Advertisement

ಸೇನೆ ನೇಮಕಾತಿ: ಉಡುಪಿ ಸಹಿತ ಮಲೆನಾಡಿನ ಜಿಲ್ಲೆಯ ಯುವಕರಲ್ಲಿ ನಿರುತ್ಸಾಹ !

11:07 PM Mar 02, 2020 | Sriram |

ವಿಶೇಷ ವರದಿ-ಉಡುಪಿ: ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯ ಜಿಲ್ಲೆಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಯುವಕರು ಭಾರತೀಯ ಸೇನೆ ಆಯ್ಕೆಯಾಗಿ ಸೇವೆ ಸಲ್ಲಿಸಲು ತೀವ್ರ ನಿರುತ್ಸಾಹ ತೋರಿಸುತ್ತಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ಎ. 4ರಿಂದ 14ವರೆಗೆ ಭಾರತೀಯ ಸೇನೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅದರ ಅಂಗವಾಗಿ ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿಗಳ ಸಲ್ಲಿಕೆಯಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದ 11 ಜಿಲ್ಲೆಗಳಿಂದ 15,000 ಅರ್ಜಿ ಸಲ್ಲಿಕೆಯಾಗಿದೆ. ಬಾಗಲಕೋಟೆ, ಧಾರವಾಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರು ಶೇ. 80ರಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ 20ರಷ್ಟು ಅರ್ಜಿಗಳು ಉತ್ತರ ಕನ್ನಡ, ಉಡುಪಿ, ದ.ಕ., ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದ ಸಲ್ಲಿಕೆಯಾಗಿದೆ.

ಮಾಹಿತಿ ಪ್ರಚಾರಕ್ಕೆ ಸಜ್ಜು
ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಪ್ರಿಲ್‌ 4 ರಿಂದ 14 ರ ವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಉಡುಪಿ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳ ಯುವಕರು ಭಾಗವಹಿಸಲು ಅವಕಾಶವಿದೆ. ಕೆಲವು ವರ್ಷಗಳಿಂದ ಸೇನಾ ನೇಮಕಾತಿ ರ್ಯಾಲಿಗೆ ಹಾಜರಾಗುತ್ತಿರುವ ಉಡುಪಿ ಅಭ್ಯರ್ಥಿಗಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿರುವುದನ್ನು ಮನಗಂಡಿರುವ ಸೇನಾ ನೇಮಕಾತಿ ಕಚೇರಿಯು, ಯುವಕರನ್ನು ಆಕರ್ಷಿಸಲು ಜಿಲ್ಲಾಡಳಿತದ ಜತೆ ಸೇರಿ ಮಾಹಿತಿ ಪ್ರಚಾರಕ್ಕೆ ಮುಂದಾಗಿದೆ.

ಮಾಹಿತಿ ಕೊರತೆ
ಸೈನಿಕರಿಗೆ ನೀಡುವ ವೇತನ ಮತ್ತು ಇತರೆ ಸೌಲಭ್ಯಗಳ ಕುರಿತು ಯುವಕರಿಗೆ ಮಾಹಿತಿ ಕೊರತೆ ಇದ್ದಂತಿದೆ. ಸೈನಿಕರಿಗೆ ತಿಂಗಳಿಗೆ 30,000 ವೇತನದ ಜತೆ ಬಟ್ಟೆ, ಪಡಿತರ, ವಸತಿ, ವೈದ್ಯಕೀಯ ಸೌಲಭ್ಯ, ಉಚಿತ ರೈಲ್ವೆ ಪ್ರಯಾಣದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೈನಿಕರು ಮತ್ತು ಅವರ ಕುಟುಂಬಗಳಿಗೆ ಪಿಂಚಣಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿ ಯನ್ನು ಯುವಕರಿಗೆ ಒದಗಿಸುವ ಮೂಲಕ ಅವರನ್ನು ನೇಮಕಾತಿ ರ್ಯಾಲಿಗಳತ್ತ ಆಕರ್ಷಿಸಲು ಉದ್ಯೋಗ ವಿನಿಮಯ ಕೇಂದ್ರ ಮುಂದಾಗಿದೆ ಎಂದು ಉದ್ಯೋಗ ವಿನಮಯ ಕೇಂದ್ರ ಅಧಿಕಾರಿ ಜಗನ್‌ ಮಾಹಿತಿ ನೀಡಿದರು.

ಯಾಕೆ ನಿರುತ್ಸಾಹ?
ಉಡುಪಿ ಜಿಲ್ಲೆಯಲ್ಲಿ ಶೇ 30-40ರಷ್ಟು ಪದವಿ ಹಾಗೂ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿ ಗಳು ಬಹುತೇಕ ಪರ ಊರುಗಳಿಗೆ ತೆರಳಿ ನೆಲೆಸುತ್ತಿದ್ದಾರೆ. ಇದು ಹೊರತುಪಡಿಸಿ ಸ್ವ ಉದ್ಯೋಗ, ಪಿತ್ರಾರ್ಜಿತ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ. ಐಟಿ, ಬಿಟಿ, ಮಾರ್ಕೆಟಿಂಗ್‌ ಇತ್ಯಾದಿ ಗ್ಲಾಮರಸ್‌ ವ್ಯಾಮೋಹದಿಂದ ಸೇನಾ ನೇಮಕಾತಿ ರ್ಯಾಲಿಗಳಲ್ಲಿ ಯುವಕರು ಭಾಗವಹಿಸುತ್ತಿಲ್ಲ. ಜತೆಗೆ ಜಿಲ್ಲೆಯಲ್ಲಿ ಯುವ ಜನರಿಗೆ ಸೇನಾ ತರಬೇತಿಗೆ ಅಗತ್ಯವಿರುವ ಉತ್ತೇಜನ ದೊರಕುತ್ತಿಲ್ಲ.

