ಉಡುಪಿ: ಜಿಲ್ಲೆಯ ಪ್ರಥಮ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ದಾವಣಗೆರೆ ಮೂಲದ ಮಣಿಪಾಲದ ವ್ಯಕ್ತಿ ದುಬಾೖನಿಂದ ಮಾ. 18ರಂದು ಮರಳಿದ್ದು, 23ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಗುಣಮುಖರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರನ್ನು ಡಾ| ಟಿಎಂಎ ಪೈ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿತು.
“ಕೋವಿಡ್ 19 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಎರಡು ಬಾರಿಯೂ ಅವರ ಮಾದರಿ ನೆಗೆಟಿವ್ ಆಗಿದೆ. ಈಗ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಇನ್ನೂ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮನೆಯಲ್ಲಿ ಮುಗಿಸಬೇಕಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮೊದಲ ಬಾರಿ ಕಳುಹಿಸಿದ ಇನ್ನಿಬ್ಬರು ಸೋಂಕಿತರ ವರದಿ ಇನ್ನಷ್ಟೇ ಬರಬೇಕಾಗಿದೆ. ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾದ ಭಟ್ಕಳದ ಗರ್ಭಿಣಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ| ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಶನಿವಾರ 11 ಮಂದಿ ಆಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ಏಳು ಪುರುಷರು ಉಸಿರಾಟದ ತೀವ್ರ ಸಮಸ್ಯೆ ಹೊಂದಿರುವವರು, ಓರ್ವ ಮಹಿಳೆ ಕೊರೊನಾ ಶಂಕಿತರು, ಮೂವರು ಪುರುಷರು ಫೂ ಮಾದರಿಯ ಸಮಸ್ಯೆ ಹೊಂದಿದ್ದಾರೆ.
41 ವರದಿ ಬಾಕಿ
ಶನಿವಾರ ಐವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ಕಳುಹಿಸಿದ 11 ಜನರ ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಇದುವರೆಗೆ 299 ಜನರ ವರದಿ ಬಂದಿದ್ದು, ಮೂವರ ವರದಿ ಪಾಸಿಟಿವ್, 296 ಜನರ ವರದಿ ನೆಗೆಟಿವ್ ಆಗಿದೆ. 41 ಜನರ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.