Advertisement

Udupi: ಮಳೆ ನಿಂತರೂ ಕಿಂಡಿ ಅಣೆಕಟ್ಟುಗಳಿಗೆ ಬೀಳದ ಹಲಗೆ

12:41 AM Nov 11, 2024 | Team Udayavani |

ಉಡುಪಿ: ಪಶ್ಚಿಮ ವಾಹಿನಿಯಾಗಿ ಹರಿಯುವ ನದಿ, ಇವುಗಳನ್ನು ಸೇರುವ ಉಪನದಿ, ಕಾಲುವೆಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಅಕ್ಟೋಬರ್‌ ತಿಂಗಳೊಳಗಾಗಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲು ಸರಕಾರ ಆರ್ಥಿಕ ಅನುಮೋದನೆ ನೀಡುತ್ತದೆ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಹಲಗೆ ಹಾಕುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಬಾರಿ ಮಳೆ ಕಡಿಮೆಯಾದರೂ ಇನ್ನೂ ಹಲಗೆ ಹಾಕಲು ಸರಕಾರದಿಂದ ಆರ್ಥಿಕ ಅನುಮೋದನೆಯೇ ಸಿಕ್ಕಿಲ್ಲ.

Advertisement

ಹೀಗಾಗಿ ನದಿಗಳ ಸಿಹಿ ನೀರು ನೇರವಾಗಿ ಸಮುದ್ರ ಸೇರುತ್ತಿವೆ. ಸಿಹಿ ನೀರಿಗೆ ಉಪ್ಪು ನೀರು ಬೆರೆಯುವುದರಿಂದ ಅಂತರ್ಜಲವು ಉಪ್ಪಾಗುತ್ತದೆ. ಇದರಿಂದ ಸಮೀಪದ ಮನೆಗಳ ಬಾವಿ ನೀರಿನ ಮೇಲೂ ಪರಿಣಾಮ ಬೀರುತ್ತದೆ. ಕೃಷಿಗೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ತತ್‌ಕ್ಷಣವೇ ಹಲಗೆ ಅಳವಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ನದಿ ನೀರು ಸಮುದ್ರ ಸೇರಬಾರದು ಕೃಷಿ ಸಹಿತ ಅಂತರ್ಜಲ ವೃದ್ಧಿಗೆ ಅದು ಬಳಕೆಯಾಗಬೇಕೆಂಬ ಮೂಲ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹೀಗೆ ವಿವಿಧ ಅನುದಾನಗಳಲ್ಲಿ ಉಭಯ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದರ ಜತೆಗೆ 7 ಮೀಟರ್‌ಗಿಂತ ಕಡಿಮೆ ಇರುವ ಕಾಲುಸಂಕಗಳು ನರೇಗಾ ಯೋಜನೆಯಡಿಯಲ್ಲೂ ನಿರ್ಮಿಸಲಾಗಿದೆ. ಬಹುತೇಕ ಕಿಂಡಿ ಅಣೆಕಟ್ಟುಗಳು ಜನಸಂಪರ್ಕದ ಸೇತುವೆಯಾಗಿಯೂ ಕಾರ್ಯನಿರ್ವಹಿಸುತ್ತಿವೆ.

ಹಲಗೆ ಹಾಕುವುದು,
ತೆಗೆಯುವುದೇ ಪ್ರಧಾನ
ಮಳೆಗಾಲ ಆರಂಭಕ್ಕೂ ಮೊದಲು ಅಥವಾ ಮಳೆಗಾಲ ಆರಂಭವಾಗುತ್ತಿದ್ದಂತೆ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯಬೇಕು. ಮಳೆಗಾಲದಲ್ಲಿ ನೀರು ಅಡೆತಡೆ ಇಲ್ಲದೆ ಸರಾಗವಾಗಿ ಹರಿಯಬೇಕು. ಹಲಗೆ ತೆಗೆಯದಿದ್ದರೆ ನದಿ, ಕಾಲುವೆಯ ಅಚ್ಚುಕಟ್ಟಿನಲ್ಲಿ ಕೃತಕ ನೆರೆಯಾಗುವ ಭೀತಿ ಇರುತ್ತದೆ. ಹಾಗೆಯೇ ಮಳೆಗಾಲ ಮುಗಿಯುತ್ತಿದ್ದಂತೆ ಹಲಗೆ ಅಳವಡಿಸಬೇಕು. ಹಲಗೆ ಅಳವಡಿಸದಿದ್ದರೆ ನದಿಯ ನೀರು ಸಮುದ್ರದ ಉಪ್ಪು ನೀರಿಗೆ ಸೇರುತ್ತದೆ. ಕೃಷಿ ಚಟುವಟಿಕೆಗಳಿಗೆ ಬಳಸಲು ಬರುವುದಿಲ್ಲ. ಹೀಗಾಗಿ ಮಳೆ ಮುಗಿಯುತ್ತಿದ್ದಂತೆ ಹಲಗೆ ಅಳವಡಿಸಲಾಗುತ್ತದೆ. ಈ ಬಾರಿ ಮಾತ್ರ ಇನ್ನೂ ಯಾವುದೇ ಕಿಂಡಿ ಅಣೆಕಟ್ಟಿಗೂ ಹಲಗೆ ಅಳವಡಿಸಿಲ್ಲ.

