ಉಡುಪಿ : ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸರಕಾರಿ ಮತ್ತು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿ ಗೆಗಳ ಸಂಖ್ಯೆ ಹೆಚ್ಚಿಸುವಂತೆ ಜಿಲ್ಲಾಧಿ ಕಾರಿ ಜಿ. ಜಗದೀಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವೈದ್ಯಕೀಯ ಪರಿಣತರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ದ್ದ ಅವರು, ಬೆಡ್ ಮ್ಯಾನೇಜ್ ಮೆಂಟ್ ಸಿಸ್ಟಂನಲ್ಲಿ ಪ್ರತೀ ದಿನ ಆಸ್ಪತ್ರೆಗೆ ದಾಖಲಾಗುವ ಮತ್ತು ಬಿಡುಗಡೆಯಾಗುವ ರೋಗಿಗಳ ವಿವರವನ್ನು ಖಾಸಗಿ ಆಸ್ಪತ್ರೆಗಳು ದಾಖಲಿಸುವುದಲ್ಲದೇ, ಲಭ್ಯ ಹಾಸಿಗೆಗಳ ಸಂಖ್ಯೆ ಯನ್ನು ಪ್ರತೀ ದಿನ ನಿಖರವಾಗಿ ನಮೂದಿಸಬೇಕು. ಇದರಿಂದ ಹಾಸಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಬಹುದು ಎಂದರು.
ಸೋಂಕಿತರನ್ನು ಪರೀಕ್ಷಿಸಿ ಸೋಂಕು ತೀವ್ರವಾಗಿರದಿದ್ದರೆ ಹೋಂ ಐಸೋಲೇಶನ್ ಗೆ ಸೂಚಿಸಿ. ಅನಗತ್ಯವಾಗಿ ದಾಖಲು ಮಾಡಿಕೊಳ್ಳಬೇಡಿ. ಒಂದು ಆಸ್ಪತ್ರೆಯಿಂದ ಮತ್ತೂಂದು ಆಸ್ಪತ್ರೆಗೆ ಸೋಂಕಿತರನ್ನು ವರ್ಗಾಯಿಸುವಾಗ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ರೋಗಿಯ ಸಂಪೂರ್ಣ ವಿವರಗಳನ್ನು ದಾಖಲಿಸಿ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸಿಇಒ ಡಾ| ನವೀನ್ ಭಟ್, ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ|ಮಧುಸೂದನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ ಭಟ್ ಹಾಗೂ ಪರಿಣತ ಸಮಿತಿ ವೈದ್ಯರು ಉಪಸ್ಥಿತರಿದ್ದರು.
ಆಕ್ಸಿಜನ್ ಕೊರತೆ ಇಲ್ಲ
ಪ್ರಸ್ತುತ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೂ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಅಗತ್ಯವಿದ್ದಷ್ಟೇ ಆಕ್ಸಿಜನ್ ನೀಡಿ. ವ್ಯರ್ಥ ಮಾಡಬೇಡಿ. ರೆಮಿಡಿಸಿವರ್ ಸಹ ಅವಶ್ಯವಿದ್ದವರಿಗೆ ಮಾತ್ರ ನೀಡಿ ಎಂದು ವೈದ್ಯರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ಜಿಲ್ಲೆ ನಮ್ಮದು. ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸಿ ಎಂದು ಸಾರ್ವಜನಿಕರನ್ನು ಕೋರಿದರು.