Advertisement

ಮಾಸ್ಕ್ ಧರಿಸದಿದ್ದರೆ ದಂಡ, ಜಿಲ್ಲೆಯಾದ್ಯಂತ ಮಾಸ್ಕ್ ಡ್ರೈವ್‌ : ಉಡುಪಿ ಜಿಲ್ಲಾಧಿಕಾರಿ

07:39 PM Nov 29, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಪ್ರಥಮ ಡೋಸ್‌ ಕೋವಿಡ್‌ ಲಸಿಕೆ ನೀಡುವಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು, ಬಾಕಿ ಉಳಿದ ಶೇ.7 ರಷ್ಟು ಜನರಿಗೆ ಲಸಿಕೆ ಪಡೆಯುವಂತೆ ಎಲ್ಲ ಸಮುದಾಯಗಳ ಮುಖಂಡರು ಮತ್ತು ವೈದ್ಯರು ಮನವೊಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಸೋಮವಾರ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಮತ್ತು ವೈದ್ಯರೊಂದಿಗೆ ನಡೆಸಿದರು.

ಜಿಲ್ಲೆಗೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರಿಗೆ ಕೂಡಾ ಲಸಿಕೆ ನೀಡಲು ಕ್ರಮ ಕೈಗೊಂಡಿದ್ದೇವೆ. ಕೋವಿಡ್‌ ಕುರಿತು ಜಾಗೃತಿ ಮೂಡಿಸಲು ಬಸ್‌ ಸ್ಟಾಂಡ್‌, ಕಮರ್ಸಿಯಲ್‌ ಕಾಂಪ್ಲೆಕ್ಸ್‌ಗಳು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ಮಾಸ್ಕ್ ಡ್ರೈವ್‌ಮಾಡಲಾಗುವುದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯ ನಡೆಯಲಿದ್ದು, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳಲ್ಲಿ ಈ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳು ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕೆಯ ಪ್ರಯೋಜನ ಕುರಿತು ಮನವರಿಕೆ ಮಾಡಿಕೊಡಬೇಕು. ರೋಗಿಗಳಿಗೆ ನೀಡುವ ಸಲಹಾ ಚೀಟಿಯಲ್ಲಿ ಲಸಿಕೆ ಪಡೆಯುವ ಕುರಿತಂತೆ ಹಾಗೂ ರೋಗ ಲಕ್ಷಣಗಳಿದ್ದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ಬರೆದು ಕೊಡಬೇಕು. ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನದಡಿ ಆಶಾ ಕಾರ್ಯಕರ್ತೆಯರು ಮತದಾರರ ಪಟ್ಟಿಯೊಂದಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಜಿಲ್ಲೆಯ ಗ್ರಾ.ಪಂ.ಗಳು ಗ್ರಾಮೀಣ ಕಾರ್ಯಪಡೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್‌ ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ಸೇರಿ, ಲಸಿಕೆ ಪಡೆಯದೇ ಇರುವವರ ಮಾಹಿತಿ ಪಡೆದು, ಅವರಿಗೆ ತಿಳಿ ಹೇಳಬೇಕು. ಯಾವುದಾದರೂ ಇತರೆ ಕಾಯಿಲೆಗಳು ಹೊಂದಿದ್ದಲ್ಲಿ ವೈದ್ಯರ ಸಲಹೆ ಪಡೆದು ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಬೇಕು ಎಂದರು.

ಇದನ್ನೂ ಓದಿ : 5,516 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಐಸಿಜಿ!

Advertisement

ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ನಾಗಭೂಷಣ ಉಡುಪ, ಪೌರಾಯುಕ್ತ ಉದಯ ಶೆಟ್ಟಿ, ವಿವಿಧ ಸಮುದಾಯಗಳ ಮುಖಂಡರು, ಐಎಂಎ ಮತ್ತು ಆಯುಷ್‌ ವೈದ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next