Advertisement
ಉಡುಪಿ: ಸರಕಾರಿ ಕಚೇರಿಗಳು, ಜಿಲ್ಲಾಸ್ಪತ್ರೆ, ಕ್ರೀಡಾಂಗಣ, ಪಾರ್ಕ್ ಇರುವ ಅಜ್ಜರಕಾಡು ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸುಮಾರು 2,959 ಜನಸಂಖ್ಯೆ ಇರುವ ಈ ವಾರ್ಡ್ ಜನರು ಕೂಡ 3 ದಿನಕ್ಕೊಮ್ಮೆ ಬರುವ ನೀರನ್ನೇ ಆಶ್ರಯಿಸಿದ್ದಾರೆ.
ನೀರಿನ ಸಮಸ್ಯೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೂ ತಟ್ಟಿದೆ. ತಿಂಗಳಿಂದ ಇಲ್ಲಿಗೆ ಟ್ಯಾಂಕರ್ ನೀರು ಸರಬರಾಜಾಗುತ್ತಿದೆ. ಆಸ್ಪತ್ರೆಯಿಂದ ಅರ್ಧ ಕಿ.ಮೀ.ದೂರದಲ್ಲಿ ಬಾವಿಯಿದ್ದು, ನೀರು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಪ್ರಸ್ತುತ ಒಂದು ಹೊತ್ತು ಅರ್ಧತಾಸು ಮಾತ್ರ ಇಲ್ಲಿ ನೀರು ಲಭ್ಯವಾಗುತ್ತಿದೆ. ಆಸ್ಪತ್ರೆಗೆ ದಿನಕ್ಕೆ 12 ಲೀ. ಸಾಮರ್ಥ್ಯದ 8-10 ಟ್ಯಾಂಕರ್‌ಗಳಿಂದ ನೀರು ಪಡೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ 30 ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ಹಾಗೂ 10 ಸಾವಿರ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಇದೆ. ಸಂಪ್‌ನಲ್ಲಿ ನೀರು ತುಂಬಿಸಿ ಅನಂತರ ಓವರ್‌ಹೆಡ್ ಟ್ಯಾಂಕ್‌ಗೆ ಹಾಕಲಾಗುತ್ತದೆ. ಆಸ್ಪತ್ರೆಯ ಸಿಬಂದಿಯೂ ನೀರನ್ನು ಮಿತವಾಗಿ ಬಳಸುತ್ತಿದ್ದಾರೆ.
Related Articles
ನೀರಿಲ್ಲದ ಕಾರಣ ತವರು ಮನೆಯ ನೆನಪಾಗುತ್ತಿದೆ. ಮಕ್ಕಳಿಗೆ ಈಗ ರಜೆಯಿದೆ. ಜೂನ್ ತಿಂಗಳಲ್ಲಿ ಮತ್ತೆ ಪುನಃ ಬಂದರೆ ಆದೀತು ಎಂದು ತಮ್ಮ ಹಂಬಲ ವ್ಯಕ್ತಪಡಿಸಿದವರು ದಯಾವತಿ ಎಂಬವರು.
Advertisement
1 ಕೊಡ ತುಂಬಲು ಅರ್ಧ ಗಂಟೆ!ಮೊನ್ನೆ ದಿನ ನೀರು ಬಂತು. ಆದರೆ ಒತ್ತಡ ಕಡಿಮೆ ಇದ್ದ ಕಾರಣ ಹನಿಹನಿ ಪ್ರಮಾಣದಲ್ಲಿ ನಮಗೆ ಲಭ್ಯವಾಯಿತು. ಸಿಕ್ಕಿದ್ದು 1 ಕೊಡ ಮಾತ್ರ ಆದರೆ ಅದು ತುಂಬಲು ಸುಮಾರು ಅರ್ಧಗಂಟೆ ಸಮಯ ತೆಗೆದುಕೊಂಡಿತು ಎಂದು ವಿವರಿಸಿದರು ಆನಂದ್. ಟ್ಯಾಂಕರ್ ಅನಿವಾರ್ಯ
2018ರಲ್ಲಿ ಕೂಡ ಈ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದರೂ, ಮಧ್ಯೆ ಟ್ಯಾಂಕರ್ ನೀರು ಸರಬರಾಜಿತ್ತು. ಆದರೆ ಬೇಗನೆ ಮಳೆ ಸುರಿದ ಪರಿಣಾಮ ಅಷ್ಟೊಂದು ಸಮಸ್ಯೆ ಗೋಚರಕ್ಕೆ ಬರಲಿಲ್ಲ. ಈ ಬಾರಿ ಎಪ್ರಿಲ್ ತಿಂಗಳಲ್ಲೇ ನೀರಿನ ಕೊರತೆ ಕಂಡುಬಂದಿರುವುದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಸಮಸ್ಯೆ ಇರುವೆಡೆ ಟ್ಯಾಂಕರ್ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ವಾರ್ಡಿನವರ ಬೇಡಿಕೆ
– ಟ್ಯಾಂಕರ್‌ನಿಂದ ಬರುವ ನೀರು ಅಧಿಕ ಒತ್ತಡದಿಂದ ಕೂಡಿದರೆ ಅನುಕೂಲ.
