Advertisement

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ

01:14 AM Mar 16, 2023 | Team Udayavani |

ಉಡುಪಿ: ಬೇಸಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಸಾಮಾನ್ಯವಾಗಿ ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತವೆ. ಜಿಲ್ಲೆಯಲ್ಲಿ ಸೆಪ್ಟಂಬರ್‌ನಿಂದ ಈವರೆಗೆ ವಾಡಿಕೆಯ ಮಳೆ ಬೀಳದೆ ಇರುವ ಕಾರಣ, ವಿವಿಧ ಭಾಗಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಗಳಿವೆ. ಆದ್ದರಿಂದ ಎಲ್ಲ ಸ್ಥಳೀ ಯಾ ಡಳಿತಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ನೀರಿನ ಸಮಸ್ಯೆಯಾದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕೆಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಉಪ ಯೋಗಕ್ಕೆ ಕಲ್ಪಿಸಬೇಕು. ಕುಡಿಯುವ ನೀರಿನ ಆವಶ್ಯವಿರುವ ತುರ್ತು ಕಾಮಗಾರಿಗಳನ್ನೂ ಸಹ ಕೈಗೆತ್ತಿಕೊಳ್ಳ ಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಕಾರ್ಯಪಡೆ ಪ್ರತಿ ಶುಕ್ರವಾರ ಸಭೆ ನಡೆಸಿ, ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕರು ಬೇಸಗೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಯಾರೂ ಕೂಡ ನೀರನ್ನು ಪೋಲು ಮಾಡಬಾರದು. ತೋಟಗಳಿಗೆ ವಾರಕ್ಕೊಮ್ಮೆ ನೀರು ಹಾಯಿಸುವ ಬಗ್ಗೆ ಯೋಚನೆ ಮಾಡಬಹುದು ಎಂದು ಕೃಷಿಕರಿಗೆ ಸಲಹೆ ನೀಡಿದರು.

Advertisement

ವಿಪತ್ತು ಪರಿಸ್ಥಿತಿಯ ಬಗೆಗೆ ಜನ ಸಾಮಾನ್ಯರಿಗೆ ಎಚ್ಚರಿಕೆ ನೀಡುವ ಡಿಎಂಆರ್‌ ಟವರ್‌ ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಶೀಘ್ರವಾಗಿ ನಿರ್ಮಿಸಿ ಅವುಗಳ ಕಾರ್ಯ ಚಾಲನೆ ಮಾಡಬೇಕು. ಇದರಿಂದ ಜನ ಸಾಮಾನ್ಯರಿಗೆ ವಿಪತ್ತಿನ ಮುನ್ಸೂಚನೆ ಗಳನ್ನು ನೀಡಲು ಸಾಧ್ಯವಾಗುವುದರ ಜತೆಗೆ ಸಾವು ನೋವುಗಳು ಆಗದಂತೆ ನೋಡಿಕೊಳ್ಳಬಹುದು. ಶಾಲಾ ಹಂತಗಳಲ್ಲಿಯೂ ವಿಪತ್ತು ನಿರ್ವಹಣೆ ಯೋಜನೆಯನ್ನು ಪ್ರತೀ ಶಾಲೆಯಲ್ಲೂ ಪರಿಷ್ಕರಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ವಿಪತ್ತು ಅರಿವು ಮೂಡಿಸುವ, ಅವರ ಕುಟುಂಬಕ್ಕೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು.

ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next