Advertisement

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೂ ಗರಿಷ್ಠ ಅನುದಾನ: ಶೋಭಾ

12:30 AM Mar 09, 2019 | |

ಉಡುಪಿ: ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ ಚುನಾವಣೆ ಸಂದರ್ಭ ಜನತೆಗೆ ನೀಡಿದ ಭರವಸೆಯಂತೆಯೇ ನಡೆದುಕೊಂಡಿದೆ. ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕೆಲಸ ಮಾಡಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗರಿಷ್ಠ ಅನುದಾನ, ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಶುಕ್ರವಾರ ಉಡುಪಿಯಲ್ಲಿ “ನಾಲ್ಕೂವರೆ ವರ್ಷ ಗಳಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವಿಕಾಸ ಪಥದೆಡೆಗೆ ಪುಟ್ಟ ಹೆಜ್ಜೆ’ ಎಂಬ ಹೊತ್ತಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹತ್ತಾರು ಯೋಜನೆಗಳು
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದೆ. ಉಜ್ವಲ ಯೋಜನೆ, 10 ಕೋಟಿ ಶೌಚಾಲಯ ನಿರ್ಮಾಣ, ವಿದ್ಯುದೀಕರಣ, ಅಮೃತ್‌ ಯೋಜನೆ, ಕಿಸಾನ್‌ ಸಮ್ಮಾನ್‌, ಅಂಗನವಾಡಿ ನೌಕರರ ಗೌರವ ಧನ ಹೆಚ್ಚಳ, ಗರ್ಭಿಣಿಯರಿಗೆ 26 ವಾರಗಳ ರಜೆ, ಆಯುಷ್ಮಾನ್‌ ಭಾರತ ಮೊದಲಾದ ಹತ್ತಾರು ಯೋಜನೆಗಳು ಜನರನ್ನು ತಲುಪುತ್ತಿವೆ ಎಂದರು.

ರಾಜ್ಯ ನಿರ್ಲಕ್ಷ್ಯ 
ನಗರಗಳ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಅಮೃತ್‌ ಯೋಜನೆಯಡಿ ಕೇಂದ್ರ ಅನುದಾನ ನೀಡಿದೆ. ಆದರೆ ರಾಜ್ಯ ಸರಕಾರ ನಿರ್ಲಕ್ಷ್ಯ ತೋರಿದೆ. ಬರಗಾಲ ಪರಿಹಾರ ಕೆಲಸಕ್ಕೆ ಕೇಂದ್ರದಿಂದ ಪರಿಹಾರ ಬಿಡುಗಡೆಯಾದರೂ ರಾಜ್ಯ ಸರಕಾರ ಅದನ್ನು ಬೇರೆ ಕೆಲಸಗಳಿಗೆ ಬಳಸಿದೆ. ಕೇಂದ್ರ ಸರಕಾರ ಉಜ್ವಲ ಯೋಜನೆ ಆರಂಭಿಸಿದ ಕೂಡಲೇ ರಾಜ್ಯ ಸರಕಾರ ತನ್ನದೇ ವತಿಯಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬಿಂಬಿಸಲು ಯತ್ನಿಸಿತು. ಆಯುಷ್ಮಾನ್‌ ಭಾರತ್‌ ಯೋಜನೆಯ ಹೆಸರು ಬದಲಾಯಿಸಿತು. ಆಯುಷ್ಮಾನ್‌ ಭಾರತ್‌ನಲ್ಲಿ ಎಲ್ಲ ಅರ್ಹ ಕುಟುಂಬಗಳಿಗೂ 5 ಲ.ರೂ. ವರೆಗಿನ ಚಿಕಿತ್ಸೆ ಉಚಿತವಾಗಿ ದೊರೆಯುತ್ತದೆ ಎಂದರು.
ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್‌, ಮುಖಂಡರಾದ ಕೆ. ಉದಯ ಕುಮಾರ್‌ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಗೀತಾಂಜಲಿ ಸುವರ್ಣ, ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್‌ ಉಪಸ್ಥಿತರಿದ್ದರು.

ಟಿಕೆಟ್‌: ಸಂಸದೀಯ ಮಂಡಳಿ ನಿರ್ಧಾರ
“ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡುವ ಬಗ್ಗೆ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ನಿರ್ಧರಿಸಲಿದೆ. ರಾಜ್ಯದಲ್ಲಿ ಬಿಜೆಪಿಯ ಹಾಲಿ ಸಂಸದರೆಲ್ಲರಿಗೂ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ ಎಂದು  ಶೋಭಾ ಹೇಳಿದರು. 

Advertisement

ರೇವಣ್ಣ ಕ್ಷಮೆ ಯಾಚಿಸಲಿ
ಸುಮಲತಾ ಬಗ್ಗೆ ಸಚಿವ ರೇವಣ್ಣ ಕೀಳಾಗಿ ಮಾತನಾಡಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ರೇವಣ್ಣ ಅವರು ಕ್ಷಮೆ ಕೇಳಬೇಕು. ಮಹಿಳೆಯರಿಗೆ ಅವಕಾಶ ನೀಡುವ ಬಗ್ಗೆ ಕೇವಲ ಭಾಷಣ ಮಾಡಿದರಷ್ಟೇ ಸಾಲದು. ಪತಿಯನ್ನು ಕಳೆದುಕೊಂಡವರು ರಾಜಕೀಯಕ್ಕೆ ಬರಬಾರದು ಎಂದಿಲ್ಲ. ಸುಮಲತಾ ಅವರು ಬಿಜೆಪಿಗೆ ಬರುವುದಾದರೆ ಸ್ವಾಗತ. ಪಕ್ಷೇತರೆಯಾಗಿ ನಿಂತರೂ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಶೋಭಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next