Advertisement

Udupi constituency;ಮತಬೇಟೆಗೆ ಅಸಲಿ ಆಟ ಆರಂಭ; ರೋಡ್‌ ಶೋ, ಪ್ರಚಾರ ಕಾರ್ಯ ಬಿರುಸು

03:23 PM Apr 26, 2023 | Team Udayavani |

ಉಡುಪಿ: ರಾಜಕೀಯಕ ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಹಲವಾರು ರೀತಿಯ ಗೊಂದಲಗಳು ಉಂಟಾಗಿದ್ದವು. ಪಕ್ಷದೊಳಗೆ ಅಸಮಾಧಾನ, ಬಂಡಾಯ ಸ್ಪರ್ಧೆಯ ಯೋಚನೆ ಸಹಿತ ಹಲವಾರು ಅಡೆತಡೆಗಳು ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿಯೂ ಇತ್ತು. ಬಳಿಕ ಕೆಲವೇ ದಿನಗಳಲ್ಲಿ ಇದು ಇತ್ಯರ್ಥ ಕಂಡಿದೆ.

Advertisement

ಈ ನಡುವೆ ನಾಮಪತ್ರ ವಾಪಸಾತಿ ಪ್ರಕ್ರಿಯೆ ಯೂ ಮುಗಿದಿದ್ದು, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 35 ಮಂದಿ ಅಭ್ಯರ್ಥಿಗಳಿಂದ ಮತಬೇಟೆಯ ಅಸಲಿ ಆಟ ಆರಂಭವಾಗಿದೆ. ಈಗ ಜಿಲ್ಲೆಯಾದ್ಯಂತ ಚುನಾವಣ ಪ್ರಚಾರ ಮತ್ತಷ್ಟು ವೇಗ ಪಡೆದುಕೊಂಡಿದೆ. ವಿವಿಧ ಪಕ್ಷಗಳ ಕಾರ್ಯಕರ್ತರಿಂದ ಮನೆ ಮನೆ ಭೇಟಿ, ರೋಡ್‌ ಶೋ, ಸಾಮಾಜಿಕ ಜಾಲತಾಣಗಳಲ್ಲಿ
ಪ್ರಚಾರ ಬಿರುಸುಗೊಂಡಿದೆ.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಮಂದಿ
ನಾಮಪತ್ರ ಹಿಂಪಡೆದಿದ್ದು ಜಿಲ್ಲೆಯ ಚುನಾವಣ ಅಖಾಡ ಅಂತಿಮ ರೂಪ ಪಡೆದಿದೆ. ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷಗಳ
ಕಾರ್ಯಕರ್ತರು ಮನೆಮನೆ ಭೇಟಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ. ಧಾರ್ಮಿಕ
ಸ್ಥಳಗಳು, ವಿವಿಧ ಕಾರ್ಯಕ್ರಮಗಳು, ಜಾತ್ರೆ, ನೇಮಗಳಲ್ಲಿಯೂ ಅಭ್ಯರ್ಥಿಗಳೇ ಕಾಣ ಸಿಗುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆ
ಮತಪ್ರಚಾರಕ್ಕಾಗಿ ಅಭ್ಯರ್ಥಿಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದಾರೆ. ವಿವಿಧ ಸಭೆ- ಸಮಾರಂಭಗಳು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸೇರಿದ ಜನರು ಹಾಗೂ ಅಭ್ಯರ್ಥಿಗಳ ಸಾಧನೆಗಳುಳ್ಳ ವಿವರ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ಮನೆಮನೆ ಪ್ರಚಾರ ಆರಂಭ ಬಿಜೆಪಿ ವತಿಯಿಂದ ಮಹಾ ಅಭಿಯಾನ ರವಿವಾರ ಆರಂಭಗೊಂಡಿದ್ದು, ಆಯಾ ಬೂತ್‌ ಮಟ್ಟದಿಂದ ಸಕ್ರಿಯವಾಗಿ ನಡೆಯುತ್ತಿದೆ. ಮುಂದಿನ ಎರಡು ರವಿವಾರಗಳಂದು ಇದು ಮುಂದುವರಿಯಲಿದ್ದು, ಈ ಮೂಲಕ ಪ್ರತೀ ಮನೆಗೂ ತೆರಳಿ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ
ಸಾಧನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್‌ ವತಿಯಿಂದಲೂ ಮನೆಮನೆ ಪ್ರಚಾರ ಕಾರ್ಯ ಆರಂಭಗೊಂಡಿದೆ.

