Advertisement

Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ

02:28 PM May 02, 2024 | Team Udayavani |

ಉಡುಪಿ: ಪರಿಸರ ಸ್ನೇಹಿ ವಾಹನಗಳಿಗೆ ಸರಕಾರ ಉತ್ತೇಜನ ನೀಡುತ್ತಿದ್ದು, ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಹಾಗೂ ಸಿಎನ್‌ಜಿ ಲಘು ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಕರಾವಳಿ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಖಾಸಗಿ ಬಸ್‌ಗಳು ಕೂಡ ಸಿಎನ್‌ಜಿ ಬಳಸಿ ಬಸ್‌ಗಳನ್ನು ಓಡಿಸಲು ಮುಂದಾಗುತ್ತಿದ್ದು, ಈಗಾಗಲೇ ಅಂಬಿಕಾ ಹೆಸರಿನ ಖಾಸಗಿ ಬಸ್‌ ಸಿಎನ್‌ಜಿ
ಮೂಲಕ ಚಲಿಸಿ ಪರಿಸರ ಸ್ನೇಹಿ ಬಸ್‌ ಎನಿಸಿಕೊಂಡಿದೆ.

Advertisement

1978ರಲ್ಲಿ ಮೊದಲ ಉಡುಪಿ-ಕುಂದಾಪುರ ಮಾರ್ಗಕ್ಕೆ ಮೊದಲ ಖಾಸಗಿ ಬಸ್‌ ಸೇವೆ ಆರಂಭಿಸಿದ ಮಲ್ಪೆಯ ಎಂಡಿ ಶ್ರೀಧರ್‌ ಅವರ ನೆನಪಿಗಾಗಿ ಅವರ ಪುತ್ರ ಬಸ್‌ ಮಾಲಕ ಎಂ.ಎಸ್‌.ಸೂರಜ್‌ ಅವರು ಬಸ್‌ಗೆ ಸಿಎನ್‌ಜಿ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಜತೆಗೆ ಲಾಭದಾಯಕವನ್ನಾಗಿಸಿದ್ದಾರೆ. ಇವರ ಬಳಿ ವಿವಿಧ ರೂಟ್‌ಗಳಿಗೆ ಸಂಚರಿಸುವ ಒಟ್ಟು 7 ಬಸ್‌ಗಳಿದ್ದು, ಈ ಪೈಕಿ ಉಡುಪಿ ಒಂದು ಬಸ್‌ಗೆ ಸಿಎನ್‌ಜಿ ಅಳವಡಿಕೆ ಮಾಡಿದ್ದಾರೆ. ಇದರಿಂದ ದಿನಕ್ಕೆ 800 ರೂ.ಗಳಿಂದ 1,000 ರೂ.ಗಳಷ್ಟು ಹಣ ಉಳಿತಾಯವಾಗುತ್ತದೆಯಂತೆ.

ಡೀಸೆಲ್‌ ಬಸ್‌ಗಳು ಒಂದು ಲೀ.ಗೆ 3.70 ರಿಂದ 4.1 ರಷ್ಟು ಮೈಲೇಜ್‌ ನೀಡಿದರೆ ಸಿಎನ್‌ಜಿ ಬಸ್‌ಗಳು 5.5ರಿಂದ 6ರಷ್ಟು ಮೈಲೇಜ್‌ ನೀಡುತ್ತದೆ. ಡೀಸೆಲ್‌ ಬಸ್‌ ಗೆ ಹೋಲಿಸಿದರೆ ಸಿಎನ್‌ಜಿ ವೆಚ್ಚವೂ ಕಡಿಮೆಯಿದೆ.

ನಿರ್ವಹಣೆ ಸುಲಭ
ಡೀಸೆಲ್‌ ಎಂಜಿನ್‌ ಬಸ್‌ಗಳಲ್ಲಿ ನಿರ್ವಹಣೆ ದುಬಾರಿ. ಟರ್ಬೊ, ಇಂಟರ್‌ಕೂಲರ್‌ಗಳ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಸಿಎನ್‌ಜಿ ಬಸ್‌ಗಳಲ್ಲಿ 3 ಸಿಲಿಂಡರ್‌ಗಳನ್ನು ಅಳವಡಿಸಲಾಗಿದ್ದು, ಸ್ಪಾರ್ಕ್‌ ಪ್ಲಗ್‌ಗಳನ್ನು ಆದ್ಯತೆ ಮೇರೆಗೆ ಬದಲಾಯಿಸಿದರೆ ಸಾಕು. ಉಳಿದಂತೆ ಹೆಚ್ಚಿನ ನಿರ್ವಹಣೆಯಿಲ್ಲ. ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ. ಶಬ್ದ ಮಾಲಿನ್ಯವೂ ಕಡಿಮೆ. ನಗರ ಸಂಚಾರಕ್ಕೆ ಬಹು ಉಪಯೋಗವಾಗಿದೆ.

