Advertisement

Udupi assembly constituency; ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಶಾಸಕರೇ ಬೆಂಗಾವಲು

04:05 PM Apr 20, 2023 | Team Udayavani |

ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಹುತೇಕ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಉಳಿದವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ನಾಲ್ಕು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಆದರೆ, ಮೂವರು ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ತಮಗೆ ಸೀಟು ಸಿಕ್ಕಿದಷ್ಟು ಖುಷಿಯಿಂದ ಪ್ರಚಾರ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇನ್ನೊಬ್ಬರು ಮಾತ್ರ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.

Advertisement

ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿದ್ದರಿಂದ ಅಲ್ಲಿ ಹೊಸ ಮುಖ ಪರಿಚಯಿಸಲಾಗಿದೆ. ಉಡುಪಿ ಮತ್ತು ಕಾಪುವಿನಲ್ಲೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡದೇ ಹೊಸಬರಿಗೆ ಅವಕಾಶ ಕಲ್ಪಿಸಲಾಗಿತ್ತು. ಉಡುಪಿ ಹಾಲಿ ಶಾಸಕರು ಟಿಕೆಟ್‌ ಕೈ ತಪ್ಪುವ ನಿರೀಕ್ಷೆಯಲ್ಲಿ ಇಲ್ಲದೇ ಇದ್ದರಿಂದ ಸ್ವಲ್ಪ ಮಟ್ಟಿನ ಅಸಮಾಧಾನ ಹೊರ ಹಾಕಿದರಾದರೂ ಒಂದೇ ದಿನದಲ್ಲಿ ಸಮಾಧಾನಿತರಾದರು. ಇನ್ನು ಕಾಪು ಶಾಸಕರು ಯಾವುದೇ ಅಸಮಾಧಾನ ಹೊರಹಾಕಿಲ್ಲ ಮತ್ತು ಟಿಕೆಟ್‌ ಹಂಚಿಕೆಯಾದ ಮಾರನೇ ದಿನವೇ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಬೈಂದೂರಿನ ಶಾಸಕರ ಮುನಿಸು ಇನ್ನೂ ಬಗೆಹರಿದಿಲ್ಲ. ಬಗೆಹರಿಸುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ, ರಾಜ್ಯಮಟ್ಟದ ವರಿಷ್ಠರು ಮಾತುಕತೆ ನಡೆಸುತ್ತಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿದ್ದರೂ ಅವರು ಪಕ್ಷ ಸೂಚಿಸಿರುವ ಅಭ್ಯರ್ಥಿಯೊಂದಿಗೆ ನಿತ್ಯ ಎಂಬಂತೆ ಚುನಾವಣೆ ಪ್ರಚಾರದಲ್ಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್‌, ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಕೂಡ ತಮ್ಮ ಪಕ್ಷದ ಅಭ್ಯರ್ಥಿಯೊಂದಿಗೆ ಸಂಚಾರ, ಸಭೆ ನಡೆಸುತ್ತಿದ್ದಾರೆ. ಇನ್ನು ಬೈಂದೂರಿನ ಶಾಸಕ ಸುಕುಮಾರ ಶೆಟ್ಟಿಯವರು ಸಾರ್ವಜನಿಕರ ಸಮಾರಂಭಗಳಲ್ಲಿ ಅಥವಾ ಪಕ್ಷದ ಅಭ್ಯರ್ಥಿಯ ಅಧಿಕೃತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಎ. 20ರಂದು ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಇರುವುದರಿಂದ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಬರುವವರಿದ್ದಾರೆ. ಹಾಲಿ ಶಾಸಕರ ನಡೆ ಇನ್ನೂ ಕುತೂಹಲದಿಂದಲೇ ಕೂಡಿದೆ. ಕಾಂಗ್ರೆಸ್‌ ಉಡುಪಿ ಕ್ಷೇತ್ರದ ಬಂಡಾಯ ಶಮನಕ್ಕೆ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ. ಕಾರ್ಕಳದಲ್ಲಿ ಪ್ರಚಾರ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ. ಕಾಪು, ಬೈಂದೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಈಗಾಗಲೇ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಕುಂದಾಪುರದಲ್ಲಿ ಪ್ರಚಾರದ ಸದ್ದು ಜೋರಾಗಿಯೇ ಇದೆ.

ಶಾಸಕರೇ ಸಾರಥಿ
ಹಾಲಿ ಶಾಸಕರಲ್ಲಿ ಮೂವರು ಪಕ್ಷದ ಅಭ್ಯರ್ಥಿಗಳ ಪರ ನಿಂತು ನಿತ್ಯವೂ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಭೆಯ ಮುಂದಾಳತ್ವ ವಹಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ
ಕಾರ್ಯದ ಜತೆಗೆ ಕೇಂದ್ರ, ರಾಜ್ಯ ಸರಕಾರದ ಸಾಧನೆಯನ್ನು ಸಾರುತ್ತಿದ್ದಾರೆ.

Advertisement

ಶಾಸಕರು ತಾವೇ ಅಭ್ಯರ್ಥಿಗಳು ಎಂಬ ನೆಲೆಯಲ್ಲಿ ಅಧಿಕೃತ ಅಭ್ಯರ್ಥಿಗಳೊಂದಿಗೆ ಜನರ ಬಳಿಗೆ ಹೋಗುತ್ತಿದ್ದಾರೆ. ಒಟ್ಟಿನಲ್ಲಿ
ಅಭ್ಯರ್ಥಿಗಳಿಗೆ ಹಾಲಿ ಶಾಸಕರೇ (ಬೈಂದೂರು ಹೊರತುಪಡಿಸಿ) ಬೆಂಗಾವಲಾಗಿ ನಿಂತಂತೆ  ಕಾಣುತ್ತಿದೆ. ಕಾರ್ಕಳದಲ್ಲಿ ಶಾಸಕರೇ (ಸಚಿವರು) ಅಭ್ಯರ್ಥಿ.

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next