Advertisement

ಉಡುಪಿ ಜಿಲ್ಲೆಯಲ್ಲಿ ಕಟ್ಟೆಚ್ಚರ ; ಗಂಗೊಳ್ಳಿ, ಕುಂದಾಪುರಕ್ಕೆ ಎಸ್‌ಪಿ ನಿಶಾ ಭೇಟಿ

12:40 AM Dec 20, 2019 | Team Udayavani |

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಶಾಂತ ಪರಿಸ್ಥಿತಿಯಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಗಂಗೊಳ್ಳಿ, ಕುಂದಾಪುರ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಹೂಡೆ ಸಹಿತ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಲಿದ್ದಾರೆ.

Advertisement

ಬಸ್‌ ಸಂಚಾರ ಮೊಟಕು
ಮಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಉಡುಪಿಯಿಂದ ಮಂಗಳೂರು ಮತ್ತು ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಸಂಚರಿಸುವ ಬಹುತೇಕ ಖಾಸಗಿ ಬಸ್‌ಗಳು ಸಂಚಾರವನ್ನು ಮೊಟಕುಗೊಳಿಸಿದವು. ಗಲಭೆ, ಕರ್ಫ್ಯೂ ಗೊಂದಲದಿಂದಾಗಿ ಕೆಲವು ಪ್ರಯಾಣಿಕರು ಪರದಾಡುವ ಸನ್ನಿವೇಶ ಎದುರಾಯಿತು. ಉಡುಪಿ ಜಿಲ್ಲೆಯಲ್ಲಿ ಗುರುವಾರ ಪೊಲೀಸ್‌ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತಾದರೂ ಉಳಿದ ಪಂದ್ಯಗಳನ್ನು ಮುಂದೂಡಲಾಯಿತು.

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಕೆಲವು ಸಂಘಟನೆಗಳು ಪ್ರತಿಭಟನೆಗೆ ಹಾಗೂ ಬಂದ್‌ಗೆ ಕರೆ ನೀಡಿದ್ದು ಉಡುಪಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ.

ಮಂಗಳೂರು ಸುತ್ತಮುತ್ತ ಕರ್ಫ್ಯೂ ವಿಧಿಸಲಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗಾಗಿ ಉಡುಪಿ ಜಿಲ್ಲೆಯಿಂದ ಶೇ.50 ರಷ್ಟು ಪೊಲೀಸರನ್ನು ಮಂಗಳೂರಿನಲ್ಲಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಡಿ.21ರ ರಾತ್ರಿ 11ರ ವರೆಗೆ ಪ್ರತಿಬಂಧಕಾಜ್ಞೆ ಇರಲಿದೆ.

ವಾರ್ಷಿಕೋತ್ಸವಗಳು ಮುಂದಕ್ಕೆ
ಪ್ರತಿಬಂಧಕಾಜ್ಞೆ ಇರುವ ಕಾರಣ ವಿವಿಧ ಶಾಲಾ ಕಾಲೇಜುಗಳಲ್ಲಿ ಗುರುವಾರ ನಿಗದಿಯಾದ ವಾರ್ಷಿಕೋತ್ಸವಗಳನ್ನು ಮುಂದೂಡಲಾಗಿದೆ.

Advertisement

ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿಯೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
– ನಿಶಾ ಜೇಮ್ಸ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next