Advertisement

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

01:05 AM Jul 20, 2024 | Team Udayavani |

ಉಡುಪಿ: ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆ ಯಲ್ಲಿ ಶನಿವಾರ ಪಿಯುಸಿವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಮಧ್ಯಾಹ್ನ ಬಳಿಕ ಹಲವೆಡೆ ಮಳೆ ಬಿರುಸಾಗಿತ್ತು. ಕುಂದಾ ಪುರ, ಬೈಂದೂರು ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಅಮಾಸೆಬೈಲು ಬಳ್ಮನೆ ಭಾಗದಲ್ಲೂ ಮನೆಗಳಿಗೆ ಹಾನಿಯಾಗಿದೆ.

ನಾವುಂದ, ಮರವಂತೆ, ಪಡುಕೋಣೆ ಭಾಗದಲ್ಲಿ ನೆರೆ ನೀರು ಇನ್ನೂ ಇಳಿಮುಖವಾಗಿಲ್ಲ. ಉಡುಪಿ ತಾಲೂಕಿನ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಅಲೆವೂರು, ಕೆಮೂ¤ರು, ಉದ್ಯಾವರ ಭಾಗದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಹಲವು ಜನರನ್ನು ರಕ್ಷಿಸಲಾಯಿತು. ಕಲ್ಯಾಣಪುರ ಹೊಳೆ ಉಕ್ಕಿ ಹರಿದಿದ್ದು, ಸೇತುವೆ, ಸಂಪರ್ಕ ರಸ್ತೆಗಳು ಮುಳುಗಡೆಯಾಗಿದ್ದು, ಮೂಡುಕುದ್ರು, ನಿಡಂಬಳ್ಳಿ ಭಾಗದಲ್ಲಿ ಮನೆ, ಗದ್ದೆ, ತೋಟಗಳು ಜಲಾವೃತ ಗೊಂಡಿವೆ.

ಕಾರ್ಕಳ, ಅಜೆಕಾರು, ಬೈಲೂರು, ಮಾಳ, ನಿಟ್ಟೆ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದಿದೆ. ಎರಡು ದಿನಗಳಲ್ಲಿ ಜಿಲ್ಲೆಯ 31ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕುಂದಾ ಪುರದ ಹಲ್ಕೂರು, ಸಿದ್ದಾಪುರ, ಗುಲ್ವಾಡಿ ಭಾಗದಲ್ಲಿ ಅಡಿಕೆ ತೋಟಗಳಿಗೆ ಹಾನಿ ಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ತಾಸಿನಲ್ಲಿ ಸರಾಸರಿ 149.2 ಮಿ. ಮೀ. ಮಳೆಯಾಗಿದೆ.

ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ
ಕಾಪು: ಕಾಪು ತಾಲೂಕಿನಲ್ಲಿ ಗಾಳಿ, ಮಳೆ ಮತ್ತು ನೆರೆಗೆ ಸಿಲುಕಿದ 35 ಮಂದಿಯನ್ನು ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌. ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಟಪಾಡಿ ಮೂಡಬೆಟ್ಟು, ಏಣಗುಡ್ಡೆ, ನಡ್ಪಾಲು ಪಾದೆಬೆಟ್ಟು, ಪಡುಬಿದ್ರಿ ಕಲ್ಲಟ್ಟೆ ಮತ್ತು ಹೆಜಮಾಡಿ ಶಿವನಗರ ಪರಿಸರದ ಸಂತ್ರಸ್ತರನ್ನು ತಾಲೂಕು ಆಡಳಿತ, ಗೃಹರಕ್ಷಕ ದಳ ಮತ್ತು ಸ್ಥಳೀಯ ಗ್ರಾಮ ಪಂಚಾಯತ್‌ಗಳ ನೇತೃತ್ವದಲ್ಲಿ ರಕ್ಷಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಾಲೂಕು ಆಡಳಿತ ಕೇಂದ್ರದ ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆ 0820-2551444 ಅನ್ನು ಸಂಪರ್ಕಿಸುವಂತೆ ತಹಶೀಲ್ದಾರ್‌ ತಿಳಿಸಿದ್ದಾರೆ.

Advertisement

250ಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಯಿ
ಕಳೆದ ಎರಡು ದಿನಗಳಲ್ಲಿ 250ಕ್ಕೂ ಅಧಿಕ ವಿದ್ಯುತ್‌ ಕಂಬ ಧರೆಗುರುಳಿದ್ದು, 3.80 ಕಿ. ಮೀ. ವಿದ್ಯುತ್‌ ಲೈನ್‌ಗೆ ಹಾನಿಯಾಗಿದೆ. 14 ವಿದ್ಯುತ್‌ ಪರಿವರ್ತಕಗಳು ಕೆಟ್ಟುಹೋಗಿದ್ದು, 38 ಲಕ್ಷ ರೂ. ವರೆಗೆ ಅಂದಾಜು ನಷ್ಟ ಸಂಭವಿಸಿದೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

10 ಜನರ ರಕ್ಷಿಸಿದ ಅಗ್ನಿಶಾಮಕ ದಳ
ಅಲೆವೂರು, ಕೆಮ್ತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ ಹತ್ತು ಮಂದಿಯನ್ನು ಅಗ್ನಿ ಶಾಮಕದಳ ಸಿಬಂದಿ ರಕ್ಷಿಸಿದರು. ನೆರೆ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಎರಡು ಬೋಟ್‌ ಸಹಿತ ಸಿಬಂದಿ ಸನ್ನದ್ಧವಾಗಿದ್ದಾರೆ ಎಂದು ಅಗ್ನಿಶಾಮಕ ದಳ ಜಿಲ್ಲಾ ಅಧಿಕಾರಿ ವಿನಾಯಕ್‌ ಕಲ್ಗುಟ್ಕರ್‌ ತಿಳಿಸಿದ್ದಾರೆ.

ರಾಜ್ಯದಲ್ಲೆ ಅತ್ಯಧಿಕ ದಾಖಲೆ ಮಳೆ ಕಾರ್ಕಳದಲ್ಲಿ
ಶುಕ್ರವಾರ 8.30ರ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲೆ ಅತ್ಯಧಿಕ ಮಳೆ ಬಿದ್ದ ಪ್ರದೇಶ ಕಾರ್ಕಳದ ರೆಂಜಾಳ ಮತ್ತು ನೀರೆ ಗ್ರಾ. ಪಂ. ವ್ಯಾಪ್ತಿಯಲ್ಲಿ ದಾಖಲಾಗಿದೆ. ಒಟ್ಟಾರೆ ಕಾರ್ಕಳ ತಾಲೂಕಿನಲ್ಲಿ 201.7 ಮಿ.ಮೀ. ಸರಾಸರಿ ಮಳೆಯಾಗಿದೆ. ರೆಂಜಾಳ ಗ್ರಾ. ಪಂ. ನಲ್ಲಿ 272.5 ಮಿ. ಮೀ. ನೀರೆ ಗ್ರಾ . ಪಂ. ನಲ್ಲಿ 270 ಮಿ.ಮೀ. ಮಳೆ ಸುರಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next