Advertisement

ಅಮಾಯಕನಿಗೆ ಹಲ್ಲೆ ಪ್ರಕರಣ: ಎಸ್‌ಐ, ಇನ್‌ಸ್ಪೆಕ್ಟರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

12:06 AM Dec 08, 2022 | Team Udayavani |

ಉಡುಪಿ: ಯುವಕನ ಮೇಲಿನ ಹಲ್ಲೆ ಮತ್ತು ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಎಸ್‌ಐ ಶಕ್ತಿವೇಲು ಮತ್ತು ಪೊಲೀಸ್‌ ನಿರೀಕ್ಷಕ ಶರಣಗೌಡ ವಿರುದ್ಧ ಉಡುಪಿ ಪ್ರಿನ್ಸಿಪಲ್‌ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ನ.28ರಂದು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿ ಆದೇಶ ಹೊರಡಿಸಿದೆ.

Advertisement

ಪ್ರಕರಣದ ಹಿನ್ನೆಲೆ
ಉಡುಪಿ ಹೂಡೆಯ ನಿವಾಸಿ ಹಿದಾಯತುಲ್ಲ (27) ಅವರ ಮನೆಗೆ ಪೊಲೀಸ್‌ ಅಧಿಕಾರಿಗಳಾದ ಶಕ್ತಿವೇಲು ಮತ್ತು ಶರಣಗೌಡ ಮತ್ತವರ ಏಳು ಮಂದಿಯ ತಂಡ 2021ರ ನ.29 ರ ತಡರಾತ್ರಿ ಸುಮಾರು 2.30 ರ ವೇಳೆಗೆ ಮನೆಗೆ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲ ಅವರಿಗೆ ಥಳಿಸಿ ಕಾನೂನು ಬಾಹಿರವಾಗಿ ಬಂಧಿಸಿದ್ದರು. ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಬೂಟಿನಿಂದ ಥಳಿಸಿ, ಲಾಟಿಯಿಂದ ಹೊಡೆದು, ನಿಂದಿಸಿದ್ದರು. ಎನ್‌ಕೌಂಟರ್‌ ಮಾಡಿ ಮುಗಿಸುತ್ತೇವೆ ಎಂದಿದ್ದಲ್ಲದೆ ತಪ್ಪೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದ್ದರು.

ಮಾರಣಾಂತಿಕವಾಗಿ ಹಲ್ಲೆಗೀಡಾದ ಹಿದಾಯತುಲ್ಲ ನನ್ನು 2021 ರ ಡಿ. 4ರಂದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲದೆ ಹಲ್ಲೆ ಘಟನೆ ಬಗ್ಗೆ ವೈದ್ಯರಿಗಾಗಲೀ, ನ್ಯಾಯಾಧೀಶರಿಗಾಗಲಿ ತಿಳಿಸಿದ್ದಲ್ಲಿ ಜೀವನಪೂರ್ತಿ ಜೈಲಲ್ಲಿ ಕೊಳೆಯುವಂತೆ ಮಾಡುವುದಾಗಿ ಪೊಲೀಸರು ಬೆದರಿಸಿದ್ದರು. ಘಟನೆಯ ಬಗ್ಗೆ ತನಗೆ ನ್ಯಾಯ ದೊರಕಿಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿದಾಯತುಲ್ಲಾ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದಿ ದಾಖಲಿಸಿದ್ದರು. ಈ ಬಗ್ಗೆ ತನ್ನ ಪತ್ನಿ ಸೇರಿ ಹಲವು ಸಾಕ್ಷೀದಾರರನ್ನು ನ್ಯಾಯಲಯದ ಮುಂದಿರಿಸಿ ಘಟನೆಯ ಬಗ್ಗೆ ನ್ಯಾಯಾಲಯದ ಮುಂದೆ ವಿವರಿಸಿದ್ದರು. ದೂರನ್ನು ಮಾನ್ಯ ಮಾಡಿದ ನ್ಯಾಯಾಲಯ ಮಲ್ಪೆ ಠಾಣೆಯ ಅಂದಿನ ಎಸ್‌.ಐ. ಶಕ್ತಿವೇಲು ಮತ್ತು ಸರ್ಕಲ್‌ ಶರಣಗೌಡ ವಿರುದ್ಧ ದೂರು ದಾಖಲಿಸಲು ಆದೇಶಿಸಿತ್ತು. ಅನಂತರ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next