ಲಿ 203 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಓರ್ವರು ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. 157 ಪುರುಷರು, 40 ಮಹಿಳೆಯರು ಮತ್ತು ಏಳು ಮಕ್ಕಳಿಗೆ ಸೋಂಕು ತಾಗಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಭಾರಿ ಪ್ರಮಾಣದಲ್ಲಿ ಜನರು ಜಿಲ್ಲೆಗೆ ಬಂದಿದ್ದರು. ಇವರ ಗಂಟಲು ದ್ರವ ಪರೀಕ್ಷೆ ವರದಿ ಬರುತ್ತಿದೆ. ಹೆಚ್ಚು ಪರೀಕ್ಷೆ ನಡೆಯುತ್ತಿರುವ ಕಾರಣ ಸೋಂಕಿತರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ.
ಇಂದು ಎರಡು ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಗಳ ವರದಿ ಬಂದಿದ್ದು, ಆದ ಕಾರಣ 204 ಸೋಂಕು ಪ್ರಕರಣಗಳು ಕಂಡು ಬಂದಿದೆ. ಸುಮರು ಎಂಟು ಸಾವಿರಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದರು. ಹಾಗಾಗಿ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿದೆ. ಬಹುತೇಕ ಜನರ ಸ್ಯಾಂಪಲ್ ಪರೀಕ್ಷೆ ನಡೆದಿದೆ. ಹಾಗಾಗಿ ಸೋಂಕು ಪ್ರಮಾಣದಲ್ಲಿ ಕಡಿಮೆ ಆಗಬಹುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ 92 ಹೊಸ ಸೋಂಕು ಪ್ರಕರಣಗಳು ದೃಢವಾಗಿತ್ತು. ಇಂದು ಮತ್ತೆ 204 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 768 ಕ್ಕೆ ಏರಿಕೆ ಕಂಡಿದೆ. ಇದುವರೆಗೆ ಒಟ್ಟು 82 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ.