ಉಡುಪಿ: ಕಳೆದ ವಿಧಾನಸಭೆ (2013) ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ 1,04,671 ಮಂದಿ ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಂತಿಮ ಮತದಾರರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದರೆ ಚುನಾವಣೆ ಅಧಿಸೂಚನೆ ಪ್ರಕಟವಾಗುವವರೆಗೂ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳಿಗೆ ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಫೆ. 28ಕ್ಕೆ ಮತದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 9,78,503 ಮಂದಿ ಮತದಾರರಿದ್ದಾರೆ. ಬೈಂದೂರಿನಲ್ಲಿ 2,18,863, ಕುಂದಾಪುರದಲ್ಲಿ 1,97,061, ಉಡುಪಿಯಲ್ಲಿ 2,03,777, ಕಾಪುವಿನಲ್ಲಿ 1,79,794 ಮತ್ತು ಕಾರ್ಕಳದಲ್ಲಿ 1,79,008 ಮತದಾರರಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 8,73,832 ಮತದಾರರಿದ್ದರು.
ಮತದಾರರ ಪಟ್ಟಿಯನ್ನು ಡಿಡಿಡಿ.cಛಿಟkಚrnಚಠಿಚkಚ.kಚr.nಜಿc.ಜಿn ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಮತ್ತು ಹೊಸ ಮತದಾರರ ಸೇರ್ಪಡೆಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಭೇಟಿಯಾಗಬಹುದು ಎಂದವರು ತಿಳಿಸಿದರು.
ಮಹಿಳಾ ಮತದಾರರು ಅಧಿಕ: ಜಿಲ್ಲೆಯಲ್ಲಿ ಒಟ್ಟು 5,07,773 ಮಹಿಳಾ ಮತದಾರರು, 4,70,730 ಪುರುಷ ಮತದಾರರಿದ್ದಾರೆ. ಬೈಂದೂರಿನಲ್ಲಿ 1,12,667 ಮಹಿಳಾ ಮತದಾರರು, 1,06,196 ಪುರುಷ ಮತದಾರರಿದ್ದಾರೆ. ಕುಂದಾಪುರದಲ್ಲಿ 1,02,408 ಮಹಿಳಾ ಮತದಾರರು, 94, 653 ಪುರುಷ ಮತದಾರರಿದ್ದಾರೆ. ಉಡುಪಿಯಲ್ಲಿ 1,05,018 ಮಹಿಳಾ ಮತದಾರರು ಹಾಗೂ 98,759 ಪುರುಷ ಮತದಾರರಿದ್ದಾರೆ. ಕಾಪುವಿನಲ್ಲಿ 94,348 ಮಹಿಳಾ ಮತದಾರರು ಹಾಗೂ 85,446 ಪುರುಷ ಮತದಾರರಿದ್ದಾರೆ. ಕಾರ್ಕಳದಲ್ಲಿ ಮಹಿಳಾ ಮತದಾರರ ಸಂಖ್ಯೆ 93,332, ಪುರುಷ ಮತದಾರರ ಸಂಖ್ಯೆ 85,676 ಇದೆ. ಜಿಲ್ಲೆಯಲ್ಲಿ 18 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಅವರು ವಿವರಿಸಿದರು.
ಬೂತ್‌ಗಳ ಸಂಖ್ಯೆ ಹೆಚ್ಚಳ: 2013ರ ವಿಧಾನಸಭಾ ಚುನಾವಣೆಯಲ್ಲಿ 1,038 ಮತಗಟ್ಟೆಗಳಿದ್ದವು. 2014ರ ಲೋಕಸಭಾ ಚುನಾವಣೆಯಲ್ಲಿ 1,059 ಬೂತ್‌ಗಳಿದ್ದವು. ಈ ಬಾರಿ 1,078ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಮತದಾರರ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದರಿಂದ ಮತ್ತು ವಿವಿ ಪ್ಯಾಟ್ ಬಳಕೆಯಿಂದ ಮತದಾನ ನಿಧಾನವಾಗುವುದರಿಂದ ಮತಗಟ್ಟೆಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅನುರಾಧಾ ತಿಳಿಸಿದರು. ಮತಗಟ್ಟೆಗಳಲ್ಲಿ ಅಂಧರು, ಅಂಗವಿಕಲರಿಗಾಗಿ ವೀಲ್‌ಚೇರ್ ಒದಗಿಸಲಾಗುವುದು. ಜಿಲ್ಲೆಯಲ್ಲಿ ಇಂತಹ 8,000 ಮತದಾರರಿದ್ದಾರೆ ಎಂದು ಜಿ.ಪಂ.ಸಿಇಒ ಶಿವಾನಂದ ಕಾಪಶಿ ತಿಳಿಸಿದರು.