Advertisement

ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳದ ರುಚಿ

10:45 PM Jan 14, 2020 | mahesh |

ಕಟಪಾಡಿ: ಸಂತ ಶ್ರೇಷ್ಠ ಶ್ರೀ ವಾದಿರಾಜ ಅನುಗ್ರಹೀತ ಮಟ್ಟುಗುಳ್ಳ ಈ ಬಾರಿಯ ಪರ್ಯಾಯಕ್ಕೂ ಹೊರೆಕಾಣಿಕೆಯಾಗಿ ಸಮರ್ಪಣೆಯಾಗಲಿದೆ. ಕೋಟೆ ಗ್ರಾಮದ ಮಟ್ಟು ಪ್ರದೇಶದ ಬೆಳೆಗಾರರು ಇದನ್ನು ಬೆಳೆಯುತ್ತಿದ್ದು ಸೇವಾ ಕಾಣಿಕೆ ನೀಡಲಿದ್ದಾರೆ. ಸುಮಾರು 3 ಸಾವಿರ ಕಿಲೋ ಮಟ್ಟುಗುಳ್ಳ ಸಮರ್ಪಣೆಯಾಗಲಿದೆ. ಈ ಬಾರಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೂ ಕಾಣಿಕೆ ನೀಡಲು ಬೆಳೆಗಾರರು ಸಿದ್ಧತೆ ನಡೆಸಿದ್ದಾರೆ.

Advertisement

2018ರಲ್ಲಿ 3800 ಕಿಲೋ
ಪಲಿಮಾರು ಪರ್ಯಾಯ ಸಂದರ್ಭ 3800 ಕಿಲೋ ಮಟ್ಟುಗುಳ್ಳ ಕಾಣಿಕೆ ರೂಪದಲ್ಲಿ ನೀಡಲ್ಪಟ್ಟಿತ್ತು. 2016ರ ಪರ್ಯಾಯದ ಸಂದರ್ಭ ಗುಳ್ಳ ಬೆಳೆ ಅಭಾವವಿದ್ದು 2300 ಕಿಲೋ ಸಂದಾಯವಾಗಿತ್ತು. 2014ರಲ್ಲಿ 3000 ಕಿಲೋ ನೀಡಲಾಗಿತ್ತು. ಈ ಬಾರಿ ಬೆಳೆಗಾರರ ಸಂಘದ ಮೂಲಕ 95 ಬೆಳೆಗಾರರು ಬೆಳೆದ ತಲಾ 25-30 ಕಿಲೋ ಮತ್ತು ಇತರ ಸೇವಾರ್ಥಿಗಳ ಸಹಕಾರದಿಂದ ಒಟ್ಟು 3000 ಕಿಲೋ ಮಟ್ಟುಗುಳ್ಳ ಸಂದಾಯವಾಗಲಿದೆ. ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ವಿ. ಬಂಗೇರ ಬಂಗೇರ ಮಟ್ಟು, ಇತರ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಸೇರಿಕೊಂಡು ಈ ಬಾರಿಯ ಮೆರವಣಿಗೆ ನಡೆಯಲಿದೆ.

ವಾಡಿಕೆಯಂತೆ ಸಮರ್ಪಣೆ
ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀವಾದಿರಾಜ ಯತಿಗಳು ಅನುಗ್ರಹಿಸಿ ಕೊಟ್ಟ ಮುಷ್ಟಿ ಬೀಜದಿಂದ ಸೃಷ್ಟಿಯಾದ ಮಟ್ಟುಗುಳ್ಳ ಎನ್ನುವ ಶ್ರೇಷ್ಠತೆ ಇದಕ್ಕಿದೆ. ಹಾಗಾಗಿ ಮಟ್ಟುಗುಳ್ಳವನ್ನು ವಾಡಿಕೆಯಂತೆ ಶ್ರೀಕೃಷ್ಣಮಠಕ್ಕೆ ಅರ್ಪಿಸಿ ಕೃತಾರ್ಥರಾಗುತ್ತಾರೆ. ವರ್ಷಂಪ್ರತಿ ಮಕರಸಂಕ್ರಾಂತಿ ಉತ್ಸವದ ವೇಳೆ ಬೆಳೆ ಸಮರ್ಪಣೆಯಾಗುತ್ತದೆ. ಅದೇ ರೀತಿ ಪರ್ಯಾಯದ ಸಂದರ್ಭ ಹೊರೆಕಾಣಿಕೆ ರೂಪದಲ್ಲಿ ಬೆಳೆಗಳನ್ನು ಗ್ರಾಮಸ್ಥರು ಸಮರ್ಪಿಸಿ ಧನ್ಯತೆ ಮೆರೆಯುತ್ತಾರೆ.

125 ಎಕರೆ ಪ್ರದೇಶದಲ್ಲಿ ಬೆಳೆ
ಮಟ್ಟು ಗ್ರಾಮದಿಂದ ಕೈಪುಂಜಾಲುವರೆಗಿನ ಸುಮಾರು 125 ಎಕರೆ ಪ್ರದೇಶದ ಗದ್ದೆಯ ಮಟ್ಟುಗುಳ್ಳ ಈ ಬಾರಿ ಮಟ್ಟು ಬೆಳೆಗಾರರ ಸಂಘಕ್ಕೆ ಬಂದು ಗ್ರೇಡಿಂಗ್‌ ಆಗಿ ಸ್ಟಿಕ್ಕರ್‌ ರಹಿತವಾಗಿ ಹೊರೆಕಾಣಿಕೆಯ ರೂಪದಲ್ಲಿ ಜ.15ರಂದು ಸಮರ್ಪಿಸಲಾಗುತ್ತಿದೆ ಎಂದು ವ್ಯವಸ್ಥಾಪಕ ಲಕ್ಷ್ಮಣ್‌ ಮಟ್ಟು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next