Advertisement

ಪ್ರಾಯೋಗಿಕ ಅನುಷ್ಠಾನಕ್ಕೆ ಉಡುಪಿ ಜಿಲ್ಲೆ ಆಯ್ಕೆ

12:41 AM Dec 08, 2021 | Team Udayavani |

ಉಡುಪಿ: ಡಿಜಿಟಲ್‌ ಇಂಡಿಯಾದ ಭಾಗವಾಗಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯೂ ಇದರಲ್ಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

Advertisement

ವಿಪತ್ತು ಸಂದರ್ಭದಲ್ಲಿ ತುರ್ತು ಪರಿಹಾರ ಮತ್ತು ಸಂಪನ್ಮೂಲ ಕ್ರೋಡೀಕರಣ, ಉಪಕರಣಗಳು ಮತ್ತು ಮಾನವ ಸಂಪನ್ಮೂಲ ಕ್ರಮ ಗಳನ್ನು ಕೈಗೊಳ್ಳಲು ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆ ಮತ್ತು ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಅತ್ಯಂತ ಅಗತ್ಯವಿದೆ.

ಜಿಲ್ಲಾ ವಿಪತ್ತು ಪರಿಣಿತರಿಗೆ ಯೋಜನೆಯ ತಂತ್ರಾಂಶಗಳ ಬಳಕೆ ಮತ್ತು ಕಾರ್ಯವಿಧಾನಗಳ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ಅಧಿಕಾರಿ ಮತ್ತು ತುರ್ತು ರಕ್ಷಣೆಗೆ ಸಿಬಂದಿಗಳ ಮಾಹಿತಿ ಕ್ರೋಡೀ ಕರಣ ಕಾರ್ಯ ಆರಂಭಗೊಂಡಿದೆ. ಮುಖ್ಯ ತರಬೇತುದಾರರಿಂದ ಮೊಬೈಲ್‌ ತಂತ್ರಾಂಶದ ಬಳಕೆ ಕುರಿತು ತರಬೇತಿ ನಡೆಯಲಿದೆ. ಜಿಲ್ಲೆಯ ಎಲ್ಲ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೂ ಕ್ಷೇತ್ರ ಮೌಲ್ಯಮಾಪನ ಕುರಿತು ತರಬೇತಿ ನಡೆಯಲಿದೆ. 2022ರ ಜನವರಿ ಅಂತ್ಯದೊಳಗೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯ ಕರಡು ರಚಿಸುವ ಗುರಿ ಹೊಂದಲಾಗಿದೆ.

ಯೋಜನೆಯ ಅನುಕೂಲ :
ಈ ಯೋಜನೆಯು ವಿಪತ್ತು ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಗಳ ಮಾಹಿತಿ, ದತ್ತಾಂಶ, ಸಂಪನ್ಮೂಲ ಗಳು ಹಾಗೂ ಜಿಲ್ಲಾ ಮಟ್ಟದ ವಿಪತ್ತು ಸಂಭವನೀಯ ಪ್ರದೇಶಗಳ ನಕ್ಷೆ, ವಿಪತ್ತು ನಿರ್ವಹಣೆಯಲ್ಲಿ ಪ್ರಮಾಣಿತ ವಿಪತ್ತು ಕಾರ್ಯಾಚರಣೆ ಕಾರ್ಯವಿಧಾನಗಳು, ಮಾರ್ಗಸೂಚಿ ಗಳನ್ನು ಒಳಗೊಂಡಿದೆ. ಇದಕ್ಕಾಗಿ ವಿಪತ್ತು ನಿರ್ವಹಣೆಯ ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳು ವಿಪತ್ತು ನಿರ್ವಹಣೆಗೆ ಅಗತ್ಯವಾದ ಮಾಹಿತಿ, ದತ್ತಾಂಶಗಳ ಸಂಗ್ರಹಣೆ ಮತ್ತು ರವಾನೆ, ಸಂಯೋಜನೆಗಾಗಿ ಮೊಬೈಲ್‌ ತಂತ್ರಾಂಶ ಮತ್ತು ಅಂತರ್ಜಾಲ ತಾಣವನ್ನು ಅಭಿವೃದ್ಧಿ ಗೊಳಿಸಲಾಗಿದೆ.

