Advertisement

ಸಮೂಹ ಸಾರಿಗೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಯಾಣ!

01:37 AM May 31, 2019 | Team Udayavani |

ಉಡುಪಿ: ಪ್ರತಿನಿತ್ಯ ಹವಾನಿಯಂತ್ರಿತ ವಾಹನದಲ್ಲಿ ಓಡಾಡುತ್ತಿದ್ದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರ ಸಿಬಂದಿ ಗುರುವಾರ ಸಾರ್ವಜನಿಕ ಸಾರಿಗೆ ಕಲ್ಪನೆಯಲ್ಲಿ ಪ್ರಯಾಣಿಸಿ ಸಮೂಹ ಸಾರಿಗೆ ಬಳಕೆಗೆ ಮುನ್ನುಡಿ ಬರೆದರು.

Advertisement

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶನದಲ್ಲಿ ಎಲ್ಲರೂ ವಾರ್ತಾ ಇಲಾಖೆಯ ವಾಹನದಲ್ಲಿ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ನಿವಾಸದಿಂದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ವಾಹನ ಚಾಲಕ ಮತ್ತು ಅಂಗರಕ್ಷಕರೊಂದಿಗೆ ವಾಹನ ಏರಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರೂ ಜಿಲ್ಲಾಧಿಕಾರಿಗೆ ಸಾಥ್‌ ನೀಡಿದರು. ಅಜ್ಜರಕಾಡು ವಸತಿ ಗೃಹದಲ್ಲಿರುವ ವಿವಿಧ ಅಧಿಕಾರಿ ಗಳೂ ತಮ್ಮ ಸರಕಾರಿ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಏರಿದರು. ವಸತಿಗೃಹದಲ್ಲಿರುವ ವಿವಿಧ ಇಲಾಖೆ ಸಿಬಂದಿ ಸೇರಿಕೊಂಡರು.

ಡಿಸಿ ನಿವಾಸದಿಂದ ಹೊರಟ ವಾಹನ, ಬನ್ನಂಜೆಯ ತಾಲೂಕು ಕಚೇರಿ ಮಾರ್ಗವಾಗಿ, ಸಿಟಿ ಬಸ್‌ ನಿಲ್ದಾಣ, ಎಂಜಿಎಂ ಕಾಲೇಜು ಮಾರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಕಾಯುತ್ತಿದ್ದ ವಿವಿಧ ಅಧಿಕಾರಿ ಮತ್ತು ಸಿಬಂದಿ ಯೊಂದಿಗೆ ಕಚೇರಿ ತಲುಪಿತು.

ಸಂಜೆ ಕಚೇರಿ ಮುಕ್ತಾಯದ ಅನಂತರವೂ ಸಾರ್ವಜನಿಕ ವಾಹನ ದಲ್ಲಿಯೇ ಎಲ್ಲರೂ ಮರಳಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಎಚ್‌.ಆರ್‌. ಲಮಾಣಿ ಮತ್ತಿತರರು ಪ್ರಯಾಣಿಸಿದರು.

Advertisement

ಪ್ರತಿ ಗುರುವಾರ ಇದೇ ವ್ಯವಸ್ಥೆ
ವಾರದಲ್ಲಿ ಒಂದು ದಿನವಾದರೂ ಎಲ್ಲ ಅಧಿಕಾರಿ, ಸಿಬಂದಿ ಸಾರ್ವಜನಿಕ ಸಾರಿಗೆ ಬಳಸಿದರೆ ವಾಯುಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದೆ. ಜತೆಗೆ ಸಾರ್ವಜನಿಕ ಸಾರಿಗೆಗೂ ಉತ್ತೇಜನ ದೊರೆಯಲಿದೆ ಎಂಬುದು ಜಿಲ್ಲಾಧಿಕಾರಿಯವರ ಚಿಂತನೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂಬ ಆಶಯವೂ ಅವರಿಗೆ ಇದೆ. ಈ ಕಾರಣಕ್ಕಾಗಿ ಪ್ರತಿ ಗುರುವಾರ ಈ ರೀತಿಯ ಸಮೂಹ ಸಾರಿಗೆ ಬಳಸಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next