Advertisement

ಫ‌ಲ ನೀಡಲಿ ಜಿಲ್ಲಾಧಿಕಾರಿಯ ಪಲಿಮಾರು ಗ್ರಾಮವಾಸ್ತವ್ಯ

10:09 PM Feb 18, 2021 | Team Udayavani |

ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಅನುಷ್ಠಾನಗೊಂಡಿರುವ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯದ 2ನೇ ಕಾರ್ಯಕ್ರಮಕ್ಕೆ ಪಲಿಮಾರು ಗ್ರಾಮ ಸಜ್ಜುಗೊಂಡಿದೆ. ಗ್ರಾಮದ ಮತ್ತು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿ, ಗ್ರಾಮಾಭ್ಯುದಯದ ಹೊಸ ಭಾಷ್ಯ ಬರೆಯುವ ಯತ್ನ ಈ ಗ್ರಾಮ ವಾಸ್ತವ್ಯದ್ದು ಎಂದೇ ಬಿಂಬಿತವಾಗಿರುವ ಹಿನ್ನೆಲೆಯಲ್ಲಿ ಜನರ ಆಕಾಂಕ್ಷೆಗಳೂ ಗರಿಗೆದರಿವೆ. ಆಡಳಿತದ ಈ ಪ್ರಯತ್ನ ಪಲಿಮಾರಿನ ಜನರಿಗೆ ಹೊಸ ಶಕೆಯ ದಾರಿ ತೋರಲಿ ಎಂಬುದೇ ಉದಯವಾಣಿ ಸುದಿನದ ಆಶಯ.

Advertisement

ಪಡುಬಿದ್ರಿ: ರಾಜ್ಯದ ಪೈಲೆಟ್‌ ಪ್ರಾಜೆಕ್ಟ್ ಆಗಿರುವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಫೆ. 20ರಂದು ಜಿಲ್ಲಾಧಿಕಾರಿಯವರು ಪಲಿಮಾರು ಗ್ರಾಮಕ್ಕೆ ಆಗಮಿಸಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ, ನಿವೇಶನ ಹಂಚಿಕೆ, ವಂಶವೃಕ್ಷ, ಪಿಂಚಣಿ ಅದಾಲತ್‌, ಹಕ್ಕುಪತ್ರಗಳ ವಿತರಣೆ ಸಹಿತ ಗ್ರಾಮದ ಜನತೆಯ ನಾಡಿಮಿಡಿತವನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಲಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಸ್ಥಳದಲ್ಲೇ ಆಗಬಹುದಾದ ಪರಿಹಾರೋಪಾಯವನ್ನು ಜಿಲ್ಲಾಡಳಿತದ ನೆರವಿನೊಂದಿಗೆ ನೀಡುವಂತಾಗಬೇಕು ಎಂಬ ಆಶಯದೊಂದಿಗೆ ಜಿಲ್ಲಾಧಿಕಾರಿಗಳ ಈ ಕಾರ್ಯಕ್ರಮವು ರಾಜ್ಯ ಮಟ್ಟದಲ್ಲಿ ಸದ್ದು ಮಾಡಲಿದೆ.

ವ್ಯಾಪಕ ನಿರೀಕ್ಷೆ
ಪಲಿಮಾರು ಗ್ರಾ. ಪಂ. ಗೆ ಫೆ. 20ರಂದು ಬೆಳಗ್ಗೆ ಆಗಮಿಸುವ ಜಿಲ್ಲಾಧಿಕಾರಿ ಅವರು ಗ್ರಾಮದಲ್ಲಿ ವೀಕ್ಷಣೆ ಮಾಡಬೇಕಾದ ವಿವಿಧ ಸ್ಥಳಗಳಿಗೆ ತೆರಳುತ್ತಾರೆ. ಜನತೆಯ ಅಹವಾಲು ಸ್ವೀಕರಿಸಲಿದ್ದಾರೆ. ಅಲ್ಲಿಂದಲ್ಲಿಗೇ ವಿಲೇವಾರಿಯಾಗುವ ಅರ್ಜಿಗಳನ್ನು ವಿಲೇಗೊಳಿಸಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿ ಮಟ್ಟದ ಸ್ಪಂದನವೂ ದೊರೆಯಲಿದೆ.
ಜಿಲ್ಲಾಧಿಕಾರಿ ವಾಸ್ತವ್ಯ ಹಿನ್ನೆಲೆಯಲ್ಲಿ ಗ್ರಾಮದ ಜನರು ಹಲವು ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಕುರಿತು ವ್ಯಾಪಕ ನಿರೀಕ್ಷೆಯನ್ನು ಇರಿಸಿಕೊಂಡಿದ್ದಾರೆ.

