Advertisement

ತಂದೆಯ ಅಂತ್ಯಕ್ರಿಯೆಗೆ ಸ್ವಗ್ರಾಮಕ್ಕೆ ಆಗಮಿಸಿದ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ್ ಭಟ್

05:44 PM Jun 25, 2020 | keerthan |

ಬೆಳ್ಮಣ್: ಸುಮಾರು ನಾಲ್ಕು ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ಸಂಚಲನ ಉಂಟು ಮಾಡಿದ್ದ ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ್ ಭಟ್ ಗೆ ತಾತ್ಕಾಲಿಕ ಜಾಮೀನು ದೊರೆತಿದ್ದು, ಸ್ವಗ್ರಾಮ ನಂದಳಿಕೆಗೆ ಆಗಮಿಸಿದ್ದಾನೆ.

Advertisement

ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಅವರು ಎರಡು ದಿನಗಳ ಹಿಂದೆ ನಿಧನ ಹೊಂದಿದ್ದು, ಇಂದು ಅವರ ಅಂತ್ಯಸಂಸ್ಕಾರ ನಡೆಯಲಿದೆ. ತಂದೆಯ ಅಂತಿಮ ಕಾರ್ಯ ಇಂದು ನಡೆಯುತ್ತಿದ್ದು ಈ ಕಾರಣದಿಂದ ಷರತ್ತುಬದ್ಧ ತಾತ್ಕಾಲಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

ಇಂದು ನಂದಳಿಕೆಯ ಮನೆಗೆ ಆಗಮಿಸಿದ ನಂತರ ತಂದೆಯ ಪಾರ್ಥೀವ ಶರೀರವನ್ನು ಕಾರ್ಕಳಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎನ್ನಲಾಗಿದೆ.

ಉಡುಪಿ ಮತ್ತು ದುಬೈನಲ್ಲಿ ಹೋಟೆಲ್‌ಗಳನ್ನು ಹೊಂದಿದ್ದ ಭಾಸ್ಕರ್ ಶೆಟ್ಟಿ ಅವರನ್ನು ಜುಲೈ 28, 2016 ರಂದು ಹತ್ಯೆ ಮಾಡಲಾಗಿತ್ತು. ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಹತ್ಯೆ ಮಾಡಿ, ನಂತರ ಶವವನ್ನು ನಿರಂಜನ್ ಭಟ್ ನ ನಂದಳಿಕೆಯ ಮನೆಗೆ ತರಲಾಗಿತ್ತು. ವೃತ್ತಿಯಲ್ಲಿ ಜ್ಯೋತಿಷಿಯೂ ಆಗಿರುವ ಆರೋಪಿ ನಿರಂಜನ್ ಭಟ್, ಮೃತ ಭಾಸ್ಕರ್ ಶೆಟ್ಟಿಯ ಶವವನ್ನು ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದನು.

ಮೃತ ಭಾಸ್ಕರ್ ಶೆಟ್ಟಿಯ ತಾಯಿ ತನ್ನ ಮಗನ ಬಗ್ಗೆ ಉಡುಪಿ ಪೊಲೀಸರಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಸ್ತಿಯ ವಿಚಾರದಲ್ಲಿ ದಂಪತಿಗಳ ನಡುವಿನ ಜಗಳ, ಆ ಬಗ್ಗೆ ಮೃತ ಉದ್ಯಮಿಯ ತಾಯಿ ನೀಡಿದ್ದ ಸುಳಿವು ಪೊಲೀಸರನ್ನು ಆರೋಪಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಕಾರಣವಾಗಿತ್ತು.

Advertisement

ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಪ್ರಮುಖ ಆರೋಪಿಯಾಗಿದ್ದು, ಪುತ್ರ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ನನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಹಾಯ ಮಾಡಿದ ಕಾರಣಕ್ಕೆ ನಿರಂಜನ್ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಎರಡು ತಿಂಗಳಲ್ಲಿ ಜಾಮೀನು ಪಡೆದು ಇವರಿಬ್ಬರು ಹೊರಬಂದಿದ್ದರು.

ರಾಜೇಶ್ವರಿ ಈಗಾಗಲೇ ಜಾಮೀನು ಪಡೆದು ಸೆರೆಮನೆಯಿಂದ ಹೊರಬಂದಿದ್ದಾರೆ. ಆದರೆ ನಿರಂಜನ್ ಭಟ್ ಹಲವಾರು ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ವಿಫಲವಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ನಿರಂಜನ್ ಭಟ್ ಸದ್ಯ ತಾತ್ಕಾಲಿಕ ಜಾಮೀನು ಪಡೆದು ಮನೆಗೆ ಬಂದಿದ್ದಾನೆ.

ನಿರಂಜನ್ ಭಟ್ ತಂದೆ ಅಂತ್ಯಕ್ರಿಯೆಗೆ ಆಗಮಿಸಿದ ರಾಜೇಶ್ವರಿ ಶೆಟ್ಟಿ : ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ತನ್ನ ಆಪ್ತ ನಿರಂಜನ್ ಭಟ್ ತಂದೆ ಅಂತ್ಯ ಸಂಸ್ಕಾರಕ್ಕೆ ಇಂದು ನಂದಳಿಕೆಗೆ ಆಗಮಿಸಿದ್ದರು. ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದ ಆಕೆ ನಂದಳಿಕೆಗೆ ಬಂದರೂ ಕಾರಿನಿಂದ ಇಳಿಯಲಿಲ್ಲ. ತನ್ನ ಬಾಡಿಗಾರ್ಡ್ ಗಳ ಜೊತೆಗೆ ಬಂದ ಆಕೆ ಯಾರನ್ನೂ ಬಳಿ ಸುಳಿಯಲು ಬಿಡಲಿಲ್ಲ ಎನ್ನಲಾಗಿದೆ. ಜನರು ಗಲಾಟೆ ಮಾಡುವ ಸಂಭವವಿದ್ದ ಕಾರಣ ಸೂಕ್ತ ರಕ್ಷಣೆಯೊಂದಿಗೆ ಬಂದಿದ್ದರು. ಭಟ್ ಮನೆಯ ಮುಂಭಾಗದ ಬಸ್ ಸ್ಟ್ಯಾಂಡ್ ನಲ್ಲೂ ಇಬ್ಬರು ಬಾಡಿ ಗಾರ್ಡ್ ಗಳು ಕಾವಲಿಗಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next