Advertisement

ಬಾಂಬೆಯಲ್ಲಿ ಕುಳಿತು ಡಾನ್ ತರ ಫೋನ್ ಮಾಡಿ ಆಡಿಯೋ ವೈರಲ್ ಮಾಡಿದ್ರೆ ಹುಷಾರ್

05:03 PM May 22, 2020 | Hari Prasad |

ಉಡುಪಿ: ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿಯಲ್ಲಿ ಕುಳಿತು ನಮಗೆ ಜಬರ್ದಸ್ತಿನಿಂದ ಕರೆ ಮಾಡುವ ಕಿಡಿಗೇಡಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Advertisement

ಕೆಲವು ಕಿಡಿಗೇಡಿಗಳು ಸುಖಾ ಸುಮ್ಮನೆ ಸಣ್ಣಪುಟ್ಟ ಕಾರಣಗಳಿಗೂ ಕರೆ ಮಾಡುತ್ತಾರೆ. ಕರೆ ಮಾಡುವುದು ಮಾತ್ರವಲ್ಲದೇ ಆ ಸಂಭಾಷಣೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ವೈರಲ್ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಹೀಗೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ವೈರಲ್‌ ಮಾಡುವ ಕೆಲಸ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಹೀಗೆ ಮಾಡಿದರೆ ಅಂತಹ ವ್ಯಕ್ತಿಗಳನ್ನು ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಬಾಂಬೆಯಲ್ಲಿ ಕುಳಿತು ಡಾನ್‌ ರೀತಿಯಲ್ಲಿ ಮಾತಾಡಿದರೆ ನಾವ್ಯಾರು ಹೆದರುವುದಿಲ್ಲ. ಫೋನ್ ಮಾಡಿ ಅಧಿಕಾರಿಗಳನ್ನು ಹೆದರಿಸುವ ಆಟ ಉಡುಪಿ ಜಿಲ್ಲಾಡಳಿತದ ಮುಂದೆ ನಡೆಯೋದಿಲ್ಲ.

ಉಡುಪಿ ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗದವರು, ವೈದ್ಯಕೀಯ ಸಿಬ್ಬಂದಿಗಳೂ ಸೇರಿದಂತೆ ನಾವೆಲ್ಲರೂ ಕಳೆದ ಮೂರು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೇವೆ. ಮಾತ್ರವಲ್ಲದೇ ಊಟ, ತಿಂಡಿ ಬಿಟ್ಟು ಜಿಲ್ಲೆಯ ಜನರ ಕಾಳಜಿಗಾಗಿ ದುಡಿಯುತ್ತಿದ್ದೇವೆ.

Advertisement

ಹೀಗಿರುವಾಗ ಕೋವಿಡ್ ಯೋಧರಿಗೆ ಮಾನಸಿಕ ಕಿರುಕುಳ ನೀಡುವ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಯ. ಹಾಗೆಯೇ ಮೊಸರಲ್ಲಿ ಕಲ್ಲು ಹುಡುಕುವವರನ್ನು ಜಿಲ್ಲಾಡಳಿತ ಸುಮ್ಮನೆ ಬಿಡುವುದಿಲ್ಲ ಎಂದು ಜಗದೀಶ್ ಅವರು ಎಚ್ಚರಿಕೆ ನೀಡಿದ್ದಾರೆ

ಜಿಲ್ಲೆಯ ಕ್ವಾರೆಂಟೈನ್ ಕೇಂದ್ರದಲ್ಲಿರುವವರಿಗೆ ಮನೆ ಊಟ, ಬಟ್ಟೆಗಳನ್ನು ನೀಡಲು ಅವಕಾಶವಿಲ್ಲ. ಅದರಿಂದ ಸೋಂಕು ಹರಡುವ ಸಾಧ್ಯತೆಗಳಿರುತ್ತದೆ. ಮತ್ತು ನನಗೆ ಜಿಲ್ಲೆಯ ಹದಿಮೂರು ಲಕ್ಷ ಜನರ ಆರೋಗ್ಯ ರಕ್ಷಣೆ ಮುಖ್ಯ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಬಂದು ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರುವವರು ಜಿಲ್ಲಾಡಳಿತದೊಂದಿಗೆ ಅಗತ್ಯವಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ನುಡಿದರು.

ಕುಂದಾಪುರ ತಾ.ಪಂ ಸಭಾಂಗಣದಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿ ಜಗದೀಶ್ ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿತ್ತು. ಆದರೆ ಇದೀಗ ಬಾಂಬೆ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಯ ಜನ ಮರಳಿ ಬಂದಿರುವುದರಿಂದ ಇಲ್ಲಿನ ಕ್ವಾರೆಂಟೈನ್ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next