ೆಹಲಗೆ ಅಳವಡಿಸಲು ಆರ್ಥಿಕ ಅನುಮೋದನೆ ಬೇಕು. ಇದಕ್ಕೆ ಪ್ರತ್ಯೇಕ ವೆಚ್ಚ ಮಾಡಲಾಗುತ್ತದೆ. ಹಳೆಯ ಹಲಗೆ ಹಾಳಾಗಿದ್ದರೆ ಅದನ್ನು ಬದಲಿಸಬೇಕಾಗುತ್ತದೆ. ಮಣ್ಣು ಮತ್ತು ಪ್ಲಾಸ್ಟಿಕ್‌ ಚೀಲ ಬಳಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಸರಕಾರದ ಆರ್ಥಿಕ ಅನುಮೋದನೆ ಪಡೆಯಬೇಕಾಗುತ್ತದೆ. ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಫೈಬರ್‌ ಹಲಗೆ
ಹೊಸದಾಗಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟುಗಳಿಗೆ ಫೈಬರ್‌ ಹಲಗೆಗಳನ್ನು ಅಳವಡಿಸಲಾಗುತ್ತಿದೆ. ಇದು ದೀರ್ಘ‌ಕಾಲ ಬಾಳಿಕೆ ಬರುವ ಜತೆಗೆ ಅಳವಡಿಸುವುದು ಮತ್ತು ತೆಗೆಯುವುದು ಸುಲಭವಾಗುತ್ತದೆ. ನೀರಿನ ಸೋರಿಕೆ ಕೂಡ ಇದರಲ್ಲಿ ಕಡಿಮೆ ಇರುತ್ತದೆ. ಮರದ ಹಲಗೆ ಹಾಕುವ ಕಡೆಗಳಲ್ಲಿ ಸೋರಿಕೆ ಹೆಚ್ಚಿರುತ್ತದೆ.

ನಿರ್ವಹಣೆಯೇ ಇಲ್ಲ
ಕಿಂಡಿ ಅಣೆಕಟ್ಟಿನ ನಿರ್ವಹಣೆ ಅತಿ ಮುಖ್ಯ. ಆದರೆ ಉಭಯ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯೇ ಇಲ್ಲದಾಗಿದೆ. ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 660 ಹಾಗೂ ದ.ಕ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಎಲ್ಲಿಯೂ ನಿರ್ವಹಣೆಗೆ ಸಮಿತಿಯಿಲ್ಲ. ಸ್ಥಳೀಯರ ಮೂಲಕ ಗ್ರಾ.ಪಂ.ಗಳು ನಿರ್ವಹಣೆ ಮಾಡಬೇಕು ಎಂದು ಹೇಳಲಾಗುತ್ತಿವೆಯಾದರೂ ಆರ್ಥಿಕ ಹೊರೆ ಇರುವುದರಿಂದ ನಿರ್ವಹಣೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ.

ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಅನುಮೋದನೆಗಾಗಿ ಕಳುಹಿಸಿದ್ದೇವೆ. ಶೀಘ್ರ ಅನುಮೋದನೆ ಸಿಗಲಿದೆ. ಅನಂತರ ಹಲಗೆ ಹಾಕುವ ಪ್ರಕ್ರಿಯೆ ಶುರುವಾಗಲಿದೆ.
-ಅರುಣ್‌, ಎಇಇ,
ಸಣ್ಣ ನೀರಾವರಿ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next