Advertisement

ಮೂರೂ ಪಕ್ಷಗಳಿಗೆ “ಇಲ್ಲ’ದ ಕಾಟ

12:30 AM Mar 16, 2019 | Team Udayavani |

ಕಾಂಗ್ರೆಸ್‌ಗೆ ಅವಕಾಶ, ಜೆಡಿಎಸ್‌ಗೆ ಅಭ್ಯರ್ಥಿ, ಬಿಜೆಪಿ ಸಂಸದೆಗೆ ಬೆಂಬಲ
1951ರಲ್ಲಿ 2.2 ಲಕ್ಷ, 2019ರಲ್ಲಿ 14.94 ಲಕ್ಷ ಮತದಾರರು

Advertisement

ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಸ್ವಾತಂತ್ರ್ಯಾ ನಂತರದಿಂದಲೂ ಸ್ವತಂತ್ರ ಅಸ್ತಿತ್ವವಿದ್ದರೆ ಚಿಕ್ಕ ಮಗಳೂರು ಆಗ ಹಾಸನ ಕ್ಷೇತ್ರದೊಂದಿಗಿತ್ತು. 1967ರಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಸ್ವತಂತ್ರ ಅಸ್ತಿತ್ವ ಬಂತು. ಆರಂಭದಿಂದ ಈಗಿನವರೆಗೆ ಕಾಂಗ್ರೆಸ್‌ ಉಡುಪಿಯಲ್ಲಿ 12 ಮತ್ತು ಚಿಕ್ಕಮಗಳೂರಿನಲ್ಲಿ 6 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಉಡುಪಿಯಲ್ಲಿ 4 ಬಾರಿ ಮತ್ತು ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದೆ. ಸ್ವತಂತ್ರ ಪಾರ್ಟಿ ಉಡುಪಿಯಲ್ಲಿ, ಪಿಎಸ್‌ಪಿ ಚಿಕ್ಕಮಗಳೂರಿನಲ್ಲಿ ತಲಾ ಒಂದು ಬಾರಿ ಜಯ ಗಳಿಸಿದ್ದವು. ಅತಿ ಹೆಚ್ಚು ಬಾರಿ ಗೆಲುವು ಕಂಡ ಮತ್ತು ಇಂದಿರಾ ಗಾಂಧಿಯವರಿಗೆ ಪುನರ್ಜನ್ಮ ನೀಡಿದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸದೆ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಡುವಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಇತ್ತ ಪ್ರಧಾನಿ ಮೋದಿಯವರ ವರ್ಚಸ್ಸು ಇದ್ದರೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಟಿಕೆಟ್‌ ಕೊಡ ಬಾರದೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುವ ಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಜೆಡಿಎಸ್‌ ಸಮರ್ಥ ಅಭ್ಯರ್ಥಿಗೆ ಹುಡುಕಾಟ ನಡೆಸುತ್ತಿದೆ. ಗೆಲುವು ಸಾಧಿಸಿದವರ ಪಟ್ಟಿ ಕಂಡಾಗ ಹಲವು ಮಂದಿ ಪಕ್ಷಾಂತರ ಮಾಡಿರುವುದು ಕಂಡುಬರುತ್ತದೆ.

ಮೊದಲ ಚುನಾವಣೆ
1951ರ ಚುನಾವಣೆ ವೇಳೆ ಅವಿಭಜಿತ ದ.ಕ. ಜಿಲ್ಲೆಯ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗಿನ ಸೌತ್‌ ಕೆನರಾ (ಉತ್ತರ)ದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಲ್ಯ 98,122 ಮತ ಗಳಿಸಿ ಜಯಶೀಲರಾಗಿದ್ದರು. ಕೆಎಂಪಿಪಿ ಪಕ್ಷದಿಂದ ಸ್ಪರ್ಧಿಸಿದ ಕೆ.ಬಿ. ಜಿನರಾಜ ಹೆಗ್ಡೆಯವರು 86,268, ಸೋಶಲಿಸ್ಟ್‌ ಪಕ್ಷದಿಂದ ಬಿ.ಜೆ. ಭಂಡಾರಿ 36,371 ಮತಗಳನ್ನು ಗಳಿಸಿದ್ದರು. 1957ರಲ್ಲಿ ಅವಿಭಜಿತ ದ.ಕ. ಜಿಲ್ಲೆ ಮೈಸೂರು ರಾಜ್ಯಕ್ಕೆ ಒಳಪಟ್ಟಿತು. ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಬೈಂದೂರು, ಸುರತ್ಕಲ್‌, ಬಂಟ್ವಾಳ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳು ಒಳಪಟ್ಟವು. 2009ರಲ್ಲಿ ಕ್ಷೇತ್ರ ಪುನರ್ವಿಂಗಡನೆ ಯಾದಾಗ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂದು ನಾಮ ಕರಣ ಮಾಡಲಾಯಿತು. 2009ರಲ್ಲಿ ಬಿಜೆಪಿಯ ಸದಾನಂದ ಗೌಡ, 2012ರಲ್ಲಿ ಕಾಂಗ್ರೆಸ್‌ನಿಂದ ಕೆ. ಜಯಪ್ರಕಾಶ್‌ ಹೆಗ್ಡೆ, 2014ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದರು. 

ಚಿಕ್ಕಮಗಳೂರು ಕ್ಷೇತ್ರವು ಹಾಸನ ದೊಂದಿಗೆ ಇತ್ತು. ಆಗ ಕಾಂಗ್ರೆಸ್‌ನ ಎಚ್‌. ಸಿದ್ದನಂಜಪ್ಪ 1,16,561 ಮತಗಳನ್ನು ಗಳಿಸಿದ್ದರೆ, ಎಸ್‌ಪಿಯ ಎಸ್‌. ಶಿವಪ್ಪ 55,289 ಮತ ಗಳಿಸಿದ್ದರು. 1967ರವರೆಗೆ ಇದು ಹಾಸನದೊಂದಿಗೆ ಇತ್ತು. 1967ರಲ್ಲಿ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ಬಿರೂರು, ಕಡೂರು, ತರಿಕೆರೆ, ದ.ಕ. ಜಿಲ್ಲೆಯ ಕಾರ್ಕಳ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರವಾಯಿತು. 1967ರಲ್ಲಿ ಈ ಕ್ಷೇತ್ರದಲ್ಲಿ ಪಿಎಸ್‌ಪಿಯ ಎಂ. ಹುಚ್ಚೇಗೌಡ, 1971, 1977ರಲ್ಲಿ ಕಾಂಗ್ರೆಸ್‌ನ ಡಿ.ಬಿ. ಚಂದ್ರೇಗೌಡ, 1978ರ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ, 1980ರಲ್ಲಿ ಕಾಂಗ್ರೆಸ್‌ನ ಪುಟ್ಟೇಗೌಡ, 1984 ರಲ್ಲಿ ಕಾಂಗ್ರೆಸ್‌ನ ತಾರಾ ದೇವಿ, 1996ರಲ್ಲಿ ಜನತಾದಳದ ಬಿ.ಎಲ್‌. ಶಂಕರ್‌, 1998, 1999, 2004ರಲ್ಲಿ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಚುನಾಯಿತ ರಾಗಿದ್ದರು. ಬಳಿಕ ಉಡುಪಿ- ಚಿಕ್ಕಮಗಳೂರು ಕ್ಷೇತ್ರವೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next