ಮತದಾರರ ಓಲೈಕೆ
ಮನೆಗಳಲ್ಲಿ ಹಾಗೂ ದೂರದ ಊರುಗಳಲ್ಲಿ, ಅನ್ಯ ಜಿಲ್ಲೆ, ವಿದೇಶದಲ್ಲಿರುವ ಜಿಲ್ಲೆಯ  ಮತದಾರರನ್ನೂ ರಾಜಕೀಯ ಪಕ್ಷಗಳು
ಓಲೈಕೆ ಮಾಡುತ್ತಿದ್ದಾರೆ. ಅವರಿಗೆ ಕರೆ ಮಾಡಿ ವಿಚಾರಿಸಿ ಮತದಾನ ದಿನದಂದು ಬಂದು ತಮಗೇ ಮತಚಲಾಯಿಸಬೇಕು ಎಂದು
ಕೂಡ ವಿನಂತಿ ಮಾಡುವ ಪ್ರಕ್ರಿಯೆ ಪಕ್ಷಗಳ ಕಾರ್ಯಕರ್ತರ ಮೂಲಕ ನಡೆಯುತ್ತಿದೆ.

Advertisement

ಹೊರ ರಾಜ್ಯ,ಜಿಲ್ಲೆಗಳಲ್ಲಿ ಮತ ಬೇಟೆ
ಜಿಲ್ಲೆಯ ಸಾಕಷ್ಟು ಮತದಾರರು ಹೊರ ಜಿಲ್ಲೆ, ರಾಜ್ಯಗಳಲ್ಲಿಯೂ ನೆಲೆಸಿರುವುದರಿಂದ ಅಭ್ಯರ್ಥಿಗಳು ಮತ್ತು ಪಕ್ಷದ ಪ್ರಮುಖರು
ಅಲ್ಲಿಗೂ ತೆರಳಿ ಮತ ಪ್ರಚಾರ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಎರಡು ಪಕ್ಷಗಳು ಕ್ಲೀನ್‌ ಸ್ವೀಪ್‌ಗೆ ಜಿದ್ದಾಜಿದ್ದಿನಲ್ಲಿವೆ. ಬೈಂದೂರು, ಕಾರ್ಕಳ, ಉಡುಪಿ, ಕಾಪು, ಕುಂದಾಪುರ ಕ್ಷೇತ್ರದ ಹಲವು ಮತದಾರರು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಹೊಟೇಲ್‌, ಕ್ಯಾಂಟಿನ್‌, ಕಾಂಡಿಮೆಂಟ್ಸ್‌ ಉದ್ಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿದ್ದಾರೆ. ಅಲ್ಲದೇ ಪ್ರಮುಖ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿಯೂ ಅನೇಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬಯಿ ಮತ್ತು ಪುಣೆಯಲ್ಲಿಯೂ ಕರಾವಳಿ ಜಿಲ್ಲೆಯವರು ಹೆಚ್ಚಿದ್ದಾರೆ.

ಹಾಗೆಯೇ ಅರಬ್‌ ದೇಶಗಳಲ್ಲೂ ಉದ್ಯೋಗ ಮಾಡುತ್ತಿರುವ ಕರಾವಳಿಗರ ಮೇಲೆ ಅಭ್ಯರ್ಥಿಗಳು ಕಣ್ಣಿಟ್ಟಿದ್ದು, ಅವರನ್ನು
ಮತದಾನದ ದಿನ ಊರಿಗೆ ಕರೆಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಭ್ಯರ್ಥಿಗಳು ಹೊರ ಜಿಲ್ಲೆ/ ರಾಜ್ಯಗಳಲ್ಲಿ
ಇರುವ ಪ್ರಮುಖ ಸಂಘ, ಸಂಸ್ಥೆಗಳಲ್ಲಿನ ಮುಖಂಡರನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ. ಅಲ್ಲದೇ ಅಲ್ಲಲ್ಲಿ ಸಣ್ಣ ಸಣ್ಣ ಸಭೆಗಳನ್ನು ಆಯೋಜಿಸುವ ಮೂಲಕ ಖುದ್ದು ಅಭ್ಯರ್ಥಿ ಗಳೇ ಹೋಗಿ ಮನವರಿಕೆ ಮಾಡಿಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರದ ಕೆಲವು ಅಭ್ಯರ್ಥಿಗಳು ಬೆಂಗಳೂರು, ಮುಂಬಯಿ, ಪುಣೆ, ಹುಬ್ಬಳಿ- ಧಾರವಾಡ ಮೊದಲಾದ ಕಡೆಗಳಲ್ಲಿ ಸಭೆ ನಡೆಸಿ ಮತಯಾಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next