ಉಡುಪಿ: ಇತ್ತೀಚಿಗೆ ನಡೆದ ಭಾರತ್ ಬಂದ್ ಸಂದರ್ಭ ನಡೆದ ಲಾಠಿಚಾರ್ಜ್ ಬಿಸಿ ಇನ್ನೂ ತಣ್ಣಗಾಗಿಲ್ಲ. ಎಸ್‌ಪಿಯವರನ್ನು ವರ್ಗಾಯಿಸಬೇಕು ಎಂಬ ಬೇಡಿಕೆಯ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಸಚಿವರ ಬಗ್ಗೆ ಕಾಂಗ್ರೆಸ್‌ನೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಇದು ಯಾವ ಹಂತಕ್ಕೆ ತಲುಪಲಿದೆ ಎಂಬ ಕುತೂಹಲ ಮೂಡಿದೆ.
ಗಾಂಧೀ ಜಯಂತಿಯಂದು ತಮ್ಮನ್ನು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ತರಾಟೆಗೆ ತೆಗೆದು ಕೊಂಡಾಗ ಸಚಿವೆ ಡಾ| ಜಯಮಾಲಾ, “ಮಾಧ್ಯಮದವರೆದುರು ನನ್ನನ್ನು ಬೆದರಿಸಬೇಡಿ’ ಎಂದದ್ದು, ಅದಕ್ಕೂ ಹಿಂದೆ ಪ್ರಮೋದ್ ಮಧ್ವರಾಜರು, “ನಾನು ಸರ್ಕಲ್ ಇನ್ಸ್‌ಪೆಕ್ಟರ್‌ರನ್ನು ವರ್ಗಾಯಿಸಿದ್ದೇನೆ. ಇನ್ನೇನಿದ್ದರೂ ಸಚಿವರನ್ನು ಭೇಟಿ ಮಾಡಿ’ ಎಂದು ಹೇಳಿದ್ದು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾನ ಮನಸ್ಕ ಕಾರ್ಯಕರ್ತರ ಸಭೆಯಲ್ಲಿ ಪ್ರಸ್ತಾವಗೊಂಡಿದೆ. ಸಭೆಯಲ್ಲಿ ಸುಮಾರು ನೂರು ಮಂದಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ದಿವಾಕರ ಕುಂದರ್, ರಮೇಶ ಕಾಂಚನ್, ಹಾಲಿ ಮತ್ತು ಮಾಜಿ ನಗರಸಭಾ ಸದಸ್ಯರು ಭಾಗವಹಿಸಿದ್ದರು.
ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜತೆಯಾಗಿ ಎಸ್‌ಪಿಯವರಲ್ಲಿ ಮಾತನಾಡಿದ್ದರೂ ಪ್ರಕರಣ ಹಿಂದಕ್ಕೆ ಪಡೆದಿಲ್ಲ. ಇದನ್ನು ಸರಕಾರದ ಮಟ್ಟದಲ್ಲಿ ಮಾಡಬೇಕೆಂದು ಇತ್ತೀಚಿಗೆ ಎಸ್‌ಪಿಯವರೇ ಮಾಧ್ಯಮಕ್ಕೆ ತಿಳಿಸಿದ್ದರು. ಆದ್ದರಿಂದ ಉನ್ನತ ನಾಯಕರ ಸಮ್ಮುಖ ನಡೆದ ಮಾತುಕತೆಯೇ ಫಲಪ್ರದವಾಗಿಲ್ಲ. ಇದೂ ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ.
ಸಭೆಯಲ್ಲಿ ಮುಖ್ಯವಾಗಿ ಎಸ್‌ಪಿಯವರ ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಜನಪ್ರತಿನಿಧಿಯವರ ಮೇಲೆ ಹಲ್ಲೆ ನಡೆಸಿದ ಎಸ್‌ಪಿಯವರನ್ನು ವರ್ಗಾವಣೆಗೊಳಿಸಲೇಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಗಾಂಧೀ ಜಯಂತಿಯಂದು ಕಾರ್ಯಕರ್ತರು ಅಸಮಾಧಾನಗೊಂಡ ಸಂದರ್ಭ ಪ್ರಮೋದ್ ಅವರು “ನಾನು ಒಂದು ತಿಂಗಳು ಸಿಕ್ ಲೀವ್ ತೆಗೆದುಕೊಂಡಿದ್ದೆ. ಜಿಲ್ಲಾಧ್ಯಕ್ಷರು ರಜೆ ಮಂಜೂರು ಮಾಡಿದ್ದಾರೆ. ಆದರೂ ನಾನು ಗಲಾಟೆ ನಡೆದ ಸಂದರ್ಭ ಆಸ್ಪತ್ರೆಗೆ ಬಂದು ಹೋಗಿದ್ದೇನೆ’ ಎಂದು ಹೇಳಿದ್ದರು. ಹಾಲಿ ಮತ್ತು ಮಾಜಿ ಸಚಿವರಿಬ್ಬರೂ ತಮ್ಮ ಕಷ್ಟಕ್ಕೆ ಇಲ್ಲವೆಂಬ ಆರೋಪ ಕಾರ್ಯಕರ್ತರದ್ದು. ಇವೆಲ್ಲದರ ಬಗ್ಗೆ ವರಿಷ್ಠ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ಪ್ರತಾಪಚಂದ್ರ ಶೆಟ್ಟಿ, ವಿನಯ ಕುಮಾರ ಸೊರಕೆಯವರಲ್ಲಿ ನಿವೇದಿಸಲು ಸಭೆ ನಿರ್ಧರಿಸಿದ್ದು, ಇದರಂತೆ ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಾಪಚಂದ್ರ ಶೆಟ್ಟಿಯವರ ಮುಂದೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಪಕ್ಷದ ಆಂತರಿಕ ವಿಷಯ. ಇದನ್ನು ಹೊರಗೆ ಹೇಳಿ ಪ್ರಯೋಜನವಿಲ್ಲ. ಆಸ್ಕರಣ್ಣ ಉಡುಪಿಗೆ ಬಂದಾಗ ಅವರಲ್ಲಿ ಹೇಳ್ಳೋಣ ಎಂದು ಪ್ರತಾಪಚಂದ್ರ ಶೆಟ್ಟಿಯವರು ಸಲಹೆ ನೀಡಿದ್ದಾರೆ.
ಜನಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಎಸ್‌ಪಿಯವರನ್ನು ವರ್ಗಾ ಯಿಸಲೇಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆ. ಕಾರ್ಯಕರ್ತರೊಂದಿಗೆ ಮಾಜಿ ಮತ್ತು ಹಾಲಿ ಸಚಿವರು ನಿಷ್ಠುರವಾಗಿ ಮಾತನಾಡಿದ್ದು ಬೇಸರ ತಂದಿದೆ ಎಂದು ಜಿ.ಪಂ. ಮಾಜಿ ಸದಸ್ಯ ದಿವಾಕರ ಕುಂದರ್ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಹಾಲಿ ಮತ್ತು ಮಾಜಿ ಸಚಿವರು ಸಿಟ್ಟಿನಿಂದ ಮಾತನಾಡಿದ ಕುರಿತು ಅಸಮಾಧಾನ ಸ್ಫೋಟಗೊಂಡದ್ದು ನಿಜ.
ದಿನೇಶ್ ಪುತ್ರನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು