ಕೋಟ: ಶೇಂಗಾ ಬೆಳೆಯಲ್ಲಿ ಉಡುಪಿ ಜಿಲ್ಲೆ ದೇಶಕ್ಕೆ ಮಾದರಿಯಾಗುವ ಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಇಲ್ಲಿನ ಬೆಳೆ ವಿಧಾನ, ಮಣ್ಣಿನ ಗುಣಲಕ್ಷಣಗಳು ಹಾಗೂ ಇಳುವರಿ ಅತ್ಯುನ್ನತವಾಗಿದೆ ಎಂದು ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.
ಅವರು ಕೋಟ ಕಾಸನಗುಂದು ವಾಸುದೇವ ಮಯ್ಯ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಶೇಂಗಾ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಶೇಂಗಾ ಕೃಷಿಯಲ್ಲಿ ಹೊಸ-ಹೊಸ ಆವಿಷ್ಕಾರಗಳನ್ನು ಕೈಗೊಂಡಲ್ಲಿ ಇನ್ನಷ್ಟು ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೈತರು ಗಮನಹರಿಸಬೇಕು ಎಂದರು.
ಹಿರಿಯ ಕೃಷಿಕ ವಾಸುದೇವ ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೃಷಿಯಲ್ಲಿ ತನ್ನ ಅನುಭವವನ್ನು ಹಂಚಿಕೊಂಡರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್ ಶೇಂಗಾ ಬೆಳೆಯಲ್ಲಿ ಹೊಸ ಬೀಜ ಪದ್ಧತಿ ಕುರಿತು ತಿಳಿಸಿದರು.
ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಎ.ಪಿ.ಎಂ.ಸಿ. ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಾರಂಪಳ್ಳಿ, ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕ, ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಹಾಯಕ ನಿರ್ದೇಶಕ ಅನಂತಪ್ರಭು, ಕೋಟ ರೈತ ಸಂಪರ್ಕ ಕೇಂದ್ರ ಅಧಿಕಾರಿ ಸುಪ್ರಭಾ, ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ, ಉಪಸ್ಥಿತರಿದ್ದರು.
ಕೋಟ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.