ಸಬ್ಸಿಡಿ ಕೊರತೆ
ಪರಿಸರ ಸ್ನೇಹಿ ವಾಹನ ಉತ್ತೇಜಿಸುತ್ತಿರುವ ಸರಕಾರಿ ಸಿಎನ್‌ಜಿ ವಾಹನಕ್ಕೆ ಯಾವುದೇ ಸಬ್ಸಿಡಿ ನೀಡದಿರುವ ಕಾರಣ ಕೆಲವರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ದರವೂ ದುಬಾರಿಯಾಗಿದೆ. ಎಲೆಕ್ಟ್ರಿಕ್‌ ವಾಹನ ಕೊಂಡುಕೊಳ್ಳುವವರಿಗೆ ಮೊದಲಿಗೆ ಸಬ್ಸಿಡಿ ನೀಡಿದ್ದ ಸರಕಾರ ಬಳಿಕ ಅದರಲ್ಲಿ ಅರ್ಧದಷ್ಟನ್ನು ಸ್ಥಗಿತಗೊಳಿಸಿತು. ದರವನ್ನಾದರೂ ಕಡಿಮೆ ಮಾಡಿದರೆ ಮತ್ತಷ್ಟು ಪರಿಸರ ಸ್ನೇಹಿ ವಾಹನಗಳು ರಸ್ತೆಗೆ ಇಳಿಯಲಿವೆ.

Advertisement

ಸಿಎನ್‌ಜಿ ಲಭ್ಯತೆ ಸಮಸ್ಯೆ
ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಸಿಎನ್‌ಜಿ ಪೂರೈಕೆಯಾಗದ ಕಾರಣ ಕೆಲವೊಮ್ಮೆ ವ್ಯತ್ಯಯ ಉಂಟಾಗುತ್ತಿದೆ. ಮಂಗಳೂರು, ಕುಂದಾಪುರ, ಪಡುಬಿದ್ರಿ ಸಿಎನ್‌ಜಿ ಪಂಪ್‌ಗ್ಳಿಗೆ ಹೋಲಿಸಿದರೆ ಉಡುಪಿಯಲ್ಲಿ ಸಿಎನ್‌ಜಿ ದರ 3 ರೂ.ಅಧಿಕವಿದೆ. ಅದಾನಿ ಸಂಸ್ಥೆಯ ಮೂಲಕ ಉಡುಪಿ ಜಿಲ್ಲೆಗೆ ಸಿಎನ್‌ಜಿ ಪೂರೈಕೆಯಾಗುತ್ತಿದ್ದು, ಜಿಲ್ಲೆಯ ಎಲ್ಲ ಕಡೆಯೂ ಏಕರೂಪದ ದರ ನಿಗದಿ ಮಾಡುವ ಬಗ್ಗೆ ಸಂಸ್ಥೆಯ ಮುಖ್ಯಸ್ಥರಿಗೂ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ಬಸ್‌ ಮಾಲಕರು.

ಮತ್ತಷ್ಟು ಪ್ರೋತ್ಸಾಹ ಬೇಕಿದೆ
ಡೀಸೆಲ್‌ ಬಸ್‌ಗೆ ಹೋಲಿಸಿದರೆ ಸಿಎನ್‌ಜಿ ಬಸ್‌ ದರ ಸುಮಾರು 3ರಿಂದ 3.5 ಲ.ರೂ.ಗಳಷ್ಟು ದುಬಾರಿ. ಆದರೆ ದೈನಂದಿನ ನಿರ್ವಹಣೆ ಕಡಿಮೆ. ಇಂಧನದ ಹಣದಲ್ಲಿಯೂ ಉಳಿತಾಯವಾಗಲಿದೆ. ಸಿಎನ್‌ಜಿ ಬಸ್‌ಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಸಿಎನ್‌ಜಿ ಸ್ಟೇಷನ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಜತೆಗೆ ಸರಕಾರ ಹೊಸ ವಾಹನ ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು.
ಎಂ.ಎಸ್‌.ಸೂರಜ್‌, ಬಸ್‌ ಮಾಲಕರು

Advertisement

Udayavani is now on Telegram. Click here to join our channel and stay updated with the latest news.

Next