Advertisement

Udupi: ಶ್ವಾನದಳಕ್ಕೆ ಬೆಲ್ಜಿಯಂ ಮೆಲಿನೋಯಸ್‌!

03:20 PM Nov 06, 2024 | Team Udayavani |

ಉಡುಪಿ: ಉಡುಪಿ ಜಿಲ್ಲೆಯ ಪೊಲೀಸ್‌ ಇಲಾಖೆಯ ಶ್ವಾನದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಕ್ಯಾಪ್ಟನ್‌’ ಮತ್ತು ‘ಐಕಾನ್‌’ ಇತ್ತೀಚೆಗೆ ನಿವೃತ್ತಿಯಾಗಿದ್ದು, ಇದೀಗ ಎರಡು ಹೊಸ ಶ್ವಾನಗಳು ಸೇರ್ಪಡೆಗೊಂಡಿವೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಸೇವೆ ನೀಡುತ್ತಿರುವ ಬೆಲ್ಜಿಯಂ ಮೆಲಿನೋಯಸ್‌ ಜಾತಿಯ ನಾಯಿ ಒಂದಾದರೆ, ಇನ್ನೊಂದು ಲ್ಯಾಬ್ರೋಡರ್‌. ಎರಡೂ ನಾಯಿಗಳಿಗೆ ಇನ್ನೂ ನಾಮಕರಣ ಆಗಿಲ್ಲ!

Advertisement

ಇಸ್ರೇಲ್‌ ಹಾಗೂ ಅಮೆರಿಕ ಸಹಿತ ಮುಂದುವರಿದ ರಾಷ್ಟ್ರಗಳ ಸೇನೆಯಲ್ಲಿ ಕರಾಮತ್ತು ತೋರಿಸುತ್ತಿರುವ ಬೆಲ್ಜಿಯಂ ಮೆಲಿನೋಯಸ್‌ ತಳಿಯ ಶ್ವಾನ ಭಾರತೀಯ ಸೇನೆಯಲ್ಲಿಯೂ ಸೇವೆಯಲ್ಲಿದೆ. ಇತರ ಶ್ವಾನಗಳಿಗೆ ಹೋಲಿಸಿದರೆ ಅತೀ ಬುದ್ದಿವಂತಿಕೆ ಹಾಗೂ ಬಹಳಷ್ಟು ಚುರುಕುತನ ಹೊಂದಿದೆ.

ಚಾಂಪಿಯನ್‌ಗಳ ತಲೆಮಾರು!
ಉಡುಪಿಗೆ ಬಂದಿರುವ ಬೆಲ್ಜಿಯಂ ಮೆಲಿನೋಯಸ್‌ನ ಅಜ್ಜಿ ಭಾರತೀಯಳು. ಅಜ್ಜ ಬೆಲ್ಜಿಯಂ! ಇಬ್ಬರು ಕೂಡ ಕೆನೆಲ್‌ ಕ್ಲಬ್‌ ಆಫ್ ಇಂಡಿಯಾ (ಕೆಸಿಐ) ಚಾಂಪಿಯನ್‌ಗಳು. ತಂದೆ- ತಾಯಿ ಕೂಡಡ ಚಾಂಪಿಯನ್‌ಗಳೇ! ಚಿತ್ರದುರ್ಗದಿಂದ ಉಡುಪಿಗೆ ತರಲಾಗಿರುವ ಈ ನಾಯಿಯ ಅಜ್ಜಿ ಕೋಲಾರದಲ್ಲಿದೆ. ಅಜ್ಜ ಸಿಬಿಐ ಅಧಿಕಾರಿಯೊಬ್ಬರ ಮನೆಯಲ್ಲಿ ಸೇವೆ ನೀಡುತ್ತಿದೆಯಂತೆ!

