ಉಡುಪಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆಗಳು ದತ್ತು ತೆಗೆದುಕೊಳ್ಳುವಂತೆ ನಾವು ವಿನಂತಿ ಮಾಡಲಿದ್ದೇವೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಅವರು ರವಿವಾರ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಷ್ಟೋ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಉಡುಪಿಗೆ ಸಮೀಪದ ಮಲ್ಪೆಯ ಪಡುಕರೆ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ವೈದ್ಯರೇ ಇಲ್ಲ. ಗ್ರಾಮೀಣ ಭಾಗದಲ್ಲಿ ಇಂತಹ ಸಮಸ್ಯೆ ಬಹಳಷ್ಟು ಇದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಂದೊಂದು ಪ್ರಾಥಮಿಕ ಆರೋಗ್ಯವನ್ನು ದತ್ತು ತೆಗೆದುಕೊಂಡು ನಿಮ್ಮ ಒಬ್ಬರು ವೈದ್ಯರ ಸೇವೆಯನ್ನು ಅಲ್ಲಿ ನೀಡಿದರೂ ಸಾಕು. ಬಹಳಷ್ಟು ಬಡವರಿಗೆ ಅನುಕೂಲವಾಗುತ್ತದೆ ಈ ಕುರಿತು ಮೊನ್ನೆ ನಡೆದ ಜಿಲ್ಲಾ ಸರ್ಜನ್ ಮತ್ತು ವೈದ್ಯಾಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲೂ ಈ ಕುರಿತು ಪ್ರಸ್ತಾಪ ಮಾಡಿದ್ದೇನೆ ಎಂದರು.
ಈ ಸಂದರ್ಭ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಡಾ| ವೆಂಕಟಗಿರಿ ರಾವ್ ಎ. ಕೆ., ಡಾ| ರಮೇಶ್ ರಾವ್, ಡಾ| ನಿತ್ಯಾನಂದ ನಾಯಕ್, ಡಾ| ನೀನಾ ರಾಣಿ ಹೆಗ್ಡೆ , ಡಾ| ರಾಜೇಶ್ವರಿ ಇವರನ್ನು ಸಮ್ಮಾನಿಸಲಾಯಿತು. ನೂತನ ಶಾಸಕರಾಗಿ ಆಯ್ಕೆಯಾದ ರಘುಪತಿ ಭಟ್ ಅವರನ್ನು ಗೌರವಿಸಲಾಯಿತು.
ಹಿರಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಪ್ರೊ| ಎ. ರಾಜಾ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ.ಎಸ್ ಚಂದ್ರಶೇಖರ್ ಸ್ವಾಗತಿಸಿ, ಪ್ರಕಾಶ್ ಟಿ. ಕೆ. ವಂದಿಸಿ, ಡಿಯಾಗೋ ಕ್ವಾರ್ಡಸ್ ನಿರೂಪಿಸಿದರು.
ಮಕ್ಕಳ ಆಸ್ಪತ್ರೆಗೆ ಸಂಪೂರ್ಣ ಖಾಸಗಿ ನಿರ್ವಹಣೆ ಸಲ್ಲ
ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣ ಖಾಸಗಿಯವರು ನಿರ್ವಹಿಸುವುದು ನನಗೆ ಸರಿ ಕಾಣುವುದಿಲ್ಲ. ಮುಂದಿನ ದಿನಗಳಲ್ಲಿ ಇದು ಗೊಂದಲಕ್ಕೆ ಎಡೆ ಮಾಡುತ್ತದೆ. ಹಾಜಿ ಅಬ್ದುಲ್ಲಾ ಸಾಹೇಬರು ಈ ಆಸ್ಪತ್ರೆ ಸಂಪೂರ್ಣ ಧರ್ಮಾಸ್ಪತ್ರೆಯಾಗಿರಬೇಕೆಂದು ದಾನ ಪತ್ರ ನೀಡಿದ್ದರು. ಆದರೆ ಹಿಂದಿನ ಸರಕಾರ ಈ ಕುರಿತು ತಪ್ಪನ್ನು ಎಸಗಿದ್ದಾರೆ. ಈ ತಪ್ಪನ್ನು ಈಗಿನ ಸರಕಾರ ಸರಿಪಡಿಸಿಕೊಳ್ಳಬೇಕು
– ರಘುಪತಿ ಭಟ್,ಶಾಸಕ