ಉಡುಪಿ: ಮುಂಗಾರು ಮಳೆ ವಿಳಂಬವಾಗಿ ಆರಂಭ ವಾದರೂ ಮೊದಲ ಮಳೆಗೆ ಉಡುಪಿ ನಗರದಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ.
ಇದರ ಮುನ್ಸೂಚನೆ ಎಂಬಂತೆ ಕಳೆದೆರಡು ದಿನ ಸುರಿದ ಸಾಧಾರಣ ಮಳೆಗೆ ನಗರದ ಹಲವೆಡೆ ರಸ್ತೆಯೇ ಚರಂಡಿಯಂತಾಗಿದೆ. ಕೊಳಚೆ ನೀರು ಮಳೆ ನೀರಿನೊಂದಿಗೆ ಸೇರಿದೆ. ಜತೆಗೆ ರಸ್ತೆ ಸಂಚಾರಕ್ಕೂ ತೊಡಕಾಗಿದೆ.
ಬನ್ನಂಜೆ ಗರೋಡಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನೀರು ಹರಿವಿಗೆ ತಡೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಅನಂತರ ನಗರಸಭೆ ಸಿಬಂದಿ ಆಗಮಿಸಿ ಇದನ್ನು ತೆರವುಗೊಳಿಸಿದರು. ಮಠದಬೆಟ್ಟಿನ ಕೆಲವು ಮನೆಗಳ ಅಂಗಳಕ್ಕೆ ಈ ವರ್ಷವೂ ಕೊಳಚೆ ನೀರು ಹರಿದಿದೆ.
ಮಣಿಪಾಲ ರಸ್ತೆ
ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿರುವ ಉಡುಪಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ 169ಎಯ ಅಲ್ಲಲ್ಲಿಮಳೆ ಅವಾಂತರ ಮುಂದುವರಿದಿದೆ. ಕಡಿಯಾಳಿ ಭಾಗದಲ್ಲಿ ಬುಧವಾರ ರಾತ್ರಿ ರಸ್ತೆಯ ನೀರು ಮತ್ತು ಕೆಸರು ಪಕ್ಕದ ಮನೆ, ಅಂಗಡಿಗಳ ಒಳಗೆ ನುಗ್ಗಿತು. ಬೆಳಗ್ಗೆ ಚರಂಡಿ ಬಿಡಿಸಿಕೊಡಲಾಯಿತು. ಇಂದ್ರಾಳಿ ರೈಲ್ವೆ ಸೇತುವೆ ಸಮೀಪ ಹೊಸ ರಸ್ತೆ ಸಂಪರ್ಕಕ್ಕಾಗಿ ಮಣ್ಣು, ಜಲ್ಲಿಕಲ್ಲು ಹಾಕಿರುವ ಸ್ಥಳ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ಮಳೆಯಿಂದಾಗಿ ಹೊಂಡಗಳು ಹೆಚ್ಚಾಗಿವೆ. ಇದೇ ರಸ್ತೆ ಮುಂದಕ್ಕೆ ಹಲವೆಡೆ ಮಣ್ಣು ಕೊಚ್ಚಿ ಹೋಗಿ ಕೆಲವು ಮನೆಯಂಗಳವನ್ನು ಆವರಿಸಿದೆ. ಐನಾಕ್ಸ್ ಚಿತ್ರಮಂದಿರದ ಎದುರು ಕೂಡ ರಸ್ತೆ ಸಂಚಾರಕ್ಕೆ ತೊಡಕಾಯಿತು.
ಸೂಪರ್ ಮಾರ್ಕೆಟ್‌ಗೆ ನೀರು
ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಸೂಪರ್ ಮಾರ್ಕೆಟ್‌ಗೆ ಬುಧವಾರ ರಾತ್ರಿ ಏಕಾಏಕಿ ಮಳೆ ನೀರು ಹಾಗೂ ಕೊಳಚೆ ನೀರು ಪ್ರವೇಶಿಸಿ ಅಪಾರ ನಷ್ಟವಾಗಿದೆ. ಇಲ್ಲಿನ ಇತರ ಅಂಗಡಿಗಳಿಗೂ ನೀರು ನುಗ್ಗಿ ನಷ್ಟವಾಗಿದೆ. ಕಡಿಯಾಳಿ ಸಮೀಪದ ಪಿಲಿಚಂಡಿ ರಸ್ತೆಯಲ್ಲೂ ಚರಂಡಿಯಲ್ಲಿ ಮಳೆ ನೀರು ಹರಿಯಲು ತಡೆಯುಂಟಾಯಿತು.
ಮರದ ಗೆಲ್ಲು, ಸೋಗೆ ಚರಂಡಿಗೆ
ಮೆಸ್ಕಾಂ ಸಿಬಂದಿ ಕಡಿದು ಹಾಕಿರುವ ಮರದ ಕೊಂಬೆಗಳು ಚರಂಡಿ ಸೇರಿದ್ದು ನೀರಿನ ಸರಾಗ ಹರಿವಿಗೆ ತಡೆಯಾಗಿದೆೆ. ಇನ್ನು ಕೆಲವೆಡೆ ನಿವಾಸಿಗಳು ತಮ್ಮ ಮನೆ ಕಾಂಪೌಂಡಿನೊಳಗಿದ್ದ ತೆಂಗಿನ ಮರದ ಗರಿಯನ್ನು ಮಳೆ ನೀರು ಹರಿಯುವ ಚರಂಡಿಗೆ ತಂದು ಹಾಕಿರುವುದ ರಿಂದಲೂ ಸಮಸ್ಯೆಯಾಗಿದೆ. ಕೆಲವು ಮನೆ, ಕಟ್ಟಡಗಳ ಕೊಳಚೆ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಪರ್ಕಳದಲ್ಲಿ ಮೋಹನದಾಸ್ ನಾಯಕ್ ಅವರ ಮನೆಗೆ ಚರಂಡಿ ನೀರು ನುಗ್ಗಿ ಹಾನಿಯಾಗಿದೆ. ಪರ್ಕಳ ಪರಿಸರ ಸೇರಿದಂತೆ ಹಲವೆಡೆ ರಸ್ತೆ ಅಭಿವೃದ್ಧಿಗಾಗಿ ಅಗೆದಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನ ಸಮೀಪದಲ್ಲೂ ವಿದ್ಯುತ್ ಕಂಬ ಬಿದ್ದಿದೆ.
ಶಾಸಕ ಭಟ್ ಭೇಟಿ
ಕಕ್ಕುಂಜೆ ವಾರ್ಡ್‌ನ ವಿಷ್ಣುಮೂರ್ತಿ ದೇವಸ್ಥಾನ ಬಳಿ ಬುಧವಾರ ರಾತ್ರಿ ದಿನೇಶ್ ಮತ್ತು ಸಂತೋಷ್ ಪೂಜಾರಿ ಅವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದ್ದು ಸ್ಥಳಕ್ಕೆ ಶಾಸಕ ಕೆ.ರಘುಪತಿ ಭಟ್, ಸ್ಥಳೀಯ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಕಕ್ಕುಂಜೆ ಅವರು ಭೇಟಿ ನೀಡಿ ಪರಿಶೀಲಿಸಿದರು.