ಯಾವ ವಾತಾವರಣಕ್ಕೂ ಹೊಂದಿಕೊಳ್ಳುತ್ತೆ
ಕೆಲವೊಂದು ಶ್ವಾನಗಳು ಎಲ್ಲ ವಾತಾವರಣಕ್ಕೆ ಸುಲಭದಲ್ಲಿ ಹೊಂದಿಕೊಳ್ಳುವುದಿಲ್ಲ. ಆದರೆ, ಬೆಲ್ಜಿಯಂ ಮೆಲಿನೋಯಸ್‌ ಇದಕ್ಕೆ ಅಪವಾದ. ಯಾವ ವಾತಾವರಣವೇ ಇರಲಿ, ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ನಿರ್ವಹಣೆಯೂ ಕಡಿಮೆ.
ಉಡುಪಿಯಲ್ಲಿ ಈ ಹಿಂದೆ ಡಾಬರ್‌ಮನ್‌, ಜರ್ಮನ್‌ ಶೆಫ‌ರ್ಡ್‌, ಲ್ಯಾಬೊಡಾರ್‌ ತಳಿಯ ಶ್ವಾನಗಳಿದ್ದವು. ಇವು ಹ್ಯಾಂಡ್ಲರ್‌ಗಳ ಮಾತು ಬಿಟ್ಟರೆ ಬೇರೆ ಯಾರ ಆದೇಶಗಳನ್ನೂ ಕೇಳುವುದಿಲ್ಲವಂತೆ.

ಬೆಲ್ಜಿಗೆ 4 ತಿಂಗಳು, ಲಾಬ್ರಿಗೆ 80 ದಿನ!
ಬೆಲ್ಜಿಯಂ ಮೆಲಿನೋಯಸ್‌ಗೆ 4 ತಿಂಗಳಾದರೆ ಐಕಾನ್‌ ಜಾಗಕ್ಕೆ ಬಂದಿರುವ ಲ್ಯಾಬ್ರಿಗೆ 80 ದಿನಗಳಷ್ಟೇ ತುಂಬಿವೆ. ಬೆಲ್ಜಿಯಂ ಮೆಲಿನೋಯಸ್‌ಗೆ ಹೋಲಿಸಿದರೆ ಇದು ಸ್ವಲ್ಪ ಮೃದು ಸ್ವಭಾವದ ಶ್ವಾನವಾಗಿದೆ. ಈ ತಳಿಯ ಹಲವು ಶ್ವಾನಗಳು ಈಗಾಗಲೇ ಇಲಾಖೆಯಲ್ಲಿ ಸೇವೆ ನೀಡಿವೆ. ಲ್ಯಾಬ್ರೊಡಾರ್‌ ಬಾಂಬ್‌ ಪತ್ತೆಯಲ್ಲಿ ಮೇಧಾವಿ.

Advertisement

ಶ್ವಾನಗಳಿಗೂ ಎಸಿ ಕೊಠಡಿ!
ಪೊಲೀಸ್‌ ಶ್ವಾನದಳದಲ್ಲಿ ಪ್ರಸ್ತುತ 4 ಶ್ವಾನಗಳಿದ್ದು, ಇದರ ವಾಸ್ತವ್ಯಕ್ಕಾಗಿ ಪ್ರತ್ಯೇಕ 4 ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಾದಕ ವ್ಯಸನಗಳ ಪತ್ತೆಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಎರಡು ಮೆಲಿನೋಯಸ್‌ ಶ್ವಾನಗಳನ್ನು ಇಲಾಖೆಗೆ ಸೇರಿಸುವ ಗುರಿಯನ್ನೂ ಇಲಾಖೆ ಹೊಂದಿದೆ. ಈಗಾಗಲೇ ಡಾಬರ್‌ಮನ್‌ ತಳಿಯ ಬ್ರೋನಿ ಹಾಗೂ ಸ್ನೆ„ಫ‌ರ್‌ ಹೆಸರಿನ ಶ್ವಾನಗಳು ಕರ್ತವ್ಯದಲ್ಲಿವೆ.

