Advertisement

ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅಧಿಕಾರ ಸ್ವೀಕಾರ

09:14 AM Aug 22, 2019 | sudhir |

ಉಡುಪಿ: ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್‌ ಮಂಗಳವಾರ ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಂದ ಅಧಿಕಾರ ಸ್ವೀಕರಿಸಿದರು.

Advertisement

ಕಡೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎರಡು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಜಗದೀಶ್‌ ಅವರು ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2006-07ರಲ್ಲಿ ಉಡುಪಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್‌, ಹೇಮಲತಾ ಅವರ ಸೇವಾವಧಿಯಲ್ಲಿ ಪ್ರೊಬೆಶನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆಗ ಕುಂದಾಪುರ ತಾ.ಪಂ. ಇಒ, ತಹಶೀಲ್ದಾರ್‌ ಆಗಿಯೂ ಕಾರ್ಯ ನಿರ್ವಹಿಸಿದ್ದರು. 2007-09ರಲ್ಲಿ ಸವಣೂರು, 2009-11ರಲ್ಲಿ ಶಿರಸಿ ಉಪವಿಭಾಗಾಧಿಕಾರಿ, 2011-13ರಲ್ಲಿ ಹಾವೇರಿ ಅಪರ ಜಿಲ್ಲಾಧಿಕಾರಿ, 2013-15 ರಲ್ಲಿ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ, 2015-16ರಲ್ಲಿ ಅರಣ್ಯ ಸಚಿವರ ಆಪ್ತ ಕಾರ್ಯದರ್ಶಿ, 2016-17ರಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಐಎಎಸ್‌ಗೆ ಭಡ್ತಿಗೊಂಡ ಬಳಿಕ 2018ರಿಂದ ಹಾಸನ ಜಿ.ಪಂ., ಕೋಲಾರ ಜಿ.ಪಂ. ಸಿಇಒ ಆದರು. 11 ತಿಂಗಳಿಂದ ಕೋಲಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮರಳು ಸಮಸ್ಯೆ: ಸೂಕ್ತ ಕ್ರಮ
ಸುದ್ದಿಗಾರರ ಜತೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಪ್ರೊಬೆಶನರಿಯಾಗಿ ಸೇವೆ ಸಲ್ಲಿಸುವಾಗ ಕಂದಾಯ ಇಲಾಖೆಗೆ
ಸಂಬಂಧಪಟ್ಟ ವಿಷಯಗಳನ್ನು ವಿಶೇಷವಾಗಿ ತಿಳಿದುಕೊಂಡಿದ್ದೆ. ನಾನು ಅರಣ್ಯ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದಾಗ ಡೀಮ್ಡ್ ಅರಣ್ಯ ಮತ್ತು ಡೀಮ್ಡ್ ಅಲ್ಲದ ಅರಣ್ಯ ಪಟ್ಟಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಮರಳು ಸಮಸ್ಯೆ, ನೀರಿನ ಸಮಸ್ಯೆ ಬಗೆಗೆ ತಿಳಿದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅತ್ಯುತ್ತಮ ಜಿಲ್ಲೆ
ಉಡುಪಿ ಜಿಲ್ಲೆಗೆ ಬರಬೇಕೆಂದು ಹೋದ ವರ್ಷವೇ ಬೇಡಿಕೆ ಸಲ್ಲಿಸಿದ್ದೆ. ಮುಂದೆ ಯಾವ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡರೂ ಆರಂಭದಲ್ಲಿ ಅತ್ಯುತ್ತಮ ವ್ಯವಸ್ಥೆಯ ಜಿಲ್ಲೆಯಲ್ಲಿ ಮಾಡಿದ ಸೇವಾನುಭವ ಸಹಕಾರಿಯಾಗುತ್ತದೆ.

ನಾನಿನ್ನು ಹತ್ತು ವರ್ಷ ಇದೇ ಶ್ರೇಣಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಅನುಕೂಲವಿದೆ ಎಂದು ಜಗದೀಶ್‌ ಹೇಳಿದರು.
ಕೋಲಾರದ ಅನುಭವವನ್ನು ಇಲ್ಲಿ ಅನ್ವಯ ಮಾಡಲು ಆಗುವುದಿಲ್ಲ. ಕೋಲಾರದಲ್ಲಿ ಮಳೆ ಕೊರತೆ ಭಾರೀ ಇದೆ. ಅಲ್ಲಿ 1,000 ಚೆಕ್‌ಡ್ಯಾಮ್‌ ನಿರ್ಮಿಸುವ ಗುರಿ ಹೊಂದಿದ್ದು 650ನ್ನು ಪೂರ್ಣಗೊಳಿಸಿದೆ. ಅಲ್ಲಿ ತೀವ್ರ ನೀರಿನ ತೀವ್ರ ಕೊರತೆ ಇದ್ದರೂ ರೈತರು ಕಷ್ಟಪಟ್ಟು ರಫ್ತು ಮಾಡುವ ಉತ್ಪನ್ನಗಳನ್ನು ತಯಾರಿಸುತ್ತಾರೆ. ನನ್ನ ಅರ್ಧಾಂಶ ಶಕ್ತಿ ಕುಡಿಯುವ ನೀರಿನ ಪೂರೈಕೆಗೆ ವಿನಿಯೋಗವಾಯಿತು ಎಂದರು.

Advertisement

ವರ್ಷದಲ್ಲಿ 3 ವರ್ಗ
ಐಎಎಸ್‌ ಶ್ರೇಣಿಗೆ ಭಡ್ತಿಗೊಂಡ ಬಳಿಕ ಜಗದೀಶ್‌ ಅವರು ಹಾಸನ ಜಿ.ಪಂ. ಸಿಇಒ, ಕೋಲಾರ ಜಿ.ಪಂ. ಸಿಇಒ, ಈಗ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗವಾದರು. ಒಂದು ವರ್ಷದಲ್ಲಿ ಇವರಿಗೆ ಮೂರು ಬಾರಿ ವರ್ಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next