ಉಡುಪಿ: ಮುಂಬಯಿಯಿಂದ ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೋರ್ವರಿಗೆ ಶಸ್ತ್ರಾಸ್ತ್ರ ತೋರಿಸಿದ ನಾಲ್ವರು ದರೋಡೆಕೋರರು 1.28 ಕೋ.ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ ಘಟನೆ ಸುರತ್ಕಲ್ ರೈಲು ನಿಲ್ದಾಣ ಸಮೀಪ ಸೋಮವಾರ ಮುಂಜಾನೆ 6.30ರ ಸುಮಾರಿಗೆ ಸಂಭವಿಸಿದೆ.
ಮುಂಬಯಿಯ ಜುವೆಲ್ಲರಿ ಕಂಪೆನಿಯ ನೌಕರ ನಾಗಿರುವ ರಾಜೇಂದ್ರ ಸಿಂಗ್ (38) ದರೋಡೆಗೆ ಒಳಗಾದವರು. ಅವರಲ್ಲಿದ್ದ 1.28 ಕೋ.ರೂ.ಗೂ ಅಧಿಕ ಮೌಲ್ಯದ ಚಿನ್ನದ ಬಳೆಗಳಿದ್ದ ಸೂಟ್‌ಕೇಸ್, ಮೊಬೈಲನ್ನು ದರೋಡೆಕೋರರು ದೋಚಿಕೊಂಡು ಹೋಗಿದ್ದಾರೆ.
ರಾಜೇಂದ್ರ ಸಿಂಗ್ ಅವರು ರೈಲಿನ ಸ್ಲಿàಪರ್ ಕ್ಲಾಸ್‌ನ ಎಸ್-7 ಬೋಗಿಯಲ್ಲಿ ಪ್ರಯಾಣಿಸು ತ್ತಿದ್ದಾಗ ನಾಲ್ವರು ದರೋಡೆಕೋರರು ಪಿಸ್ತೂಲ್ ಹಾಗೂ ಚೂರಿ ತೋರಿಸಿ ಬೆದರಿಸಿ ಅವರ ಬಳಿಯಿದ್ದ ಚಿನ್ನದ ಬಳೆ ಹೊಂದಿದ್ದ ಸೂಟ್‌ಕೇಸನ್ನು ದೋಚಿದ್ದು, ಬಳಿಕ ಸುರತ್ಕಲ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಇಳಿದು ಪರಾರಿಯಾಗಿದ್ದಾರೆ.
ಘಟನೆ ವಿವರ: ಪೊಲೀಸ್ ಮೂಲಗಳ ಪ್ರಕಾರ ಅಧಿಕೃತ ಚಿನ್ನ ಸಾಗಾಟಗಾರನಾಗಿರುವ ರಾಜೇಂದ್ರ ಸಿಂಗ್ ಅವರ ಹೆಸರಲ್ಲಿ ಮುಂಬಯಿಯಲ್ಲಿ ನೋಂದಾಯಿತ ಕಚೇರಿಯಿದ್ದು, ಅವರು ಪನ್ವೇಲ್ ನಿಂದ ತಿರುವನಂತಪುರಕ್ಕೆ 4.100 ಕೆ.ಜಿ. ಚಿನ್ನದ ಬಳೆಗಳನ್ನು ಸೂಟ್‌ಕೇಸ್‌ನಲ್ಲಿ ಕೊಂಡೊಯ್ಯುತ್ತಿದ್ದರು. ಅದನ್ನು ಚೈನ್‌ನಲ್ಲಿ ಲಾಕ್ ಮಾಡಿ ಮಲಗಿದ್ದರು. ಸೋಮವಾರ ಬೆಳಗ್ಗಿನ ಜಾವ ಸುರತ್ಕಲ್ ರೈಲು ನಿಲ್ದಾಣದ ಸಮೀಪ 6.35ರಿಂದ 6.40ರ ಮಧ್ಯಾವಧಿಯಲ್ಲಿ ಹಿಂದಿ ಮಾತನಾಡುತ್ತಿದ್ದ ದರೋಡೆಕೋರರು ಸಿಂಗ್ ಅವರನ್ನು ಬಡಿದು ಎಚ್ಚರಿಸಿ ಚಿನ್ನದ ಬಳೆಯಿದ್ದ ಸೂಟ್‌ಕೇಸ್ ಅನ್ನು ಸೆಳೆದುಕೊಂಡಿದ್ದಾರೆ.