ಪ್ಲೇಸ್ಮೆಂಟ್‌ ಉಡುಪಿ, ಕಾರ್ಯಕ್ಷೇತ್ರ ಇಡೀ ಭಾರತ!
ಈಗ ಕರ್ತವ್ಯಕ್ಕೆ ಸೇರ್ಪಡೆಯಾಗಿರುವ ಎರಡು ಶ್ವಾನಗಳ ನೇಮಕಾತಿ ಮಾತ್ರ ಉಡುಪಿ! ವಿಐಪಿ ಭದ್ರತೆ, ಶೃಂಗ ಸಭೆ, ಗಡಿ ಭದ್ರತೆ ಸಹಿತ ದೇಶದ ಯಾವುದೇ ಭಾಗದಲ್ಲಿ ಘಟನೆಗಳು ನಡೆದರೂ ಅಲ್ಲಿಂದ ಆದೇಶ ಬಂದರೆ ಈ ಎರಡೂ ಶ್ವಾನಗಳೂ ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಸದಾ ಸನ್ನದ್ಧವಾಗಿರಲಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಗಳು, ಬೀಚ್‌ಗಳು, ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣ, ಜಾತ್ರೆ, ನಗರದ ಆಯಕಟ್ಟಿನ ಭಾಗಗಳಲ್ಲಿ ದಿನನಿತ್ಯದ ಕರ್ತವ್ಯ ಮಾಡುತ್ತದೆ. ಅಲ್ಲದೆ ಇಲಾಖೆಯ ಮೂಲಕ ನಡೆಸುವ ವಿವಿಧ ಅಣಕು ಕಾರ್ಯಾಚರಣೆಯಲ್ಲಿಯೂ ಪೊಲೀಸ್‌ ಶ್ವಾನಗಳು ಭಾಗವಹಿಸುತ್ತವೆ.

ನಿತ್ಯ ವ್ಯಾಯಾಮ, ಉತ್ತಮ ಆಹಾರ
ಮನುಷ್ಯರಂತೆ ಶ್ವಾನಗಳಿಗೂ ಪೊಲೀಸರು ದಿನನಿತ್ಯ ವಿವಿಧ ಬಗೆಯ ವ್ಯಾಯಾಮ ಮಾಡಿಸುತ್ತಾರೆ. ಓಟ, ವ್ಯಾಯಾಮ, ಕವಾಯತು ಜತೆಗೆ ವಿವಿಧ ಪ್ರಕಾರದ ಆಟಗಳನ್ನು ನಡೆಸುತ್ತಾರೆ. ತರಬೇತಿಯಲ್ಲಿಯೂ ಸಾಮಾನ್ಯ ತರಬೇತಿ ಹಾಗೂ ಉದ್ಯೋಗ ತರಬೇತಿ ಹೀಗೆ ಮಾಡಿಸಲಾಗುತ್ತದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ಸಿದ್ಧಪಡಿಸಲಾಗುತ್ತದೆ. ಆಹಾರವನ್ನು ಹ್ಯಾಂಡ್ಲರ್‌ಗಳೇ ಸಿದ್ಧಪಡಿಸುತ್ತಾರೆ. ಇದಕ್ಕೆ ವಾರಕ್ಕೆ ಒಂದು ಬಾರಿ ಸದೃಢ ಪ್ರಮಾಣ ಪತ್ರವನ್ನು ಪಶು ವೈದ್ಯಾಧಿಕಾರಿಗಳಿಂದ ಪಡೆದುಕೊಳ್ಳಬೇಕಾಗುತ್ತದೆ. ಶ್ವಾನಗಳಿಗೆ ಇನ್ಸೂರೆನ್ಸ್‌ ಕೂಡ ಮಾಡಿಸಲಾಗಿದೆ.

