Advertisement

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

04:28 PM Dec 01, 2020 | sudhir |

ಉಡುಪಿ : ಏಡ್ಸ್‌ ರೋಗ ನಿಯಂತ್ರಿಸುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳು ಅನಂತರದ ಸ್ಥಾನದಲ್ಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಈ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್‌ಕ್ರಾಸ್‌ ಮತ್ತು ಎನ್‌.ಎಸ್‌.ಎಸ್‌. ಘಟಕ, ನಾಗರಿಕ ಸಹಾಯವಾಣಿ ಕೇಂದ್ರ ಜಿಲ್ಲಾ ಆಸ್ಪತೆ ಹಾಗೂ ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪುರಭವನದಲ್ಲಿ ಮಂಗಳವಾರ ನಡೆದ ವಿಶ್ವ ಏಡ್ಸ್‌ ದಿನ ಹಾಗೂ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತ್ತಷ್ಟು ಜಾಗೃತಿ ಅಗತ್ಯ
ಎಚ್‌ಐವಿ ಸೋಂಕು ಪೀಡಿತರಿಗೆ ಹೊಸಜೀವನ ರೂಪಿಸಲು ಸರಕಾರ ಸಾಲಸೌಲಭ್ಯ ಸಹಿತ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಸದುಪಯೋಗವಾಗಬೇಕು ಎಂದರು. ರಾ.ಹೆ., ತಂಗುದಾಣಗಳಲ್ಲಿ, ಹೊಟೇಲುಗಳಲ್ಲಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕೊರೊನಾ ಬಂದರೆ ಜನರು ಕನಿಷ್ಟ ಪಕ್ಷ ಬದುಕುತ್ತಾರೆ. ಆದರೆ ಎಚ್‌ಐವಿ ಬಂದರೆ ಸಮಾಜದಲ್ಲಿ ಅವರು ಅವಗಣಿಸಲ್ಪಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಇದನ್ನೂ ಓದಿ:ದೇಶದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಗೆ ಭಾರತ ಹೇಳಿದ್ದೇನು?

ಕೊರೊನಾ ಮಾರ್ಗಸೂಚಿ ನಿರ್ಲಕ್ಷ್ಯ ಬೇಡ
ಕೊರೊನಾ ಎರಡನೇ ಅಲೆಯನ್ನು ತಪ್ಪಿಸಲು ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ ಎಂಬುವುದನ್ನು ಪರಿಶೀಲನೆ ಮಾಡಲಾಗುವುದು. ಮದುವೆ, ಮೆಹಂದಿ ಸಹಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಯಾರಾದರೊಬ್ಬರಿಗೆ ಪಾಸಿಟಿವ್‌ ಕಂಡುಬಂದರೆ ಭಾಗಿಯಾದವರನ್ನೆಲ್ಲ ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ಅವರೆಲ್ಲರ ಮಾದರಿಗಳನ್ನು ಪರೀಕ್ಷೆಗೊಳಪಡಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

Advertisement

ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ
ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಅಧ್ಯಕ್ಷತೆ ವಹಿಸಿ, ರಕ್ತದಾನ ಮಾಡಲು ಎಲ್ಲರ ಹೆಚ್ಚಿನ ಉತ್ಸಾಹ ತೋರಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಕ್ತವನ್ನು ಎಲ್ಲ ರೀತಿಯಿಂದಲೂ ಪರೀಕ್ಷೆಗೊಳಪಡಿಸಲಾಗುತ್ತದೆ. ಎಚ್‌ಐವಿ ಅಥವಾ ಇತರ ಸಮಸ್ಯೆಗಳಿದ್ದರೆ ತಿಳಿದುಬರುತ್ತದೆ. ಎಚ್‌ಐವಿಯನ್ನು ಎಆರ್‌ಟಿ ಸೆಂಟರ್‌ಗಳ ಮೂಲಕವೂ ತಪಾಸಣೆ ಮಾಡಬಹುದು ಎಂದರು. ಸರಕಾರ 2025ರೊಳಗೆ ಕ್ಷಯರೋಗ ನಿರ್ಮೂಲನೆಯ ಗುರಿಯನ್ನು ಹಮ್ಮಿಕೊಂಡಿದೆ. ಡಿಸೆಂಬರ್‌ ತಿಂಗಳು ಪೂರ್ತಿ ಜಿಲ್ಲೆಯಾದ್ಯಂತ ಈ ಬಗೆಗಿನ ಅಭಿಯಾನ ನಡೆಯಲಿದೆ. ಸೋಂಕು ಲಕ್ಷಣ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ಮಾಡಿಕೊಳ್ಳಬೇಕು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದರು.