Advertisement

ಮಾಹಿತಿ ಕಾರ್ಯಾಗಾರ
ಸೇನೆ ನೇಮಕಾತಿ ರ್ಯಾಲಿಗೆ ಉಡುಪಿ ಜಿಲ್ಲೆಯಿಂದ ಅತ್ಯಂತ ಕಡಿಮೆ ಅರ್ಜಿ ಸಲ್ಲಿಕೆಯಾಗಿರುವುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಯುವಕರನ್ನು ಸೇನೆ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಅಗತ್ಯವಿರುವ‌ ಉಚಿತ ತರಬೇತಿ ಹಾಗೂ ಮಾಹಿತಿ ಕಾರ್ಯಗಾರವನ್ನು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ.

ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆ
ಉಡುಪಿ: ಭಾರತೀಯ ಸೇನೆಗೆ ಸೇರಲು ಇಚ್ಚಿಸುವ ಬಾಗಲಕೋಟೆ, ವಿಜಯಪುರ, ಧಾರವಾಡ‌, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಯುವಕರಿಗೆ ಉಡುಪಿ ಜಿಲ್ಲೆಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎ. 4ರಿಂದ 14ರ ವರೆಗೆ ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ರ್ಯಾಲಿಯಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಸೇನೆಗೆ ಸೇರ್ಪಡೆಗೊಂಡ ಯುವಕರಿಗೆ ತರಬೇತಿಯ ಮೊದಲ ತಿಂಗಳಲ್ಲೇ
38 ಸಾವಿರ ರೂ. ಗಳ ವೇತನದ ಜತೆಗೆ ಹಲವು ರಿಯಾಯತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಸೇನಾ ರ್ಯಾಲಿಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉ.ಕ., ಉಡುಪಿ, ದ. ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕನಿಷ್ಠ 30 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಆನ್‌ಲೈನ್‌ ಮೂಲಕ ನೋಂದಾಯಿಸಲ್ಪಟ್ಟ ಅಭ್ಯರ್ಥಿಗಳಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ರ್ಯಾಲಿಯಲ್ಲಿ ಭಾಗವಹಿಸಲು ಅಡ್ಮಿಟ್‌ ಕಾರ್ಡ್‌ ಕಡ್ಡಾಯವಾಗಿದ್ದು, ಮಾ. 24 ರಂದು ಕಾರ್ಡ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್‌ ಫಿರ್ದೋಶ್‌ ಪಿ. ದುಬಾಶ್‌ ಮಾಹಿತಿ ನೀಡಿದರು.

ಮಾ. 20ರ ವರೆಗೆ ಅವಕಾಶ
ವಯೋಮಿತಿ 17ರಿಂದ 23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್‌ ಜನರಲ್‌ ಡ್ನೂಟಿ (ಆಲ್‌ ಆಮ್ಸ್‌ì),ಸೋಲ್ಜರ್‌ ಟೆಕ್ನಿಕಲ್‌, ಸೋಲ್ಜರ್‌ ಟೆಕ್‌ ನರ್ಸಿಂಗ್‌ ಅಸಿಸ್ಟೆಂಟ್‌/ ನರ್ಸಿಂಗ್‌ ಸಹಾಯಕ ಪಶುವೈದ್ಯ, ಸೋಲ್ಜರ್‌ ಕ್ಲರ್ಕ್‌/ ಸ್ಟೋರ್‌ ಕೀಪರ್‌ ಟೆಕ್ನಿಕಲ್‌ (ಆಲ್‌ ಆಮ್ಸ್‌ì), 10ನೇ ತರಗತಿ ತೇರ್ಗಡೆಯಾದವರಿಗೆ ಸೋಲ್ಜರ್‌ ಟ್ರೇಡ್ಸ$¾ನ್‌ (ಆಲ್‌ ಆಮ್ಸ್‌ì), ಮತ್ತು 8ನೇ ತರಗತಿ ತೇರ್ಗಡೆಯಾದರಿಗೆ ಸೋಲ್ಜರ್‌ ಟೇಡ್ನ$¾ನ್‌ (ಆಲ್‌ ಆಮ್ಸ್‌ì) ಹುದ್ದೆಗಳು ಲಭ್ಯವಿದ್ದು ಆನ್‌ಲೈನ್‌ ಮೂಲಕ www.joinindianarmy.nic.inನಲ್ಲಿ ನೋಂದಾಯಿಸಬಹುದಾಗಿದ್ದು. ಆನ್‌ಲೈನ್‌ ಅರ್ಜಿ ಸಲ್ಲಿಸಲು ಮಾ. 20ರ ವರೆಗೆ ಅವಕಾಶವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next