ಗ್ರಾಮದ ವಿವರ
ಪಲಿಮಾರು ಗ್ರಾಮ 1,579.94 ಎಕರೆ ವಿಸ್ತೀರ್ಣದ ಪಲಿಮಾರು ಮತ್ತು 1,767.63 ಎಕರೆ ವಿಸ್ತೀರ್ಣದ ನಂದಿಕೂರು ಗ್ರಾಮಗಳನ್ನು ಒಳಗೊಂಡಿದೆ. ಉತ್ತರಕ್ಕೆ ಮುದರಂಗಡಿ ಗ್ರಾಮದ ಗಡಿಭಾಗವಾದ ಬೆಳ್ಳಿಬೆಟ್ಟುವರೆಗೆ, ಪಶ್ಚಿಮದಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ನಂದಿಕೂರು ಗ್ರಾಮ, ಪೂರ್ವದಲ್ಲಿ ಕಾರ್ಕಳ ತಾ|ನ ಇನ್ನಾ ಗ್ರಾಮದ ಗಡಿಯ ಮೂಡು ಪಲಿಮಾರುವರೆಗೆ ಹಬ್ಬಿ ನಿಂತಿದೆ.

ಅಣೆಕಟ್ಟಿನ ಅಡ್ಡ ಪರಿಣಾಮಗಳು
ಬೈಲಿನಲ್ಲಿ ಇರುವ ಕಾಲುವೆಗಳಲ್ಲಿ ಹೂಳೆತ್ತದೆ ಇರುವುದರಿಂದ ನೀರು ಕಾಲುವೆಗಳಲ್ಲಿ ಹರಿಯದೆ ಕಂಡ ಕಂಡಲ್ಲಿ ಹರಿದು ಗದ್ದೆಗಳು ಮುಳುಗಿ ಸಮೀಪದ ಪ್ರದೇಶಗಳೂ ಜಲಾವೃತವಾಗುತ್ತಿವೆ. ಮಳೆಗಾಲದಲ್ಲಂತೂ ಒಂದು ಸಣ್ಣ ಮಳೆಗೂ ಕೂಡ ಕೃತಕ ನೆರೆ ನಿರ್ಮಾಣವಾಗುತ್ತಿದೆ.

Advertisement

ಎಲ್ಲ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅಣೆಕಟ್ಟು ನಿರ್ಮಾಣ ಅನಂತರ ನದಿಯ ದಂಡೆಯ ನಿರ್ಮಾಣವೂ ಸಮರ್ಪಕವಾಗದೆ ನದಿ ಕೊರತೆ ಉಂಟಾಗುತ್ತಿದೆ. ಅಣೆಕಟ್ಟಿನಿಂದ ಫಿಲಿಪ್‌ ಮೊಂತೇರೊ ಮನೆಯವರೆಗೆ ಮಾಡಿದ ದಂಡೆಯನ್ನು ಇನ್ನೂ 500 ಮೀ. ವಿಸ್ತರಣೆ ಮಾಡಿದರೆ ಕೃಷಿ ಭೂಮಿಗಳ ರಕ್ಷಣೆಯಾಗಲಿದೆ. ಇಲ್ಲಿ ಕೃತಕ ನೆರೆ ಸಾಮಾನ್ಯವಾಗಿದ್ದು ವರ್ಷದಲ್ಲಿ ಒಂದು ಬೆಳೆಯೂ ಬೆಳೆಯಲಾಗುತ್ತಿಲ್ಲ. ಈ ಸಮಸ್ಯೆಗಳ ಪರಿಹಾರಕ್ಕೆ ಸಣ್ಣ ನೀರಾವರಿ ಇಲಾಖೆ ಮನಸ್ಸು ಮಾಡಬೇಕಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನೀಗ ಕಾಯುತ್ತಿದ್ದಾರೆ.

