Advertisement

ಉಡುಪಿ ಜಿಲ್ಲೆ : ಯಥಾಸ್ಥಿತಿ ಜತೆ ಕೆಲವಷ್ಟೆ ರಿಯಾಯಿತಿ; ಗ್ರಾಮಾಂತರಕ್ಕೆ ಆಂಶಿಕ ರಿಯಾಯಿತಿ

09:51 AM Apr 23, 2020 | mahesh |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈಗಿರುವ ಕಾನೂನಿನ ಜತೆಗೆ ಗುರುವಾರ ಮಧ್ಯರಾತ್ರಿ ಬಳಿಕ ಜಾರಿಗೆ ಬರುವಂತೆ ಕೆಲವು ರಿಯಾಯಿತಿಗಳನ್ನು ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾಡಳಿತ ಘೋಷಿಸಿದೆ.  ಜಿಲ್ಲೆಯಲ್ಲಿ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಈಗಿರುವ ಅವಧಿಯನ್ನು (ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11ರ ವರೆಗೆ) ವಿಸ್ತರಿಸಬೇಕೆ ಬೇಡವೆ ಎಂದು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

Advertisement

ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ, ನೀರಾವರಿ, ರಸ್ತೆ, ಮನೆ ನಿರ್ಮಾಣಗಳಿಗೆ ಅವಕಾಶ ನೀಡಲಾಗಿದೆ. ಆದರೆ ಇದಾವುದೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವಂತಿಲ್ಲ. ಎಲೆಕ್ಟ್ರಾನಿಕ್ಸ್‌ ಉಪಕರಣ, ಮೊಬೈಲ್‌ ಶಾಪ್‌ಗಳನ್ನು ತೆರೆಯಲು ಅವಕಾಶವಿಲ್ಲ. ಹೊಟೇಲ್‌ಗಳಲ್ಲಿ ಆಹಾರ ವಸ್ತುಗಳನ್ನು ಕೊಂಡೊಯ್ಯಬಹುದೆ ವಿನಾ ಅಲ್ಲಿ ಕುಳಿತು ಸ್ವೀಕರಿಸುವಂತಿಲ್ಲ. ಈ ಆದೇಶ ಹಿಂದಿನಂತೆಯೇ ಮುಂದುವರಿಯಲಿದೆ. ಹಿಂದಿನಂತೆ ಆಸ್ಪತ್ರೆ, ಮೆಡಿಕಲ್‌ ಶಾಪ್‌ಗ್ಳಿಗೆ ಅವಕಾಶಗಳಿವೆ.

ಮೀನುಗಾರಿಕೆ
ಮೀನುಗಾರಿಕೆಯಲ್ಲಿ ಈಗಾಗಲೇ ಇರುವ ರಿಯಾಯಿತಿಗಳು ನಡೆಯಬಹುದು. ಯಾಂತ್ರೀ ಕೃತ ಮೀನುಗಾರಿಕೆ ನಡೆಸುವಂತಿಲ್ಲ. ನಮ್ಮ ಜಿಲ್ಲೆಗೆ ಎಷ್ಟು ಮೀನು ಬೇಕೋ ಅಷ್ಟು ಸಿಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಲೆಕ್ಟ್ರಿಕಲ್‌ ಕೆಲಸಕ್ಕೆ ಅವಕಾಶ
ಎಲೆಕ್ಟ್ರಿಕಲ್‌, ಪ್ಲಂಬಿಂಗ್‌ ಇತ್ಯಾದಿ ಮನೆಗಳಿಗೆ ತೆರಳಿ ದುರಸ್ತಿ ಮಾಡುವ ಕೆಲಸಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಾಗಾಟ, ಮಾರಾಟಗಳಿಗೆ ಈಗಾಗಲೇ ಇರುವಂತೆ ಅವಕಾಶಗಳಿವೆ.

ಜವುಳಿ, ಗೂಡಂಗಡಿ ತೆರೆಯುವಂತಿಲ್ಲ
ಬಟ್ಟೆ ಅಂಗಡಿ, ಗೂಡಂಗಡಿಗಳನ್ನು ತೆರೆಯಲು ಅವಕಾಶಗಳಿಲ್ಲ. ನಗರವಿರಲೀ, ಗ್ರಾಮಾಂತರವಿರಲಿ ಆಹಾರ, ಕೃಷಿ, ತೋಟಗಾರಿಕೆ, ಔಷಧಿ ಉತ್ಪಾದನೆ ಸಂಬಂಧಿತ ವ್ಯವಹಾರ ಗಳನ್ನು ಹೊರತು ಪಡಿಸಿ ಯಾವುದೇ ಕಾರ್ಖಾನೆಗಳ ಉತ್ಪಾದನೆಗೆ ಅವಕಾಶಗಳಿಲ್ಲ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಖಾನೆಗಳ ಕಟ್ಟಡ ನಿರ್ಮಿಸಲು ಅವಕಾಶಗಳಿವೆ.

Advertisement

ಗುಂಪುಗೂಡಬೇಡಿ ಎಂದ ಆರೋಗ್ಯ ಸಹಾಯಕಿಗೆ ಬೆದರಿಕೆ: ದೂರು
ಪಡುಬಿದ್ರಿ: ಉಚ್ಚಿಲದಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಪಕ್ಕದ ಮನೆಯ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದು ಮುಚ್ಚಳಿಕೆ ಬರೆಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಕೋವಿಡ್‌-19 ವಿಚಾರವಾಗಿ ಗುಂಪಾಗಿ ಮನೆಯಲ್ಲಿ ಜನ ಸೇರಿಸಬೇಡಿ ಎಂಬ ಶ್ಯಾಮಲಾ ಅವರ ಸಲಹೆಯಿಂದ ಕುಪಿತರಾದ ಮುಮ್ತಾಜ್‌ ಮತ್ತು ಆಕೆಯ ಸಹೋದರ ಮನ್ಸೂರ್‌ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. ಪಡುಬಿದ್ರಿ ಪೊಲೀಸರು ಸಿಪಿಐ ಮಹೇಶ್‌ ಪ್ರಸಾದ್‌ ಸಮಕ್ಷಮ ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಆರೋಗ್ಯ ಯೋಧರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ವಿಧಿಸಬಹುದಾದ ಕಠಿನ ಶಿಕ್ಷೆಗಳಿಂದ ಈ ಆರೋಪಿಗಳು ಸದ್ಯಕ್ಕೆ ಬಚಾವಾಗಿದ್ದಾರೆ.

ದೂರು ನೀಡಿ
ಉಡುಪಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ನಡೆದಲ್ಲಿ ಜಿಲ್ಲಾ ಪೊಲೀಸ್‌ ವತಿಯಿಂದ ನೇಮಿಸಲ್ಪಟ್ಟ ನೋಡಲ್‌ ಅಧಿಕಾರಿಯ ಮೊಬೈಲ್‌ 9480800942ಕ್ಕೆ ದೂರು ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next