ಬೆಂಗಳೂರಲ್ಲಿ 6 ತಿಂಗಳ ತರಬೇತಿ
ಉಡುಪಿಗೆ ಆಗಮಿಸಿರುವ ಎರಡು ಶ್ವಾನಗಳಿಗೆ ಬೆಂಗಳೂರಿನ ಆಡುಗೋಳಿಯಲ್ಲಿ 6 ತಿಂಗಳ ಕಾಲ ತರಬೇತಿ ನೀಡಲಾಗುವುದು. ಎರಡಕ್ಕೂ ವಿಧ್ವಂಸಕ ಕೃತ್ಯ ಪತ್ತೆ, ಬಾಂಬ್‌ ಪತ್ತೆ ಸಹಿತ ಹಲವು ತರಬೇತಿಗಳನ್ನು ನೀಡಲಾಗುತ್ತದೆ. ಬೆಲ್ಜಿಯಂ ಮೆಲಿನೋಯಸ್‌ ಶ್ವಾನದೊಂದಿಗೆ ಹ್ಯಾಂಡ್ಲರ್‌ಗಳಾದ ಹರೀಶ್‌ ಪೂಜಾರಿ ಮತ್ತು ನಾರಾಯಣ ಹಾಗೂ ಲ್ಯಾಬ್ರೊಡಾರ್‌ ಶ್ವಾನದ ಹ್ಯಾಂಡ್ಲರ್‌ಗಳಾದ ಗಣೇಶ್‌ ಹಾಗೂ ರಘು ಅವರು ಕೂಡ ಪಾಲ್ಗೊಳ್ಳಲಿದ್ದಾರೆ.

ಶ್ವಾನ ಖರೀದಿಗೂ ಹಲವು ನಿಯಮ
ಪೊಲೀಸ್‌ ಇಲಾಖೆ ಶ್ವಾನ ಖರೀದಿ ಸಂದರ್ಭದಲ್ಲಿ ಹಲವಾರು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಮುಖ್ಯವಾಗಿ ಶ್ವಾನವು ತಂದೆ-ತಾಯಿಯ ಜತೆಯಲ್ಲಿರಬೇಕು. ಕನಿಷ್ಠ ಎರಡು ತಿಂಗಳ ಆಗಿರಬೇಕು. ಲಸಿಕೆ, ವೈದ್ಯಕೀಯ ದೃಢೀಕರಣ ಪತ್ರ ಇರಬೇಕು. ಶ್ವಾನ ಬೆಳೆದ ಸ್ಥಳ ಶುಚಿತ್ವದಿಂದ ಕೂಡಿರಬೇಕು. ಜತೆಗೆ ಅದರ ಅಂಗಗಳು, ಕೂದಲು ಸಹಜ ಸ್ಥಿತಿಯಲ್ಲಿರಬೇಕು.

ಎರಡು ಶ್ವಾನಗಳ ಸೇರ್ಪಡೆ; ತರಬೇತಿ ನೀಡುವ ಪ್ರಕ್ರಿಯೆ ಆರಂಭ
ಇತ್ತೀಚೆಗಷ್ಟೇ ಎರಡು ಶ್ವಾನಗಳು ನಿವೃತ್ತಿಯಾದ ಕಾರಣ ಮತ್ತೆ ಎರಡು ಶ್ವಾನಗಳು ಇಲಾಖೆಗೆ ಸೇರ್ಪಡೆಗೊಂಡಿವೆ. ಅದರಲ್ಲಿ ಒಂದು ಬೆಲ್ಜಿಯಂ ಮೆಲಿನೋಯಸ್‌ ಶ್ವಾನವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಇದೇ ತಳಿಯ ಎರಡು ಶ್ವಾನಗಳನ್ನು ಖರೀದಿಸುವ ಉದ್ದೇಶವನ್ನೂ ಹೊಂದಲಾಗಿದೆ. ಆಗಮಿಸಿರುವ ಎರಡು ಶ್ವಾನಗಳಿಗೆ ತರಬೇತಿ ನೀಡುವ ಪ್ರಕ್ರಿಯೆಗಳು ನಡೆಯುತ್ತಿವೆ.
-ತಿಮ್ಮಪ್ಪ ಗೌಡ, ಡಿವೈಎಸ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆೆ.

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next