ನಿಯಂತ್ರಣಕ್ಕೆ ಹಲವು ಕಾರ್ಯಕ್ರಮ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಮಾತನಾಡಿ, ಜಿಲ್ಲೆಯಲ್ಲಿ 2008ರಲ್ಲಿ 7.9 ಶೇ.ಇದ್ದ ಪಾಸಿಟಿವ್‌ ಪ್ರಮಾಣ ಈಗ 0.43 ಶೇ.ಕ್ಕೆ ಬಂದಿದೆ. ಗರ್ಭಿಣೆ ಮಹಿಳೆಯರಲ್ಲಿ 0.3 ಶೇ.ಇದೆ. ಜಿಲ್ಲೆಯಲ್ಲಿರುವ 12 ಐಸಿಟಿಸಿ ಸೆಂಟರ್‌ಗಳಲ್ಲಿ, 64 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ, ಕಾಲೇಜುಗಳಲ್ಲಿಯೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕಾವೇರಿ, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ಮಾತನಾಡಿದರು.

ಡಾ| ಪ್ರೇಮಾನಂದ್‌ ಸ್ವಾಗತಿಸಿದರು. ಜಿಲ್ಲಾ ಕೊರೊನಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಾಬಲೇಶ್ವರ ವಂದಿಸಿದರು. ಆನಂದ ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಜಾಥಾ
ಕಾರ್ಯಕ್ರಮಕ್ಕೂ ಮುನ್ನ ನಗರದ ಬೋರ್ಡ್‌ ಹೈಸ್ಕೂಲ್‌ನಿಂದ ಕೆ.ಎಂ.ಮಾರ್ಗವಾಗಿ ಟೌನ್‌ಹಾಲ್‌ವರೆಗೆ ಆಕರ್ಷಕ ಜಾಥಾ ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕಾವೇರಿ ಅವರು ಉದ್ಘಾಟಿಸಿದರು. ಯೂತ್‌ ರೆಡ್‌ ಕ್ರಾಸ್‌ ವಿಂಗ್‌, ಎಸ್‌ಡಿಎಂ ಆಯುರ್ವೇದಿಕ್‌ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು. ಹಲವಾರು ಮಂದಿ ಗಣ್ಯರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮ್ಮಾನ
ಏಡ್ಸ್‌ ನಿಯಂತ್ರನ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಟ್ಟಾರು ರಮೇಶ್‌ ಕಿಣಿ, ರವಿರಾಜ ನಾಯಕ್‌, ಡಾ| ಸ್ವರ್ಣಲತಾ, ಡಾ| ಅನಿಲ್‌ ಕುಮಾರ ಎಸ್‌., ವಸಂತಿ, ಪ್ರಶಾಂತ್‌, ಬಸವರಾಜ, ಡಾ| ಮಹಮ್ಮದ್‌ ಪೈಸಲ್‌, ಸತ್ಯನಾರಾಯಣ, ಶಿವರಾಜ ಸಿ.ದೇವಾಡಿಗ, ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಬಿ.ಅಶೋಕ್‌ ಪೈ, ಸುಧಾಕರ ಪೂಜಾರಿ, ಗೀತಾ ರವಿ ಶೇಟ್‌ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next