ಉಡುಪಿ: ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಎ. ಸುವರ್ಣ ಅವರು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಸಹಸ್ರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಶಾಸಕ ಕೆ. ರಘುಪತಿ ಭಟ್ ಸಮೇತರಾಗಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಕ್ರಮಿಸಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು, ಗೋಶಾಲೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಲ್ಪೆಯ ಅಯ್ಯಪ್ಪ ಸ್ವಾಮಿ ಮಂದಿರ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಿರಿಯ ಮುಖಂಡ ಸೋಮಶೇಖರ ಭಟ್ ಮನೆಗೆ ತೆರಳಿ ಆಶೀರ್ವಾದ ಪಡೆದು ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ದಿ| ಡಾ| ವಿ.ಎಸ್. ಆಚಾರ್ಯ ಭಾವಚಿತ್ರಕ್ಕೆ ನಮಿಸಿ, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.
ಪಾದಯಾತ್ರೆಯಲ್ಲಿ ಬಿಜೆಪಿ ಬಾವುಟದ ಜತೆಗೆ ಕೇಸರಿ ಬಾವುಟಗಳು ರಾರಾಜಿಸಿದವು. ಬಿಜೆಪಿ ಕಚೇರಿಯಿಂದ ಆರಂಭವಾದ ಪಾದಯಾತ್ರೆಯು ಕಡಿಯಾಳಿ, ಕಲ್ಸಂಕ, ಸಿಟಿಬಸ್ ನಿಲ್ದಾಣ, ಬನ್ನಂಜೆ ಸಮೀಪಿಸುತ್ತಿದ್ದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪಾರ್ಥನೆ ಮಾಡಿದರು. ಪಾದಯಾತ್ರೆ ತಾಲೂಕು ಕಚೇರಿವರೆಗೆ ಸಾಗಿತು.
ಮಾರ್ಗ ಮಧ್ಯದಲ್ಲಿ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಭ್ಯರ್ಥಿ ಪರವಾದ ಘೋಷಣೆಗಳು ಮುಗಿಲು ಮುಟ್ಟಿತ್ತು. ಚೆಂಡೆ ಬಳಗ, ನಾಸಿಕ್ ಬ್ಯಾಂಡ್ ಇತ್ಯಾದಿ ಪಾದಯಾತ್ರೆಗೆ ಮೆರುಗು ನೀಡಿತು. ಪಾದಯಾತ್ರೆ ಆರಂಭಕ್ಕೂ ಮೊದಲೇ ಕಾರ್ಯಕರ್ತರು ಅಲ್ಲಲ್ಲಿ ಪಕ್ಷದ ನಿರ್ದಿಷ್ಟ ಹಾಡಿಗೆ ಸ್ಟೆಪ್ ಹಾಕಿದರು. ಕೇಸರಿ ಶಲ್ಯ, ಪೇಟವನ್ನು ಧರಿಸಿದ್ದರು.
ಬಿಜೆಪಿ ಕಚೇರಿ ಮುಂಭಾಗ, ಸಿಟಿ ಬಸ್ ನಿಲ್ದಾಣದ ಸಮೀಪ ಹಾಗೂ ಬನ್ನಂಜೆಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ತಾಲೂಕು ಕಚೇರಿ ಸಮೀಪ ಪ್ರಮುಖರು, ಕಾರ್ಯಕರ್ತರು ಮಲ್ಲಿಗೆ ಹೂವಿನ ಹಾರದೊಂದಿಗೆ ಸ್ವಾಗತಿಸಿದರು. ಮಾರ್ಗ ಮಧ್ಯದಲ್ಲಿ ಹಿತೈಷಿಗಳಿಂದ ಪುಷ್ಪವೃಷ್ಟಿಯೂ ನಡೆಯಿತು.