ಉಡುಪಿ: ಒಂದು ತಿಂಗಳಿಂದ ಪರಿಸರಸ್ನೇಹಿ ಕ್ರಮವಾಗಿ ಸಾಮೂಹಿಕ ಸಾರಿಗೆಯಲ್ಲಿ ಪ್ರತಿ ಗುರುವಾರ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ಸಂಚರಿಸುತ್ತಿದ್ದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಜು. 25ರಂದು ಸರಕಾರಿ ನರ್ಮ್ ಬಸ್‌ನಲ್ಲಿ ಸಂಚರಿಸಿದರು.
ಶ್ರೀಲಂಕಾ ಪ್ರಧಾನಿಯವರ ಕೊಲ್ಲೂರು ದೇವಸ್ಥಾನ ಭೇಟಿ ಇರುವ ಕಾರಣ ಬೆಳಗ್ಗೆ ಕೊಲ್ಲೂರಿಗೆ ತೆರಳಿದ್ದ ಜಿಲ್ಲಾಧಿಕಾರಿಯವರು ಸಂಜೆ 5.45ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಸಂಪಿಗೆನಗರಕ್ಕೆ ಹೋಗುವ ನರ್ಮ್
ಬಸ್‌ನಲ್ಲಿ ಮನೆಗೆ ತೆರಳಿದರು. ಇವರೊಂದಿಗೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮತ್ತು ಇತರ ಸಿಬಂದಿ ಇದ್ದರು. ವಿದ್ಯಾಕುಮಾರಿಯವರು ಬೆಳಗ್ಗೆಯೂ ಸಂಪಿಗೆನಗರದಿಂದ ಹೊರಡುವ ಈ ಬಸ್‌ನಲ್ಲಿ ಕಚೇರಿಗೆ ತೆರಳಿದ್ದರು.
ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯವರು ಇಬ್ಬರೂ ಪುರಭವನದ ಬಳಿ ಸ್ಟಾಪ್‌ನಲ್ಲಿ ಬಸ್ ಏರಿ ಅಲ್ಲೇ ಇಳಿದರು. ಸಿಬಂದಿ ಕೆಲವರು ಸಂಪಿಗೆ ನಗರ, ಕಿದಿಯೂರು, ಪುರಭವನ, ಪಿಪಿಸಿ, ಬಸ್ ನಿಲ್ದಾಣ, ಕಲ್ಸಂಕ, ಎಂಜಿಎಂ, ಸಿಂಡಿಕೇಟ್ ಸರ್ಕಲ್ ಬಳಿ ಬಸ್ ಏರಿದರು. ಅದೇ ರೀತಿ ಹಿಂದಿರುಗುವಾಗಲೂ ಇದೇ ನಿಲುಗಡೆಗಳಲ್ಲಿ ಇಳಿದು ಮನೆಗೆ ತೆರಳಿದರು. ಬೆಳಗ್ಗೆ 9.30ಕ್ಕೆ ಹೊರಡುವ ಈ ಬಸ್ ಸಂಜೆ 5.45ಕ್ಕೆ ಮಣಿಪಾಲದಿಂದ ಹೊರಡುವ ಕಾರಣ ಸಿಬಂದಿಗಳಿಗೆ ಇದು ಅನುಕೂಲಕರವಾಗಿದೆ.
ಇನ್ನು ಮುಂದೆ ಪ್ರತಿ ಗುರುವಾರವೂ ನರ್ಮ್ ಬಸ್‌ನಲ್ಲಿಯೇ ಜಿಲ್ಲಾಧಿಕಾರಿ ಮತ್ತು ಸಿಬಂದಿ ಜಿಲ್ಲಾಧಿಕಾರಿ ಕಚೇರಿಗೆ ಸಂಚರಿಸಲಿದ್ದಾರೆಂದು ಮೂಲಗಳು ತಿಳಿಸಿವೆ.