ಸೂಟ್‌ಕೇಸ್ ಎಳೆದ ಅನಂತರ ಮೊದಲಿಗೆ ಇಬ್ಬರು ರೈಲಿನ ಕಂಪಾರ್ಟ್‌ಮೆಂಟ್‌ನ ಬಾಗಿಲಿ ನತ್ತ ಓಡಿದರೆ, ಮತ್ತಿಬ್ಬರು ರಾಜೇಂದ್ರ ಅವರಿಗೆ ಪಿಸ್ತೂಲ್ ಹಾಗೂ ಚೂರಿ ಹಿಡಿದು ಬೊಬ್ಬೆ ಹಾಕ ದಂತೆ ನೋಡಿಕೊಂಡಿದ್ದು, ಸುರತ್ಕಲ್ ನಿಲ್ದಾಣ ಬರುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿ ಯಾಗಿದ್ದಾರೆ. ಘಟನೆಯಿಂದ ದಂಗಾಗಿದ್ದ ರಾಜೇಂದ್ರ ಅವರು ಮಂಗಳೂರಿನ ನಿಲ್ದಾಣದಲ್ಲಿ ಇಳಿದು ರೈಲ್ವೇ ಪೊಲೀಸರಿಗೆ ತಿಳಿಸಿದ್ದು, ಬಳಿಕ ಪಡುಬಿದ್ರಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಎಳೆದಾಡುವ ಭರದಲ್ಲಿ ರಾಜೇಂದ್ರ ಸಿಂಗ್ ಅವರಿಗೆ ಗಾಯಗಳಾಗಿದ್ದು, ಚೇತರಿಸಿಕೊಂಡಿದ್ದಾರೆ.
3 ತನಿಖಾ ತಂಡ
ದರೋಡೆ ಪ್ರಕರಣ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗಾಗಿ ಕಾರ್ಕಳ ಉಪವಿಭಾಗದ ಎಎಸ್‌ಪಿ ರಿಷಿಕೇಶ್ ಸೋನಾವನೆ ಅವರ ನೇತೃತ್ವದಲ್ಲಿ 3 ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಂಜೀವ್ ಎಂ. ಪಾಟೀಲ್ ಅವರು ತಿಳಿಸಿದ್ದಾರೆ.
ತಿಳಿದವರಿಂದ ಕೃತ್ಯ?
ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಂದ ಭಾರೀ ನಗ, ನಗದು ಕಳವುಗೈದು ಪರಾರಿಯಾಗುವ ಘಟನೆಗಳು ಹೆಚ್ಚುತ್ತಿವೆ. ಈ ಪ್ರಕರಣ ದಲ್ಲಿನ ಆರೋಪಿಗಳು ಹಿಂದಿಯಲ್ಲಿಯೇ ವ್ಯವಹರಿಸು ತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ. ಹಾಗಾಗಿ ದರೋಡೆಕೋರರು ಮುಂಬಯಿಯಿಂದಲೇ ಆ ವ್ಯಕ್ತಿ ಯನ್ನು ಬೆನ್ನತ್ತಿಕೊಂಡು ಬಂದಿರುವ ಸಾಧ್ಯತೆಯಿದೆ. ಇದರ ಹಿಂದೆ ವ್ಯವಸ್ಥಿತ ಜಾಲದ ಸಂಚು ಇರುವ ಕುರಿತು ಅನುಮಾನ ವ್ಯಕ್ತವಾಗಿವೆ. ಅದಲ್ಲದೆ ರಾಜೇಂದ್ರ ಸಿಂಗ್ ಅವರ ವ್ಯವಹಾರದ ಬಗ್ಗೆ ತಿಳಿದವರೇ ಕೃತ್ಯ ಮಾಡಿರಬಹುದಾದ ಸಂದೇಹವೂ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.