ಸಮಸ್ಯೆ ಪರಿಹಾರವಾಗಲಿ
ಗ್ರಾಮದ ಜನತೆ ಹಕ್ಕುಪತ್ರ, ಮನೆ ನಿವೇಶನಗಳ ಹಂಚಿಕೆ, ವಿವಿಧ ಪಿಂಚಣಿಗಳಂತಹ ತಮ್ಮ ವಿವಿಧ ಬೇಡಿಕೆಗಳ ಇತ್ಯರ್ಥಕ್ಕಾಗಿ ಜಿಲ್ಲಾಧಿಕಾರಿಗಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕೃಷಿಕರ ಆಶಯದ ಅಣೆಕಟ್ಟು ಸಮಸ್ಯೆಗೆ ಪರಿಹಾರ ಸಮರೋಪಾದಿಯಲ್ಲಿ ಮಳೆಗಾಲಕ್ಕೂ ಮುನ್ನ ಆಗಬೇಕಿದೆ.
-ಗೋಪಾಲ ಪೂಜಾರಿ, ಗ್ರಾಮಸ್ಥ

ಆಶೋತ್ತರ ಈಡೇರಲಿ
ಪಲಿಮಾರು ಗ್ರಾಮವು ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಲು ತಯಾರಾಗದೆ. ಜನತೆಯ ಆಶೋತ್ತರಗಳ ಈಡೇರಿಕೆಯಾಗುವ ಆಶಯದೊಂದಿಗೆ ಗ್ರಾಮದ ಸಮಸ್ಯೆಗಳಿಗೆ ತ್ವರಿತ ಪರಿಹಾರದ ನಿರೀಕ್ಷೆ ಇದೆ. ಈ ಮೂಲಕ ಗ್ರಾಮೋತ್ಥಾನವಾಗಲಿದೆ.
-ಗಾಯತ್ರಿ ಪ್ರಭು, ಪಲಿಮಾರು ಗ್ರಾ. ಪಂ. ಅಧ್ಯಕ್ಷೆ

ಶಾಪವಾದ ಅಣೆಕಟ್ಟು
ಪಲಿಮಾರು ಗ್ರಾಮದ ರೈತಾಪಿ ವರ್ಗಕ್ಕೆ ವರ್ಷಗಳಿಂದೀಚೆಗೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ 5 ಕೋಟಿ ರೂ. ವೆಚ್ಚದಲ್ಲಿ ಮೂಡುಪಲಿ ಮಾರಿನಲ್ಲಿ ಶಾಂಭವಿ ನದಿಗೆ ಸಣ್ಣ ನೀರಾವರಿ ಇಲಾಖೆಯಿಂದ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು. ಅಣೆಕಟ್ಟು ನಿರ್ಮಾಣದ ಉದ್ದೇಶ ಕೃಷಿ ಭೂಮಿಗೆ ಅಗತ್ಯವಾದ ನೀರನ್ನು ಪೂರೈಸುವುದಾಗಿದೆ. ಆದರೆ ಉಡುಪಿ, ದ.ಕ., ಜಿಲ್ಲೆಯ ಗಡಿಭಾಗದಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟಿನಿಂದ ಪಲಿಮಾರಿನಲ್ಲಿ ಕೃಷಿ ನಾಶಕ್ಕೆ ಕಾರಣವಾಗಿದೆ. ನದಿಯಲ್ಲಿ ಮತ್ತು ಪಲಿಮಾರು ಬೈಲಿನಲ್ಲಿ ಹೂಳು ತುಂಬಿದ್ದು ನೀರು ಸರಾಗವಾಗಿ ಹರಿಯು‌ುದರ ಬದಲು ಹಲವಾರು ತೊಂದರೆಗಳು ಎದುರಾಗುತ್ತಿವೆ. ನದಿ ಕೊರೆತದಿಂದ ಬಹಳಷ್ಟು ಕೃಷಿಭೂಮಿ ನಾಶವಾಗಿದೆ, ಇನ್ನೂ ನಾಶವಾಗುವ ಭೀತಿ ಕಾಡಿದೆ. ಹೂಳೆತ್ತದ್ದರಿಂದ ನೀರು ಕಾಲುವೆಗಳಲ್ಲಿ ಹರಿಯದೆ ಬೇಕಾಬಿಟ್ಟಿ ಹರಿದು ಕೃಷಿ ನಾಶವಾಗುತ್ತಿದೆ. ಸಣ್ಣ ಮಳೆಗೂ ಕೃತಕ ನೆರೆ ನಿರ್ಮಾಣವಾಗುತ್ತಿದೆ.