– ದಿನಕ್ಕೊಮ್ಮೆಯಾದರೂ ನೀರು ಸಿಗಬೇಕು.
– ನೀರನ್ನು ಪೋಲು ಮಾಡು ವವರ ವಿರುದ್ಧ ಕ್ರಮ ಕೈಗೊಳ್ಳಿ.
– ನೀರು ದಾಸ್ತಾನಿಗೆ ಪರ್ಯಾಯ ವ್ಯವಸ್ಥೆ ಒದಗಿಸಿ ಹೊತ್ತಲ್ಲದ ಹೊತ್ತು ನೀರು ಬಿಟ್ಟರೆ ಏನು ಮಾಡುವುದು?
ನಿಗದಿತ ಸಮಯದಲ್ಲಿ ನೀರು ನೀಡಿದರೆ ನಮಗೂ ತುಂಬಿಸಲು ಅನುಕೂಲವಾಗುತ್ತದೆ. ಅದು ಬಿಟ್ಟು ಬೆಳ್ಳಂಬೆಳಗ್ಗೆ 2 ಗಂಟೆಗೆ 4 ಗಂಟೆಗೆ ನೀರು ಬಿಡುವುದರಿಂದ ನಿದ್ದೆ ಬಿಟ್ಟು ಕಾಯಬೇಕಾಗುತ್ತದೆ. ಕೆಲವೊಂದು ಬಾರಿ ಹಗಲು ಹೊತ್ತು ಕೂಡ ಬರುವುದುಂಡು. ಇದರಿಂದ ಅತ್ತ ಹೊರಗಡೆ ಹೋಗಲೂ ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‌ಗೆ ಇಂತಿಷ್ಟು ಸಮಯದಲ್ಲಿ ನೀರು ಬರುವುದು ಎಂದು ನಿಗದಿ ಮಾಡಿದರೆ ನಮಗೂ ಅನುಕೂಲವಾಗುತ್ತದೆ.
-ಆನಂದ್,ಸ್ಥಳೀಯ ನಿವಾಸಿ ನೆಂಟರೂ ನೀರಿನ ಬಗ್ಗೆ ಕೇಳುತ್ತಾರೆ!
ದೂರವಾಣಿ ಮೂಲಕ ದೂರದ ನೆಂಟರಲ್ಲಿ ಮಾತನಾಡುತ್ತೇವೆ. ಅವರಿಗೂ ನಮ್ಮ ಸಮಸ್ಯೆ ಅರಿವಾಗಿದೆ. ಕಳೆದ ಬಾರಿ ರಜೆಯ ಸಮಯದಲ್ಲಿ ತಂಗಿಯ ಮಕ್ಕಳು ಬಂದಿದ್ದರು. ಆವಾಗಲೂ ನೀರಿನ ಸಮಸ್ಯೆ ಇತ್ತು. ಈ ಬಾರಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಊರಿಗೆ ಬರುವ ಮೊದಲೇ ನೀರು ಉಂಟಾ..? ಎಂದು ಕೇಳುತ್ತಾರೆ. ನೀರಿನ ಸಮಸ್ಯೆಯಿಂದ ಯಾರು ಕೂಡ ಬರಲು ಆಸಕ್ತಿ ತೋರಿಸುತ್ತಿಲ.
- ಪಾಂಡುರಂಗ,ಸ್ಥಳೀಯ ನಿವಾಸಿ ಉದಯವಾಣಿ ಆಗ್ರಹ
ತಾತ್ಕಾಲಿಕವಾಗಿಯಾದರೂ ಈ ಭಾಗದಲ್ಲಿ ನೀರಿನ ಶೇಖರಣೆಗೆ ಫೈಬರ್ ಟ್ಯಾಂಕ್‌ನ ವ್ಯವಸ್ಥೆಯನ್ನು ಆಡಳಿತ ಮಾಡಿಕೊಡಬೇಕು. ನೀರಿನ ಅಭಾವ ತೀವ್ರವಾಗಿರುವಲ್ಲಿ ಟ್ಯಾಂಕರ್ ನೀರು ಪೂರೈಸಬೇಕು. ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್ ನಂಬರ್ 9148594259 ಬರೆದು ಕಳುಹಿಸಿ. – ಪುನೀತ್ ಸಾಲ್ಯಾನ್