Advertisement
ಶ್ರೀಕೃಷ್ಣನ ಸನ್ನಿಧಿಯಲ್ಲಿ ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ನಡೆಸುವ ಅಕ್ಕಿ ಮುಹೂರ್ತವನ್ನು ನಡೆಸಿದರು. ಅನ್ನಸಂತರ್ಪಣೆಗೆ ಬೇಕಾದ ಸಿದ್ಧತೆಯ ಸಂಕೇತ ಇದಾಗಿದೆ. ಇದೇ ವೇಳೆ ರಥಬೀದಿಗೆ ಅನತಿ ದೂರದಲ್ಲಿರುವ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 120ನೆಯ ಭಜನ ಸಪ್ತಾಹ ಮಹೋತ್ಸವ ಶುಭಾರಂಭಗೊಂಡಿತು. ವಾರಪೂರ್ತಿ ಇಲ್ಲಿ ನಾಮ ಸಂಕೀರ್ತನೆ, ತಾಳದ ಸದ್ದು ನಡೆಯುತ್ತಿರುತ್ತವೆ. ಇಲ್ಲಿನ ಸಪ್ತಾಹದಲ್ಲಿ ವಿಶೇಷ ಪೂಜೆಗೊಳ್ಳುವುದು ಪಂಢರಪುರದ ವಿಟ್ಟಲ ರುಖುಮಾಯಿ. ಈ ನಾದಸಂಕೀರ್ತನೆಯ ಸಪ್ತಾಹ ಉತ್ಸವವನ್ನು ಕಾಶೀ ಮಠದ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
Related Articles
Advertisement
ಭಜನೆ ಮಹತ್ವ ಭಜನ ಸಪ್ತಾಹ ಆರಂಭಗೊಂಡ ಹಿನ್ನೆಲೆಯಲ್ಲಿ ಭಜನೆ/ ಭಗವಂತನ ನಾಮಸಂಕೀರ್ತನೆ ಮಹತ್ವವನ್ನು ಕಾಶೀ ಮಠಾಧೀಶರು ಮತ್ತು ಪೇಜಾವರ ಮಠಾಧೀಶರು ಹೀಗೆ ಉಭಯ ಶ್ರೀಗಳು ವೆಂಕಟರಮಣ ದೇವಸ್ಥಾನದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನಡೆದ ಸಭೆಯಲ್ಲಿ ಸಾರಿದರು. ಭಗವಂತ ಭಕ್ತಿಗೆ ಮಾತ್ರ ಒಲಿಯುತ್ತಾನೆ. ಭಗವಂತ ಮತ್ತು ಭಕ್ತರ ನಡುವಿನ ಕೊಂಡಿ ಭಕ್ತಿ. ಭಜನೆಯಲ್ಲಿ ಮಾತ್ರ ಭಗವಂತ ಮತ್ತು ಭಕ್ತರ ನಡುವೆ ಯಾವುದೇ ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ, ನೇರ ಸಂವಹನ ಸಾಧ್ಯ. ಭಕ್ತರ ಒಗ್ಗೂಡುವಿಕೆಯೂ ಸಾಧ್ಯ. ಏಕೆಂದರೆ ಒಬ್ಬರೇ ಹಾಡಿದರೆ ಅದು ಹಾಡುಗಾರಿಕೆ ಆಗುತ್ತದೆ. ಎಲ್ಲರು ಜತೆಗೂಡಿ ಹಾಡಿದರೆ ಭಜನೆ ಆಗುತ್ತದೆ ಎಂದು ಶ್ರೀವಿಶ್ವಪ್ರಸನ್ನತೀರ್ಥರು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ನೂತನ ದೀಪಸ್ತಂಭವನ್ನು ಮತ್ತು ಸಮಾರಾಧನೆಗಾಗಿ ನಿರ್ಮಿಸಿದ ಪಾತ್ರೆಗಳನ್ನು ಸ್ವಾಮೀಜಿ ದೇವರಿಗೆ ಸಮರ್ಪಿಸಿದರು.
ಕೃಷ್ಣಾಪುರ ಮಠದಲ್ಲಿ ಪೂಜೆ ಮುಗಿಸಿ ಅಕ್ಕಿ ಮುಡಿಯ ಮೆರವಣಿಗೆಯಲ್ಲಿ ಸಾಗಿದ ಶ್ರೀವಿದ್ಯಾಸಾಗರತೀರ್ಥರು ಚಂದ್ರಮೌಳೀಶ್ವರ, ಅನಂತೇಶ್ವರ, ಕೃಷ್ಣ- ಮುಖ್ಯಪ್ರಾಣರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ಕೃಷ್ಣಾಪುರ ಮಠದಲ್ಲಿ ಹಾಕಿದ ಚಿನ್ನದ ಮಂಟಪದಲ್ಲಿ ಅಕ್ಕಿಮುಡಿ ಇರಿಸಿ ಮುಹೂರ್ತ ನಡೆಸಿದರು. ಅನ್ನದಾನಕ್ಕೆ ಮಹತ್ವ ಇರುವುದರಿಂದ ಇದಕ್ಕಾಗಿ ಸಂಗ್ರಹಿಸುವ ಅಕ್ಕಿ ಮುಹೂರ್ತಕ್ಕೂ ಮಹತ್ವವಿದೆ ಎಂದು ಕೃಷ್ಣಾಪುರ ಶ್ರೀಗಳು ಹೇಳಿದರು. ಮನಸ್ಸಿನ ಶುದ್ಧತೆಗೆ ಭಜನೆ ಕಾರಣ
ಗೌಡ ಸಾರಸ್ವತ ಬ್ರಾಹ್ಮಣರು ಮೂಲತಃ ಕಾಶ್ಮೀರದವರು/ ಉತ್ತರ ಭಾರತದವರು. ಆದರೆ ನಮ್ಮ ಪೂರ್ವಿಕರು ವೆಂಕಟರಮಣನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಭಜನ ಸಪ್ತಾಹಕ್ಕೆ 120 ವರ್ಷಗಳ ಇತಿಹಾಸವಿದೆ. “ಕಲಿಯುಗದಲ್ಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು…’, “ಹರಿಭಜನೆ ಮಾಡೋ…’ ಎಂದು ದಾಸರು ಹೇಳಿದ್ದಾರೆ. ನಾಮ ಸಂಕೀರ್ತನೆ ಪಾಪನಾಶಕ ಎಂದು ವಾದಿರಾಜಸ್ವಾಮಿಗಳು ಹೇಳಿದ್ದಾರೆ. ಬಂಧನಕ್ಕೂ, ಮೋಕ್ಷಕ್ಕೂ ಮನಸ್ಸೇಕಾರಣ. ಮನಸ್ಸಿನ ಶುದ್ಧತೆಗೆ ಭಜನೆ ಕಾರಣವಾಗುತ್ತದೆ ಎಂದು ಶ್ರೀಸಂಯಮೀಂದ್ರತೀರ್ಥರು ಬಣ್ಣಿಸಿದರು.