Advertisement

ಮಾರ್ಚ್‌ನೊಳಗೆ ನೀರಿನ ಕಾಮಗಾರಿ ಪೂರ್ಣಗೊಳಿಸಿ

12:30 AM Feb 28, 2019 | Team Udayavani |

ಉಡುಪಿ: ಜಿಲ್ಲಾ ಪಂಚಾಯತ್‌ ವತಿಯಿಂದ ಕೈಗೊಂಡಿರುವ ಎಲ್ಲ ಕುಡಿಯುವ ನೀರು ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದ ಒಳಗೆ ಪೂರ್ಣಗೊಳಿಸಿ, ಯಾವುದೇ ಕಾಮಗಾರಿಗಳನ್ನು ಬಾಕಿ ಇರಿಸಿಕೊಳ್ಳಬೇಡಿ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.

Advertisement

ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟುಗಳಿಗೆ ಹಾಕಿರುವ ಹಲಗೆಯಲ್ಲಿ ಕೆಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ಅದನ್ನು ಕೂಡಲೇ ಸರಿಪಡಿಸಿ ಮತ್ತು ಉದ್ಯಾವರದಲ್ಲಿ ಕಿಂಡಿ ಅಣೆಕಟ್ಟಿಗೆ ಕೂಡಲೇ ಹಲಗೆ ಹಾಕಬೇಕು ಎಂದರು.

ತೆರಿಗೆ ವಸೂಲಿ ಪ್ರಮಾಣ ಕಡಿಮೆ
ಗ್ರಾಮ ಪಂಚಾಯತ್‌ಗಳ ತೆರಿಗೆ ವಸೂಲಾತಿ ಪ್ರಮಾಣ ಕಡಿಮೆ ಇದ್ದು, ವಸೂಲಾದ ತೆರಿಗೆಯನ್ನು ಅದೇ ದಿನ ಜಮೆ ಮಾಡುವಂತೆ ತಿಳಿಸಿದ ಜಿಲ್ಲಾ ಪಂಚಾಯತ್‌ ಸಿಇಒ ಸಿಂಧೂ ಬಿ. ರೂಪೇಶ್‌, ತೆರಿಗೆ ವಸೂಲಾತಿಯಲ್ಲಿ ಸಂಪೂರ್ಣ ಗುರಿ ಸಾಧಿಸುವಂತೆ ತಿಳಿಸಿದರು. ಕಟ್ಟಡ ಬಾಡಿಗೆ ವಸೂಲಿ ಪ್ರಮಾಣವೂ ಕಡಿಮೆ ಇದ್ದು, ಮಾರ್ಚ್‌ ಅಂತ್ಯದೊಳಗೆ ಸಂಪೂರ್ಣ ತೆರಿಗೆ ವಸೂಲಾತಿ ಮಾಡುವಂತೆ ತಿಳಿಸಿದರು. ಎಸ್‌ಸಿಪಿ ಟಿಎಸ್‌ಪಿ ಯೋಜನೆಗಳಲ್ಲಿ ಪ್ರಗತಿ ಕುಂಠಿತವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಂಗನ ಕಾಯಿಲೆ ನಿಯಂತ್ರಣದಲ್ಲಿ
ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮ ರಾವ್‌ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮಂಗಗಳ ಸಾವಿನ ಪ್ರಕರಣವೂ ವಿರಳವಾಗಿದೆ. ಆದರೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ಮುಂದಿನ ದಿನಗಳಲ್ಲಿ ನಿರ್ಮಿಸಲಾಗಲಿರುವ ಶೌಚಾಲಯಗಳಲ್ಲಿ ಟ್ವಿನ್‌ ಪಿಟ್‌ ಟಾಯ್ಲೆಟ್‌ ನಿರ್ಮಿಸಬೇಕಿದ್ದು, ಈ ಕುರಿತಂತೆ ಎಲ್ಲ ಪಂಚಾಯತ್‌ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಹೇಳಿದರು.

Advertisement

ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ್‌ ಎಸ್‌. ಕೋಟ್ಯಾನ್‌ ಉಪಸ್ಥಿತರಿದ್ದರು.

ಮರಳು ಸಮಸ್ಯೆ: ಪರಿಹಾರಕ್ಕೆ ಸೂಚನೆ
ಮರಳಿನ ಕೊರತೆಯಿಂದ ವಸತಿ ನಿರ್ಮಾಣ ಚಟುವಟಿಕೆ ಕುಂಠಿತವಾಗಿದ್ದು, ಮರಳು ಲಭ್ಯತೆ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಉತ್ತರಿಸಿ, ಜಿಲ್ಲೆಯಲ್ಲಿ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿನ 21 ಬ್ಲಾಕ್‌ ಗಳನ್ನು ಲೋಕೋಪಯೋಗಿ, ನಿರ್ಮಿತಿ, ಕೆ.ಆರ್‌.ಐ.ಡಿ.ಎಲ್‌., ಪಿ.ಆರ್‌.ಇ.ಡಿ., ಗ್ರಾಮ ಪಂಚಾಯತ್‌ ಸೇರಿದಂತೆ ವಿವಿಧ ಸರಕಾರಿ ಸಂಸ್ಥೆಗಳಿಗೆ ಮರಳುಗಾರಿಕೆ ಮಾಡಲು ಅನುಮತಿ ನೀಡಲಾಗಿದೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 7 ಮರಳು ದಿಬ್ಬಗಳಿಗೆ ಕೆ.ಸಿ.ಝಡ್‌.ಎಂ.ಎ.ನಿಂದ ಅನುಮೋದನೆ ದೊರೆತಿದ್ದು, ಇದರಲ್ಲಿ 7,96,522 ಮೆ.ಟನ್‌ ಮರಳು ತೆರವುಗೊಳಿಸಲು ಅನುಮೋದನೆ ದೊರೆತಿದೆ. ಜಿಲ್ಲಾ 7 ಸದಸ್ಯರ ಸಮಿತಿ ಸಭೆಯನ್ನು ಕರೆದು ಶೀಘ್ರದಲ್ಲಿ ಹಂಚಿಕೆ ಮಾಡಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next