Advertisement

Drinking Water: 2025ರ ಡಿ.31 ರೊಳಗೆ 197 ಕೆರೆಗೆ ಭದ್ರಾ ನೀರು: ಡಿಸಿಎಂ ಡಿಕೆಶಿ

09:55 PM Jul 16, 2024 | Team Udayavani |

ವಿಧಾನಸಭೆ: ಭದ್ರಾ ಉಪ ಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ ನೀರನ್ನೆತ್ತಿ 197 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 2025 ರ ಡಿ.31 ರೊಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಕಾಂಗ್ರೆಸ್‌ನ ಎಚ್‌.ಡಿ. ತಮ್ಮಯ್ಯ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, 2020ರಲ್ಲೇ 1281.80 ಕೋಟಿ ರೂ. ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ವಿವಿಧ ಹಂತಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಕಡೂರು ಕೆರೆ ತುಂಬಿಸುವ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಂಡಿದ್ದು, ರಣಘಟ್ಟ ಕುಡಿಯುವ ನೀರು ಯೋಜನೆ ಸೇರಿ ಎಲ್ಲವನ್ನೂ 2025 ರ ಡಿ.31ರೊಳಗೆ ಪೂರ್ಣಗೊಳಿಸುತ್ತೇವೆ ಎಂದರು.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ದ್ವಾರಸಮುದ್ರ ಮತ್ತಿತರ 6 ಕೆರೆ ಹಾಗೂ ಚಿಕ್ಕಮಗಳೂರಿನ ಬೆಳವಾಡಿ ಕೆರೆ ತುಂಬಿಸುವ ರಣಘಟ್ಟ ಕುಡಿಯುವ ನೀರು ಯೋಜನೆಯ 125.46 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೂ (ಡಿಪಿಆರ್‌) 2021ರಲ್ಲಿ ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ. ಈವರೆಗೆ 30.70 ಕೋಟಿ ರೂ. ಬಿಡುಗಡೆಯಾಗಿದ್ದು, 2021ರಲ್ಲಿ ಗುತ್ತಿಗೆ ಪಡೆದ ಸಂಸ್ಥೆಯು 2022 ರಿಂದ ಕಾಮಗಾರಿ ಆರಂಭಿಸಿದೆ. 682 ಮೀಟರ್‌ ಉದ್ದದ ತೆರೆದ ನಾಲೆಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ್ದರಿಂದ ಕಾಮಗಾರಿ ತಡವಾಗಿದೆ. 2025 ರ ಡಿ.31 ರೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ.

ಅದೇ ರೀತಿ ಕಡೂರು ಕೆರೆ ತುಂಬಿಸುವ ಯೋಜನೆಯನ್ನು 4 ಹಂತಗಳಲ್ಲಿ ಕೈಗೊಂಡಿದ್ದು, ಈವರೆಗೆ 258.62 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದ ಕಾಮಗಾರಿಯನ್ನು 2021ರಲ್ಲಿ ಕೈಗೊಂಡಿದ್ದು, ಶೇ.75 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. 2ನೇ ಹಂತದ ಕಾಮಗಾರಿಯು 2023ರಲ್ಲಿ ಅರಂಭಗೊಂಡು ಶೇ.20 ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, 1.45 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ಮೊದಲ ಹಂತದ ಕಾಮಗಾರಿಯನ್ನು ಡಿ.31 ಹಾಗೂ ಎರಡನೇ ಹಂತದ ಕಾಮಗಾರಿಯನ್ನು 2025 ರ ಮಾ.31 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next