ಮಲ್ಪೆ: ರಾಜ್ಯ ಕರಾವಳಿಯಲ್ಲಿ ಸೋಮವಾರದಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮುಂದಿನ 5 ದಿನಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರ ಬಿರುಸಾಗಿರುವುದ ರಿಂದ ಬಹುತೇಕ ಬೋಟುಗಳು ಮೀನು ಗಾರಿಕೆಯನ್ನು ನಿಲ್ಲಿಸಿವೆ.
ಮೇ ಮೊದಲ ವಾರದಿಂದ ಆಸಾನಿಚಂಡಮಾರುತದಿಂದಾಗಿ ಆಳ ಸಮುದ್ರ ದಲ್ಲಿ ಗಾಳಿಯ ಅಬ್ಬರ ಸೃಷ್ಟಿಯಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮತ್ತೆ ತೆರಳಿಲ್ಲ. ಬಹುತೇಕ ಮರದ ಬೋಟುಗಳು ಅವಧಿಗೆ ಮುನ್ನವೇ ಲಂಗರು ಹಾಕಿವೆ.
ಈ ಬಾರಿ ಮೀನುಗಾರಿಕೆ ಋತುವಿನ ಅಂತ್ಯದಲ್ಲಿ ಮೀನು ಲಭ್ಯತೆ ಕಡಿಮೆಯಾಗಿರುವುದು ಮತ್ತು ಡೀಸೆಲ್ ದರದ ಹೊರೆಯಿಂದಾಗಿ ಬಹುತೇಕ ಆಳ ಸಮುದ್ರ ಬೋಟುಗಳು ನಷ್ಟ ಅನುಭವಿಸಿವೆ. ತ್ರಿಸೆವೆಂಟಿ, ಸಣ್ಣ ಟ್ರಾಲ್ ಬೋಟುಗಳು ಈಗಾಗಲೇ ದಡ ಸೇರಿವೆ. ಮಲ್ಪೆ ಬಂದರಿನಲ್ಲಿ ಶೇ. 50ರಷ್ಟು ಬೋಟುಗಳು ಅವಧಿಗೆ ಮೊದಲೇ ಮೀನುಗಾರಿಕೆ ಮುಗಿಸಿವೆ.
ಇದುವರೆಗೆ ಮೇಲ್ಮಟ್ಟದಲ್ಲಿ ನೀರಿನ ತೇವಾಂಶ ಇರುವುದರಿಂದ ಮೀನು ಸಿಗುವ ಲಕ್ಷಣ ಇಲ್ಲ. ಚಂಡಮಾರುತದಿಂದ ಮಳೆಯಾಗುತ್ತಿದ್ದು, ಸಮುದ್ರದ ನೀರು ತಣ್ಣಗಾಗುವುದರಿಂದ ಮೀನಿನ ಲಕ್ಷಣ ಕಂಡುಬರಲಿದೆ ಎನ್ನಲಾಗಿದೆ. ಅಲ್ಲದೆ ಆಳ ಸಮುದ್ರ ದಲ್ಲಿ ರಾಣಿಮೀನು ಸಿಗುವ ಸಾಧ್ಯತೆಯೂ ಇದೆ. ಋತು ಅಂತ್ಯದಲ್ಲಿ ಲಾಭದಾಯಕ ಮೀನುಗಾರಿಕೆ ಆಗುತ್ತಿದ್ದು, ಈ ಬಾರಿ ಚಂಡಮಾರುತದಿಂದಾಗಿ ಮೀನುಗಾರಿಕೆ ಸಾಧ್ಯವಾಗಿಲ್ಲ. ಹೀಗಾಗಿ ಸರಕಾರ ಮೀನುಗಾರಿಕೆಗೆ ಹೆಚ್ಚುವರಿ ದಿನ ನೀಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಚಂಡಮಾರುತದಿಂದಾಗಿ ಈ ಬಾರಿ ಋತುವಿನ ಕೊನೆಯಲ್ಲಿ ಮೀನುಗಾರಿಕೆ ಸಾಧ್ಯವಾಗಿಲ್ಲ. ಮೇ 31ರಂದು ಯಾಂತ್ರಿಕ ಮೀನುಗಾರಿಕೆ ಕೊನೆಯಾಗಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಮಲ್ಪೆ ಬಂದರಿನಲ್ಲಿ ಮೀನುಗಾರ ಸಂಘದ ನೇತೃತ್ವದಲ್ಲಿ ವಿವಿಧ ಮೀನುಗಾರ ಸಂಘಟನೆಗಳ ಸಹಕಾರದಲ್ಲಿ ನಡೆದ ಸಭೆಯಲ್ಲಿ ಜೂ. 6ರ ವರೆಗೆ ಮೀನು ಖಾಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
– ರತ್ನಾಕರ ಸಾಲ್ಯಾನ್, ಕಾರ್ಯದರ್ಶಿ, ಮೀನುಗಾರರ ಸಂಘ, ಮಲ್ಪೆ
ಹವಾಮಾನ ಇಲಾಖೆ ಮೇ 20ರ ವರೆಗೆ ರೆಡ್ ಆಲರ್ಟ್ ನೀಡಿದೆ. ಜಿಲ್ಲಾಡಳಿತವು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ಕೊಟ್ಟಿದೆ. ಅಲ್ಲಿಯ ವರೆಗೆ ಬೋಟುಗಳಿಗೆ ಡೀಸೆಲ್ ನೀಡದಂತೆ ಎಲ್ಲ ಬಂಕ್‌ಗಳಿಗೆ ಸೂಚಿಸಲಾಗಿದೆ.
– ಗಣೇಶ್ ಕೆ., ಜಂಟಿ ನಿರ್ದೆಶಕರು, ಮೀನುಗಾರಿಕೆ ಇಲಾಖೆ