Advertisement

ಉಡುಪಿ: ಮುಂದುವರಿದ ನೀರಿನ ಬವಣೆ

01:19 AM May 14, 2019 | Team Udayavani |

ಉಡುಪಿ: ಹನ್ನೆರಡು ದಿನಗಳಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರದಲ್ಲಿ ನೀರು ಪಡೆಯುವುದು ಸವಾಲು ಎನಿಸಿದೆ. ನಗರಸಭೆಯಿಂದ ವಿತರಣ ಜಾಲ ಮತ್ತು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಆಗುತ್ತಿದ್ದರೂ “ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ.

Advertisement

ಸ್ವರ್ಣಾ ನದಿಯ ಶೀರೂರು, ಮಾಣೈ, ಭಂಡಾರಿಬೆಟ್ಟು ಮತ್ತು ಪುತ್ತಿಗೆಯ ದೊಡ್ಡ ಹಳ್ಳಗಳಲ್ಲಿರುವ ನೀರನ್ನು ಒಟ್ಟು 9 ಪಂಪ್‌ಗ್ಳ ಮೂಲಕ ನಿರಂತರವಾಗಿ ಬಜೆ ಅಣೆಕಟ್ಟಿಗೆ ಹಾಯಿಸಲಾಗುತ್ತಿದೆ. ಸೋಮವಾರ ಶೀರೂರಿಗಿಂತಲೂ ಹೆಚ್ಚಾಗಿ ಮಾಣೈ ಸೇತುವೆ ಸಮೀಪದಿಂದ ನೀರನ್ನು ಹರಿಸಲಾಯಿತು. ಸೋಮವಾರ 18 ಎಂಎಲ್‌ಡಿಯಷ್ಟು ನೀರನ್ನು ಜಾಕ್‌ವೆಲ್‌ನಿಂದ ಪಂಪ್‌ ಮಾಡಲಾಯಿತು. ಸಾಮಾನ್ಯ ದಿನಗಳಲ್ಲಿ 24 ಎಂಎಂಲ್‌ಡಿ ಹಾಗೂ ಕಳೆದ 5 ದಿನಗಳಲ್ಲಿ 9ರಿಂದ 10 ಎಂಎಲ್‌ಡಿ ನೀರು ಮೇಲೆತ್ತಲಾಗುತ್ತಿತ್ತು.

ಜಾಕ್‌ವೆಲ್‌ ಹೂಳು ತೆರವು
ಬಜೆ ಅಣೆಕಟ್ಟಿನ ಜಾಕ್‌ವೆಲ್‌ ಸ್ಥಳದಲ್ಲಿ ತುಂಬಿದ್ದ ಹೂಳು ಮತ್ತು ಕಸವನ್ನು ಶಾಸಕ ರಘುಪತಿ ಭಟ್‌ ಅವರ ನಿರ್ದೇಶನದಂತೆ ಸೋಮವಾರ ಹಿಟಾಚಿ ಮೂಲಕ ತೆರವುಗೊಳಿಸಲಾಯಿತು. ಶಾಸಕರು ಸ್ಥಳದಲ್ಲೇ ಇದ್ದು ಕಾಮಗಾರಿ ಪರಿಶೀಲಿಸಿದರು.

ಟ್ಯಾಂಕರ್‌ ನೀರು
ಎತ್ತರದ ಪ್ರದೇಶಗಳು, ನಳ್ಳಿನೀರು ತಲುಪದ ಇತರ ಪ್ರದೇಶಗಳಿಗೆ ಸೋಮವಾರ 8 ಟ್ಯಾಂಕರ್‌ಗಳಲ್ಲಿ ನೀರು ಒದಗಿಸಲಾಯಿತು. ಮಲ್ಪೆ ಸೆಂಟ್ರಲ್‌, ಕೊಡವೂರು, ಬನ್ನಂಜೆ, ಗುಂಡಿಬೈಲು, ಮಣಿಪಾಲದ ಈಶ್ವರನಗರ, ನಿಟ್ಟೂರು, ಮಂಚಿ, ಗೋಪಾಲಪುರ, ಕರಂಬಳ್ಳಿ, ಬೈಲೂರು ಪ್ರದೇಶಗಳಿಗೆ ಟ್ಯಾಂಕರ್‌ ನೀರು ಒದಗಿಸಲಾಗಿದೆ. ನಗರಸಭೆಗೆ ಸೋಮವಾರ ನೀರಿನ ಬೇಡಿಕೆಗಾಗಿ 70ಕ್ಕೂ ಅಧಿಕ ಕರೆಗಳು ಬಂದವು.

ಟ್ಯಾಂಕರ್‌ ನೀರಿಗೆ ಬೇಡಿಕೆ ಅಧಿಕವಾಗಿರುವುದರಿಂದ ದರ ಕೂಡ ಹೆಚ್ಚಾಗಿದೆ. ಹೊಟೇಲ್‌ ಮತ್ತು ಲಾಡ್ಜ್ ಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕೆಲವು ಹೊಟೇಲ್‌/ಲಾಡ್ಜ್ಗಳನ್ನು ಮುಚ್ಚಬೇಕಾಗಬಹುದು ಎಂದು ಹೊಟೇಲ್‌ ಮಾಲಕರ ಸಂಘದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಸತಿ ಸಂಕೀರ್ಣಗಳಲ್ಲಿರುವ ಫ್ಲ್ಯಾಟ್‌ ನಿವಾಸಿಗಳಿಗೆ ನೀರಿನ ಬಿಸಿ ಹೆಚ್ಚಾಗಿ ತಟ್ಟುತ್ತಿದೆ.

Advertisement

ಶೀರೂರಿನಲ್ಲಿ ವಿರೋಧ
ಶೀರೂರಿನಲ್ಲಿ ನೀರು ಸದ್ಯ ಸಾಕಷ್ಟಿದೆ. ಅಲ್ಲಿಂದ ಮಾಣೈಗೆ ನೀರು ಹಾಯಿಸಲಾಗಿದೆ. ಆದರೆ ಶೀರೂರಿನಲ್ಲಿ ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶೀರೂರನ್ನು ಹೊರತುಪಡಿಸಿದರೂ ಮಾಣೈ, ಭಂಡಾರಿಬೆಟ್ಟಿನಲ್ಲಿ ಕನಿಷ್ಠ ಸುಮಾರು 15 ದಿನಗಳಿಗೆ ಬೇಕಾದಷ್ಟು ನೀರು ಲಭ್ಯವಿದೆ ಎಂದು ಸೋಮವಾರ ಅಧಿಕಾರಿಗಳು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next