ಮರಳುಗಾರಿಕೆಗೆ ಅವಕಾಶ
ಮರಳುಗಾರಿಕೆಗೆ ಪಲಿಮಾರಿನಲ್ಲಿ ಹೇರಳ ಅವಕಾಶವಿದ್ದು ಜಿಲ್ಲಾಡಳಿತದ ಅನುಮತಿಯಂತೆ ಪಂಚಾಯತ್‌ ಮೂಲಕವೇ ಮರಳು ವಿಕ್ರಯಕ್ಕೆ ಅವಕಾಶಗ‌ಳಿವೆ. ಹಾಗಾಗಿ 3ಯುನಿಟ್‌ಗಳ 300ರೂ. ನಂತೆ ಮರಳೂ ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಪಲಿಮಾರು ಗ್ರಾ. ಪಂ.ಮುಂದಾಗಬೇಕು ಎಂಬ ಆಶಯ ಪಲಿಮಾರು ಗ್ರಾಮದ ಜನತೆಯದ್ದಾಗಿದೆ.

ನಂದಿಕೂರು ಓವರ್‌ ಬ್ರಿಡ್ಜ್ ಬಳಿ ಸಂಪರ್ಕ ರಸ್ತೆ
ನಂದಿಕೂರು ರೈಲ್ವೇ ನಿಲ್ದಾಣದಿಂದ ನಂದಿಕೂರು ಓವರ್‌ ಬ್ರಿಡ್ಜ್ ಬಳಿ ಸಾರ್ವಜನಿಕ ಸಂಪರ್ಕ ರಸ್ತೆಯೊಂದಕ್ಕೆ ಬೇಡಿಕೆಯು ಹ‌ಲವು ಕಾಲದಿಂದಲೇ ಇದ್ದು ಜಿಲ್ಲಾಧಿಕಾರಿಗಳ ಮೂಲಕ ಈ ಬೇಡಿಕೆಯು ಈಡೇರುವಂತಹ ಘಳಿಗೆಯನ್ನು ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರಿಂದ ನಂದಿಕೂರು ರೈಲ್ವೇ ನಿಲ್ದಾಣದ ಬೇಡಿಕೆಯೂ ಹಚ್ಚಲಿದೆ.

ಪಶು ವೈದ್ಯಕೀಯ ಆಸ್ಪತ್ರೆ
ಪಲಿಮಾರು ಪಶು ವೈದ್ಯಕೀಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಹೈನುಗಾರರ ಬೇಡಿಕೆಯಿದೆ. ಇಲ್ಲಿನ ಗ್ರಾಮೀಣ ಮಟ್ಟದ ಹೈನುಗಾರರು ಕೆಲವೊಂದು ತಮ್ಮ ಕ್ಲಿಷ್ಟ ಪರಿಸ್ಥಿತಿಯ ವೇಳೆ ಕಾಪು, ಉಡುಪಿಯ ಪಶು ವೈದ್ಯಕೀಯ ಆಸ್ಪತ್ರೆಗಳ ವೈದ್ಯರ ನೆರವು ಪಡೆಯಬೇಕಾಗುತ್ತಿದೆ.

ಆಯುರ್ವೇದ ಆಸ್ಪತ್ರೆ
ಪಲಿಮಾರು ಆಯುರ್ವೇದ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಿ ಪ್ರಾ. ಆ. ಕೇಂದ್ರವನ್ನಾಗಿಸಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ. ಸದ್ಯ ಗ್ರಾಮಸ್ಥರು ಮುದರಂಗಡಿ ಪ್ರಾ. ಆ. ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆಯಿದ್ದು ಇಲ್ಲೇ ಹೊರ ರೋಗಿಗಳ ಚಿಕಿತ್ಸೆಗೆ ಅವಕಾಶ ಕಲ್ಪಿಸುವಂತೆ ಪಲಿಮಾರು ಗ್ರಾಮಸ್ಥರು ಬಯಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next