ಉಡುಪಿ: ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ಮತ್ತೊಂದು ಬೈಕ್‌ಗೆ ಢಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರಿಗೆ ನಗರದ ಪ್ರಧಾನ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2020ರ ಅ.3ರಂದು ರಾತ್ರಿ 10.15ರ ಸುಮಾರಿಗೆ ಪ್ರಶಾಂತ್ ಎಂಬಾತನು ಶರತ್‌ಗೆ ಸೇರಿದ ಬೈಕನ್ನು ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರದ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಳ್ತೂರು ಗ್ರಾಮದ ಸಂತೆಕಟ್ಟೆಯ ಗಣೇಶ್ ಕಲ್ಯಾಣ ಮಂಟಪದ ಸಮೀಪ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆಸಿದ್ದ. ಪರಿಣಾಮ ಮೋಟಾರ್ ಸೈಕಲ್‌ನಲ್ಲಿದ್ದ ಹರೀಶ್ ನಾಯ್ಕ… ಹಾಗೂ ಕೃಷ್ಣಪ್ಪ ವಾಲ್ಮೀಕಿ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಶರತ್ ತನ್ನ ಬೈಕ್‌ಗೆ ವಾಯು ಮಾಲಿನ್ಯ ಪತ್ರ ಹೊಂದಿರಲಿಲ್ಲ. ಅಲ್ಲದೆ ಆತನು ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗೆ ಬೈಕನ್ನು ಚಲಾಯಿಸಲು ನೀಡಿದ್ದ ಎಂದು ಆತನ ವಿರುದ್ಧವೂ ಹೆಬ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದರು.
ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು, ಪ್ರಶಾಂತ್‌ಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ಹಾಗೂ ಶರತ್‌ನಿಗೆ 7,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.
ಇದನ್ನೂ ಓದಿ: ಹೆಬ್ರಿ: ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದು ಮಹಿಳೆ ಸಾವು