Advertisement

ಮುಂಬಯಿಗರ ಆಗಮನಕ್ಕೆ ಉಡುಪಿ ಜಿಲ್ಲಾಡಳಿತ ಅಸ್ತು

08:28 AM May 09, 2020 | Hari Prasad |

ಉಡುಪಿ: ಇದುವರೆಗೆ ಮುಂಬಯಿಯಲ್ಲಿ ನೆಲೆಸಿದ್ದವರಿಗೆ ಆಗಮಿಸಲು ರಾಜ್ಯ ಸರಕಾರ ಅನುಮತಿ ಕೊಟ್ಟಿರಲಿಲ್ಲ. ಇದೀಗ ಉಡುಪಿ ಜಿಲ್ಲೆಗೆ ಮುಂಬಯಿ ನಿವಾಸಿಗರು ಆಗಮಿಸುವುದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆದು ಷರತ್ತುಬದ್ಧ ಅನುಮತಿ ನೀಡಲಾಯಿತು.

ಸೇವಾ ಸಿಂಧು ಇ ಪಾಸ್‌ನಡಿ ಸುಮಾರು 5,000 ಜನರು ಹೆಸರು ನೋಂದಾಯಿಸಿದ್ದು ಇದರಲ್ಲಿ 4,000 ಮಂದಿ ಮುಂಬಯಿ ನಿವಾಸಿಗಳಾಗಿದ್ದಾರೆ. ಒಟ್ಟು ಸುಮಾರು 10,000 ಜನರು ಆಗಮಿಸುವ ನಿರೀಕ್ಷೆ ಇದೆ.

ಮುಂಬಯಿಯಿಂದ ಆಗಮಿಸುವವರಿಗೆ ಷರತ್ತುಬದ್ಧ ಅನುಮತಿ ನೀಡಲು ಸಭೆ ನಿರ್ಧರಿಸಿತು. ಇವರು ಮೊದಲು 14 ದಿನ ಶಾಲೆ, ಕಾಲೇಜು, ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ನಲ್ಲಿರಬೇಕು, ಬಳಿಕ 14 ದಿನ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿರಬೇಕು. ಶಾಲೆ ಕಾಲೇಜುಗಳಲ್ಲಿ ಉಳಿದುಕೊಳ್ಳಲು ಕಷ್ಟ ಎನ್ನುವವರು ಹಣ ಪಾವತಿಸಿ ಹೊಟೇಲ್‌ ಲಾಡ್ಜ್ ಗಳಲ್ಲಿ ಉಳಿದುಕೊಳ್ಳಬಹುದು.

ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಯವರಲ್ಲಿ ದೂರವಾಣಿ ಮೂಲಕ ಮಾತನಾಡಿ, ಮುಂಬಯಿಯಲ್ಲಿ ನೆಲೆಸಿದವರು ಊರಿಗೆ ಬರಬೇಕೆಂಬ ಭಾರೀ ಒತ್ತಾಯವಿದೆ. ಅವರ ಕ್ವಾರಂಟೈನ್‌ ಜವಾಬ್ದಾರಿಯನ್ನು ಜಿಲ್ಲಾಡಳಿತ, ಆಯಾ ಕ್ಷೇತ್ರ ಶಾಸಕರು ವಹಿಸಿಕೊಳ್ಳುತ್ತಾರೆಂದು ಮನಗಾಣಿಸಿದರು. ಬಳಿಕ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿತೆಂದು ಸಭೆಯಲ್ಲಿ ಪಾಲ್ಗೊಂಡ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಶಾಸಕರಾದ ಸುನಿಲ್‌ ಕುಮಾರ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಎಸ್‌ಪಿ ವಿಷ್ಣುವರ್ಧನ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್‌ಚಂದ್ರ ಸೂಡ, ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ಕರಾವಳಿಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

ಆನ್‌ಲೈನ್‌ ನೋಂದಣಿ ಕಡ್ಡಾಯ
ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೆಳಗಿನ ಆನ್‌ಲೈನ್‌ ಮೂಲಕ ನೋಂದಣಿ ಮಾಡಕೊಳ್ಳಬೇಕು: sevasindhu.karnataka.gov.in

ಸೇವಾಸಿಂಧು ವಿಳಂಬ: ಹೊರರಾಜ್ಯ ಕನ್ನಡಿಗರ ಅಸಮಾಧಾನ
ಹೊರ ರಾಜ್ಯಗಳಲ್ಲಿ ಬಾಕಿಯಾಗಿ ಜಿಲ್ಲೆಗೆ ಪ್ರವೇಶ ಪಡೆಯಲು ಕಾಯುತ್ತಿರುವವರು ಸೇವಾಸಿಂಧು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವ‌ರಿಗೆ ಅವಕಾಶ ಸಿಗುವಾಗ ವಿಳಂಬವಾಗುತ್ತಿದೆ ಎಂದು ಹೊರ ರಾಜ್ಯಗಳಲ್ಲಿರುವ ಅನೇಕ ಮಂದಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತರ ರಾಜ್ಯಗಳಲ್ಲಿ ಆನ್‌ಲೈನ್‌ ನೋಂದಣಿಯ ಅನಂತರ ಒಂದು ದಿನದ ಅಂತರದಲ್ಲಿ ಪ್ರಯಾಣಕ್ಕೆ ಅವಕಾಶ ಸಿಗುತ್ತಿದೆ. ಆದರೇ ಸೇವಾ ಸಿಂಧುವಿನಲ್ಲಿ ನೋಂದಾಯಿಸಿಕೊಂಡಲ್ಲಿ ತಡವಾಗುತ್ತಿದೆ ಎಂಬುದು ಅವರ ಆರೋಪ. ಐದು ದಿನಗಳಾದರೂ ನಮ್ಮ ಅರ್ಜಿ ವಿಲೇವಾರಿಯಾಗಿರಲಿಲ್ಲ.

ಗೃಹ ಸಚಿವರು, ರಾಜ್ಯ ನೋಡೆಲ್‌ ಅಧಿಕಾರಿ, ಸಂಸದರು, ಶಾಸಕರ ಗಮನಕ್ಕೆ ತಂದ ಬಳಿಕ ಗುರುವಾರ ಸಂಜೆ ಗಡಿಯಲ್ಲಿ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಿದರು ಎಂದು ಗುಜರಾತಿನಲ್ಲಿ ಕರ್ತವ್ಯದಲ್ಲಿರುವ ವೈದ್ಯ ರೊಬ್ಬರು ಉದಯವಾಣಿ ಕಚೇರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next