ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ತಯಾರಿ ಆರಂಭಿಸಿವೆ. ಉಡುಪಿ, ಕುಂದಾಪುರ, ಕಾರ್ಕಳ, ಕಾಪು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸದ್ಯ ಆಡಳಿತಾರೂಢ ಬಿಜೆಪಿಯ ಶಾಸಕರಿದ್ದಾರೆ. ಬಿಜೆಪಿ ವಿಸ್ತಾರಕರ ಮೂಲಕ ಜಿಲ್ಲೆಯ ಎಲ್ಲ ಬೂತ್‌ಗಳಲ್ಲೂ ಈಗಾಗಲೇ ಸಂಘಟನಾತ್ಮಕ ಕಾರ್ಯ ಚುರುಕುಗೊಳಿಸಿದರೆ, ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಮೂಲಕ ಪ್ರತೀ ಮನೆಯನ್ನು ತಲುಪುವ ಪ್ರಯತ್ನ ನಡೆಸುತ್ತಿದೆ. ಉಭಯ ಪಕ್ಷಗಳಲ್ಲೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಕೂಗಿದೆ.
ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಪ್ರತಿನಿಧಿಸುತ್ತಿರುವ ಕಾರ್ಕಳದಲ್ಲಿ ಬಿಜೆಪಿಗೆ ಅಭ್ಯರ್ಥಿ ಬದಲಾವಣೆಯ ಪ್ರಶ್ನೆ ಉದ್ಭವಿಸದು. ಕಾಂಗ್ರೆಸ್‌ನಲ್ಲಿ ಹೊಸಬರಿಗೆ ಅವಕಾಶ ಸಿಗಲೂಬಹುದು. ಉಡುಪಿಯಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗಿರುವ ಅಭಿಪ್ರಾಯವಿದೆ. ಹಾಗಾಗಿ ಇಲ್ಲಿಯೂ ಅಭ್ಯರ್ಥಿ ಬದಲಾವಣೆ ಅನುಮಾನ. ಇನ್ನು ಕಾಂಗ್ರೆಸ್‌ನಿಂದ ಈ ಕ್ಷೇತ್ರಕ್ಕೆ ಯಾರು ಎಂಬ ಪ್ರಶ್ನೆ ಇದೆ. ಕಾರಣ, ಪ್ರಮೋದ್ ಮಧ್ವರಾಜ್‌ರ ಬಿಜೆಪಿಯತ್ತ ಗಮನದ ಕುರಿತೇ ವದಂತಿ ಹಬ್ಬಿದೆ. ಇತ್ತೀಚೆಗೆ ಅವರು ಮುಖ್ಯಮಂತ್ರಿಯವರನ್ನೂ ಭೇಟಿ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವುದು ಕಷ್ಟವೇನಲ್ಲ. ಅವರು ಪಕ್ಷ ತೊರೆದರೆ ಮಾತ್ರ ಹೊಸ ಅಭ್ಯರ್ಥಿ ಹುಡುಕಾಟ ನಡೆಸಬೇಕಾದೀತು. ಕಾಪು ಕ್ಷೇತ್ರದಲ್ಲಿ ಮೊಗವೀರ ಸಮುದಾಯದ ಮತಗಳು ನಿರ್ಣಾಯಕ.
ಹಾಗಾಗಿ ಬಿಜೆಪಿಯಿಂದ ಅದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಸಿಗಬಹುದು. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಆಕಾಂಕ್ಷಿಗಳಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ಇಡೀ ಜಿಲ್ಲೆಯ ಜಾತಿವಾರು ಲೆಕ್ಕಾಚಾರ ಗಮನಿಸುವಾಗ ಸಮುದಾಯವಾರು ಅಭ್ಯರ್ಥಿಗಳು ಬದಲಾಗಲೂಬಹುದು. ಕಾಂಗ್ರೆಸ್‌ನಿಂದ ಈ ಹಿಂದೆ ಸ್ಪರ್ಧಿಸಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಈಗಾಗಲೇ ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದಾರೆ. ಕುಂದಾಪುರದಲ್ಲಿ ಹಲವು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮತ್ತೆ ಅವಕಾಶ ಸಿಗಬಹುದೇ ಎಂಬ ಜಿಜ್ಞಾಸೆಯಿದೆ.
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯ ಹುಡುಕಾಟ ಆರಂಭವಾಗಿದೆ. ಎರಡೂ ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಆಶ್ಚರ್ಯವಿಲ್ಲ. ಬೈಂದೂರಿನಲ್ಲಿ ಕಾಂಗ್ರೆಸ್‌ನಲ್ಲಿ ಗೋಪಾಲ ಪೂಜಾರಿ ಹೆಸರು ಚಾಲ್ತಿಯಲ್ಲಿದೆ. ಬಿಜೆಪಿಯಲ್ಲಿ ಶಾಸಕ ಸುಕುಮಾರ ಶೆಟ್ಟಿಯವರ ಹೆಸರು ಮರುಸ್ಪರ್ಧೆಯ ಸಂದರ್ಭ ವಿಶ್ಲೇಷಣೆಗೆ ಒಳಗಾಗುವ ಸಾಧ್ಯತೆಯೂ ಇದೆ. ಜೆಡಿಎಸ್ ಮತ್ತಿತರ ಪಕ್ಷಗಳೂ ತಮ್ಮ ಬಲವರ್ಧನೆಗೆ ಸಂಘಟನೆಯಲ್ಲಿ ತೊಡಗಿವೆ.
-ರಾಜು ಖಾರ್ವಿ ಕೊಡೇರಿ