ಇದನ್ನೂ ಓದಿ:ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

Advertisement

ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಪ್ರದೇಶದಲ್ಲಿ ರಕ್ಷಣೆಗೆ ಅಗತ್ಯ ವಿರುವ ಲಭ್ಯ ಸಂಪನ್ಮೂಲಗಳು, ಲಭ್ಯವಿರುವ ಸಿಬಂದಿ, ವಿಪತ್ತು ನಿರ್ವಹಣ ತರಬೇತಿ ಹೊಂದಿದ ಸ್ಥಳೀಯ ನಿವಾಸಿಗಳು, ಸಮೀಪದ ಶಾಲೆ, ಆಸ್ಪತ್ರೆ, ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಮತ್ತು ಸಿಬಂದಿ, ಕಾಳಜಿ ಕೇಂದ್ರಗಳ ಮಾಹಿತಿ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಮೊಬೈಲ್‌ ಸಂಖ್ಯೆಗಳು ಬೆರಳ ತುದಿಯಲ್ಲಿಯೇ ಈ ಯೋಜನೆಯ ಮೂಲಕ ಲಭ್ಯವಾಗಲಿದೆ. ರಕ್ಷಣಾ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಕೈಗೊಳ್ಳಲು ಯೋಜನೆ ನೆರವಾಗಲಿದೆ ಎಂಬ ವಿವರ ನೀಡಿದ್ದಾರೆ.

ಸಾರ್ವಜನಿಕರು ಉಪಯೋಗ:
ಯೋಜನೆಗೆ ಅಗತ್ಯವಾದ ವಿವಿಧ ಇಲಾಖೆಗಳ ಅಧಿಕೃತ ಮಾಹಿತಿ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿ ಸಮನ್ವಯ ಮತ್ತು ಮೇಲ್ವಿಚಾರಣೆ ಅತ್ಯಗತ್ಯವಾಗಿದೆ. ಮಾಹಿತಿ, ದತ್ತಾಂಶ ಸಂಗ್ರಹಣೆ ಮತ್ತು ಅವುಗಳನ್ನು ಅಧಿಕೃತಗೊಳಿಸಲು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯೋಜನೆಯು ಸಂಪೂರ್ಣವಾಗಿ ಸಿದ್ಧಗೊಂಡ ನಂತರ, ಅದರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಸಾರ್ವಜನಿಕರೂ ಸಹ ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗುವುದು. ಇದರಿಂದ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ವಿಪತ್ತು ಸಂಭವಿಸಿದಾಗ ಲಭ್ಯವಿರುವ ಸುರಕ್ಷಾ ಉಪಕರಣಗಳು, ತುರ್ತು ಸಂದರ್ಭದಲ್ಲಿ ತೆರಳಬೇಕಾದ ಸಮೀಪದ ಸುರಕ್ಷಿತ ಸ್ಥಳಗಳು, ಅಲ್ಲಿಗೆ ತಲುಪಬೇಕಾದ ರಸ್ತೆ ಮಾರ್ಗ, ತಮ್ಮನ್ನು ಹುಡುಕಲು ಮತ್ತು ರಕ್ಷಿಸಲು ಸಂಪರ್ಕಿಸಬಹುದಾದ ಸಿಬಂದಿಗಳ ಮಾಹಿತಿ ಪಡೆಯಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದ್ದಾರೆ.

ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಎಲ್ಲ ಅತ್ಯಾವಶ್ಯಕ ಸೌಲಭ್ಯಗಳ ವಿವರ ಒಂದೇ ಕಡೆ ದೊರೆಯುವಂತೆ ಮಾಹಿತಿಗಳು ಕ್ರೋಡೀಕರಿಸುತ್ತಿದ್ದೇವೆ. ವಿಪತ್ತಿನ ಸಂದರ್ಭದಲ್ಲಿ ವಿಳಂಬವಿಲ್ಲದೇ ಶೀಘ್ರ ರಕ್ಷಣಾ ಕಾರ್ಯಚರಣೆಗೆ ಅನುಕೂಲವಾಗಲಿದೆ. ಇದಕ್ಕೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ನೆರವು ನೀಡಲಿದೆ.
-ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next