Advertisement

ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆಯಾಗಿ ಉಡುಪಿ-ಘೋಷಣೆ

08:31 AM Dec 12, 2017 | Team Udayavani |

ಉಡುಪಿ: ಉಡುಪಿ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆಯಾಗಿ ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ ಅವರು
ಡಿ. 11ರಂದು ಉಡುಪಿಯ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ಗುಲಾಬಿ ಆಂದೋಲನ ಕಾರ್ಯಕ್ರಮದಲ್ಲಿ ಘೋಷಿಸಿದರು. 

Advertisement

ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕುರಿತು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದಿದ್ದು, ವಿವಿಧೆಡೆಗಳಲ್ಲಿ ದಾಳಿಗಳನ್ನು ಕೂಡ ಆಯೋಜಿಸಲಾಗಿತ್ತು. ಇಂತಹ ನಿರಂತರ ಕಾರ್ಯಕ್ರಮಗಳಿಂದ ಕೋಟ್ಪಾ ಅನು ಷಾನದಲ್ಲಿ ಜಿಲ್ಲೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿಗಳ ಸಹಿ ಇರುವ ಘೋಷಣಾ ಪತ್ರವನ್ನು ಅಪರ ಜಿಲ್ಲಾಧಿಕಾರಿ ವಿತರಿಸಿದರು. 

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಯಶಪಾಲ್‌ ಎ. ಸುವರ್ಣ, ಎಸ್‌ಪಿ ಡಾ| ಸಂಜೀವ್‌ ಎಂ. ಪಾಟೀಲ್‌, ಸಂಬಂಧಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನ: ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿವರ್ಷ 10 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಭಾರತದಲ್ಲಿ ಶೇ.28ರಷ್ಟು ಜನರು ಯಾವುದಾದರೂ ಒಂದು ಬಗೆಯ ತಂಬಾಕು ಉತ್ಪನ್ನವನ್ನು ಬಳಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 1.5 ಕೋಟಿ ಜನರು ತಂಬಾಕು ಉತ್ಪನ್ನ ಬಳಕೆ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ತನಿಖಾದಳ ರಚಿಸಲಾಗಿದ್ದು, ಈವರೆಗೆ 1,933 ಪ್ರಕರಣಗಳನ್ನು ದಾಖಲು ಮಾಡಿ, 2,50,715 ರೂ. ದಂಡ ಮೊತ್ತವನ್ನು ಸಂಗ್ರಹಿಸಲಾಗಿದೆ, ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾಯ್ದೆಯ ಕುರಿತು ಅರಿವು ಮೂಡಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯ ಸುಮಾರು 1,200 ಶಾಲೆಗಳ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿ ಸಮುದಾಯದ ಮೂಲಕ ಏಕಕಾಲದಲ್ಲಿ “ಗುಲಾಬಿ ಚಳುವಳಿ’ ಹಮ್ಮಿಕೊಳ್ಳಲಾಗಿದೆ. ತಂಬಾಕು ಉತ್ಪನ್ನಗಳ ವಿರುದ್ಧದ ಜಾಗೃತಿಗೆ ಇನ್ನೂ ಹಲವಾರು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯನ್ನು “ಕೋಟ್ಪಾ-2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ’ ಎಂದು ಜಿಲ್ಲಾಡಳಿತದಿಂದ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.