Advertisement

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

03:31 AM Nov 16, 2024 | Team Udayavani |

ಮಣಿಪಾಲ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷೆಗೆ ಆದ್ಯತೆ ನೀಡಿ ಮೂಲಸೌಕರ್ಯ ಹೆಚ್ಚಿಸಿ ಮತ್ತಷ್ಟು ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಕಳೆದ ವರ್ಷ 4 ಕೋಟಿಗೂ ಹೆಚ್ಚು ಪ್ರವಾಸಿ ಗರು ಆಗಮಿಸಿದ್ದಾರೆ. ಹೊರಗಿನಿಂದ ಬರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

ತ್ರಾಸಿಯಿಂದ ಮರವಂತೆ ಬೀಚ್‌ ರಸ್ತೆಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ರಸ್ತೆ ಬದಿಯ ಸೈಡ್‌ ಗೈಡ್‌ ರೈಲ್‌ ಹಾಗೂ ಬ್ಯಾರಿಕೇಡ್‌ ನಿರ್ಮಿಸಬೇಕು. ಪಡುಕೆರೆ ಬೀಚ್‌ ವ್ಯಾಪ್ತಿಯಲ್ಲಿ ಕೆಲವು ಹೋಂ ಸ್ಟೇಗಳಿಗೆ ಅನುಮತಿ ನೀಡಿರುವುದಕ್ಕೆ ಸ್ಥಳೀಯ ಸಂಘ-ಸಂಸ್ಥೆಗಳು ಆಕ್ಷೇಪಣೆ ಸಲ್ಲಿಸಿವೆ. ಕಾನೂನು ಬಾಹಿರ ಚಟುವಟಿಕೆ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಕೇಂದ್ರ ಸರಕಾರದ ಸ್ವದೇಶ ದರ್ಶನ ಅಡಿಯಲ್ಲಿ ಚಾಲೆಂಜ್‌ ಬೇಸ್ಡ್ ಡೆಸ್ಟಿನೇಷನ್‌ ಡೆವಲಪ್‌ಮೆಂಟ್‌ ಆಧಾರದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಇಕೋ ಟೂರಿಸಂ ಮತ್ತು ಅಮೃತ್‌ ಧರೋಹರ್‌ ಸೈಟ್ಸ್‌ ಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಬಗ್ಗೆ ಪಡುಕೆರೆಯಿಂದ ಕಾಪುವರೆಗೆ ಸೈಕಲ್‌ ಟ್ರ್ಯಾಕ್‌ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದರು.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸ್ಪೆಷಲ್‌ ಅಸಿಸ್ಟೆಂಟು ಸ್ಟೇಟ್‌ ಫಾರ್‌ ಕ್ಯಾಪಿಟಲ್‌ ಇನ್‌ವೆಸ್‌ಟೆ¾ಂಟ್‌ ಯೋಜನೆಯಡಿ ಜಿಲ್ಲೆಯ ಬೈಂದೂರು ತಾಲೂಕು ಪಡುವರಿ ಗ್ರಾಮದ ಸೋಮೇಶ್ವರ ಬೀಚ್‌ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಎ.ಕಿರಣ್‌ ಕುಮಾರ್‌ ಕೊಡ್ಗಿ, ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಅರುಣ್‌ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಸಿ.ಯು., ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

ಮಲ್ಪೆ ಬೀಚ್‌, ಸೈಂಟ್‌ ಮೇರಿಸ್‌ ದ್ವೀಪ ನಿರ್ವಹಣೆ ಜಿಲ್ಲಾ ಸಮಿತಿಗೆ
ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮಾತನಾಡಿ, 20 ವರ್ಷಗಳ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಮಲ್ಪೆ ಬೀಚ್‌ ಹಾಗೂ ಸೈಂಟ್‌ ಮೇರೀಸ್‌ ದ್ವೀಪದ ನಿರ್ವಹಣೆಯನ್ನು ಮಲ್ಪೆ ಅಭಿವೃದ್ಧಿ ಸಮಿತಿಗೆ ನೀಡಲಾಗಿತ್ತು. ಪ್ರಸ್ತುತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ, ಸಮಿತಿಯ ಕಾರ್ಯ ವ್ಯಾಪ್ತಿಗೆ ಅಡೆತಡೆಯಾಗುತ್ತಿರುವುದು ಹಾಗೂ ಕಾನೂನುಬಾಹಿರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ನಿರ್ವಹಣೆಯ ಅಧಿಕಾರವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಹಿಂಪಡೆದುಕೊಳ್ಳಲಾಗಿದೆ ಎಂದರು.

ಮಲ್ಪೆಯಲ್ಲಿ ತೇಲುವ ಸೇತುವೆ ಚಟುವಟಿಕೆಯನ್ನು ಖಾಸಗಿಯವರು ನಿರ್ವಹಿಸುತ್ತಿದ್ದು, ಇದರ ಆದಾಯದಲ್ಲಿ ಶೇ.75:25ರ ಅಡಿಯಲ್ಲಿ ನಿರ್ವಹಣೆಯನ್ನು ಬೀಚ್‌ ಅಭಿವೃದ್ಧಿ ಸಮಿತಿಯೇ ನಿರ್ವಹಿಸಬೇಕು. ಮಲ್ಪೆ ಬೀಚ್‌ನಲ್ಲಿ ಜಿಪ್‌ಲೈನ್‌ ಚಟುವಟಿಕೆ ನಡೆಸಲು ಕೆಲವರು ಮುಂದೆ ಬಂದಿದ್ದು, ಅವರು ಪ್ರಾಧಿಕಾರದ ಪರವಾನಿಗೆ ಮತ್ತು ಎನ್‌ಒಸಿ ಪಡೆದು ಪ್ರವಾಸಿಗರ ಸುರಕ್ಷೆಗೆ ಆದ್ಯತೆ ನೀಡಿ ನಡೆಸುವುದು ಸೂಕ್ತ ಎಂದರು.

ಕೋಡಿ ಬೀಚ್‌ ಅಭಿವೃದ್ಧಿ:
ಕುಂದಾಪುರ ಕೋಡಿ ಕಡಲ ತೀರದ ಸರ್ವೇ ನಂಬರ್‌ 310ರಲ್ಲಿ 26.50 ಎಕ್ರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕು. ಈ ಜಾಗವು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಡಾಲ್ಫಿನ್‌ಗಳು ಕಂಡುಬರುವ ಉಡುಪಿಯ ಏಕೈಕ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಬೇಕು. ಜಲಕ್ರೀಡೆ, ಬೋಟಿಂಗ್‌ ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳುವಾಗ ಪ್ರವಾಸಿಗರ ಸುರಕ್ಷೆಗೆ ಆದ್ಯತೆ ನೀಡಬೇಕು ಹಾಗೂ ಪ್ರಾಧಿಕಾರಗಳ ಅನುಮತಿ ಪಡೆದ ಚಟುವಟಿಕೆಗಳನ್ನು ಮಾತ್ರವೇ ನಡೆಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next