Advertisement

ಉಡುಪಿಯಿಂದ ಇನ್ನೋವಾ ಕಾರಿನಲ್ಲಿ ವ್ಯಕ್ತಿಯ ಅಪಹರಣ!

12:03 AM Sep 11, 2022 | Team Udayavani |

ಉಡುಪಿ: ಇನ್ನೋವಾ ಕಾರಿನಲ್ಲಿ ಬಂದಿದ್ದ ತಂಡ ಶನಿವಾರ ಉಡುಪಿಯ ಶ್ರೀಕೃಷ್ಣ ಮಠದ ಸಮೀಪದಿಂದ ವ್ಯಕ್ತಿಯೋರ್ವರನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿದ್ದು, ಆ ಕಾರನ್ನು ಮಂಗಳೂರಿನ ಕೂಳೂರು ಸಮೀಪ ದಲ್ಲಿ ಪೊಲೀಸರು ಅಡ್ಡಗಟ್ಟಿದ್ದು, ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ!

Advertisement

ಕಂಟ್ರೋಲ್‌ ರೂಂಗೆ ಮಾಹಿತಿ
ಬೆಂಗಳೂರು ನೋಂದಣಿಯ ಇನ್ನೋವಾ ಕಾರಿನಲ್ಲಿ ಬಂದಿದ್ದ ತಂಡದವರು ಕಾರಿನಿಂದ ಇಳಿದು ಒಬ್ಬರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ಅಪಹರಣವಾಗಿರುವ ಬಗ್ಗೆ ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್‌ ಆದ ಉಡುಪಿ ನಗರ ಪೊಲೀಸರು ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಎಚ್ಚರಿಕೆ ನೀಡಿದ್ದರು. ವಾಹನ ಕಲ್ಸಂಕ ಮಾರ್ಗವಾಗಿ ಕರಾವಳಿ ಬೈಪಾಸ್‌ ತಲುಪಿರುವ ಬಗ್ಗೆ ಟ್ರಾಫಿಕ್‌ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಅಲ್ಲಿಂದ ಹೆಜಮಾಡಿ ಟೋಲ್‌ಗೇಟ್‌ ದಾಟಿ ಮುಂದೆ ಹೋಗಿರುವ ಬಗ್ಗೆ ಸಿಸಿ ಕೆಮರಾ ದೃಶ್ಯಾವಳಿಗಳಿಂದ ಪೊಲೀಸರಿಗೆ ತಿಳಿದುಬಂದಿತ್ತು.

ಅನಂತರ ಉಡುಪಿ ಪೊಲೀಸರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕೂಳೂರು ಬಳಿ ಪೊಲೀಸರು ಇನ್ನೋವಾ ಕಾರನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆಯಲ್ಲಿ ಪೊಲೀಸರು
ಕಂಡುಕೊಂಡ ಸತ್ಯ
ಪೊಲೀಸರು ವಶಕ್ಕೆ ಪಡೆದ ನಾಲ್ವರನ್ನೂ ವಿಚಾರಣೆ ನಡೆಸಿದಾಗ ಕೆಲಕಾಲ ಸಂಚಲನ ಉಂಟು ಮಾಡಿದ್ದ ಇಡೀ ಪ್ರಕರಣ ತಿರುವು ಪಡೆದುಕೊಂಡಿತ್ತು. ಒಮ್ಮೆಗೆ ಪೊಲೀಸರೇ ದಂಗಾಗಿ ಬಿಟ್ಟರು. ತಮ್ಮ ಕಾರ್ಯಾಚರಣೆಯ ಬಗ್ಗೆ ಮಾತ್ರ ಹೆಮ್ಮೆ ಪಟ್ಟುಕೊಂಡರು. ಇಲ್ಲಿ ನಿಜಕ್ಕೂ ಅಪಹರಣವಾಗಿರಲಿಲ್ಲ.

ಕಾರಿನಲ್ಲಿದ್ದವರು ವೈದ್ಯರು. ಘಟನೆಯ ನಿಜಾಂಶವೆಂದರೆ, ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನಿಂದ ತಪ್ಪಿಸಿಕೊಂಡು ಉಡುಪಿಗೆ ಬಂದಿದ್ದ ಮಾನಸಿಕ ಅಸ್ವಸ್ಥ ರೋಗಿಯನ್ನು ಮನೆಯವರು ರಕ್ಷಣೆ ಮಾಡಿದ್ದು.

Advertisement

ಘಟನೆಯ ವಿವರ
ಸೆ. 8ರಂದು ಬೆಂಗಳೂರಿನ ರಾಜರಾಜೇಶ್ವರೀ ನಗರದ ಬಳಿ ಇರುವ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಯೋಗೀಶ್‌ ಭಟ್‌ (54) ಅವರು ಉಡುಪಿಯ ಎಂಜಿಎಂ ಸಮೀಪದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಇಲ್ಲಿಯೂ ಅವರ ಉಪಟಳ ಹೆಚ್ಚಿತ್ತು. ಈ ಬಗ್ಗೆ ಮನೆಯವರೇ ಆಸ್ಪತ್ರೆಯವರಿಗೆ ಮಾಹಿತಿ ನೀಡಿದ್ದರು. ಈ ನಡುವೆ ಯೋಗೀಶ್‌ ಭಟ್‌ ಅವರು ಮನೆಯಿಂದ ಕೃಷ್ಣ ಮಠದತ್ತ ತೆರಳಿದ್ದರು. ಇತ್ತ ಬೆಂಗಳೂರಿನಿಂದ ಬಂದಿದ್ದ ಮಾನಸಿಕ ವೈದ್ಯರ ತಂಡ ಉಡುಪಿಯ ಕನಕದಾಸ ರಸ್ತೆಯಲ್ಲಿ ಅವರನ್ನು ಪತ್ತೆ ಹಚ್ಚಿ ಇನ್ನೋವಾ ಕಾರಿನೊಳಗೆ ಬಲವಂತವಾಗಿ ಕೂರಿಸಿಕೊಂಡಿದ್ದರು. ಇದನ್ನು ಕಂಡ ಸ್ಥಳೀಯರು ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದರು. ಅನಂತರ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಕಾರನ್ನು ಕೂಳೂರಿನಲ್ಲಿ ಪತ್ತೆ ಹಚ್ಚಿ ಘಟನೆಯ ನಿಜಾಂಶ ಕಂಡುಕೊಂಡರು. ಅನಂತರ ವೈದ್ಯರ ತಂಡ ಹಾಗೂ ರೋಗಿಗೆ ಬೆಂಗಳೂರಿಗೆ ತೆರಳಲು ಅನುಮತಿಸಿದ್ದಾರೆ. ಈ ಕಾರ್ಯಾಚರಣೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಈ ಘಟನೆ ಕೆಲಕಾಲ ಆತಂಕ ಸೃಷ್ಟಿಸಿದ್ದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next